ಬೆಳಗಾವಿ: ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ ಪೋಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಸವದತ್ತಿ ಪೊಲೀಸ್ ಠಾಣೆಯಲ್ಲಿ 2021 ರಲ್ಲಿ ಅಪ್ರಾಪ್ತೆಯ ಅಪಹರಣ ಮತ್ತು ಅತ್ಯಾಚಾರದ ಬಗ್ಗೆ ಬಾಲಕಿಯ ತಂದೆ ನೀಡಿದ್ದ ದೂರಿನಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದ ಸವದತ್ತಿ ಪೊಲೀಸರು, ಮಂಗಳೂರಿನಲ್ಲಿ ಬಾಲಕಿಯನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದರು.

ಪ್ರಕರಣದ ಆರೋಪಿ ಸವದತ್ತಿ ತಾಲೂಕು ಉಗರಗೋಳದ ಹುಲಿಗೆಪ್ಪ ಶಿವಲಿಂಗಪ್ಪ ವಡ್ಡರ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದ್ದು ಅಂದು ತನಿಖಾಧಿಕಾರಿಯಾಗಿದ್ದ ಮಂಜುನಾಥ ನಡುವಿನಮನಿ ಅವರು ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು ಇದೀಗ ಹುಲಿಗಪ್ಪ ವಡ್ಡರ್ ನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10,000 ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಅಪ್ರಾಪ್ತೆಗೆ ಒಂದು ಲಕ್ಷ ರೂ. ಪರಿಹಾರ ನೀಡಲು ನ್ಯಾಯಾಲಯ ಸೂಚಿಸಿದೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.