ನವದೆಹಲಿ: ನಬಾರ್ಡ್ ನೀಡುವ ಸಾಲದ ಮೊತ್ತದಲ್ಲಿ ಅರ್ಧದಷ್ಟು ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕುಗಳಿಗೆ ಹೋಗಬೇಕಾಗುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲಿ 10 ರಿಂದ 12 % ಬಡ್ಡಿ ಹಾಕುತ್ತಾರೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಅವರು ಇಂದು ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಬಗ್ಗೆ ಪ್ರಧಾನಮಂತ್ರಿ, ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದು, ಇದನ್ನು ಆರ್.ಬಿ.ಐ ಒಪ್ಪಿಲ್ಲ ಎಂದು ಸಚಿವರು ಉತ್ತರವನ್ನೂ ಬರೆದಿದ್ದಾರೆ. ನಬಾರ್ಡ್ ಕೇಂದ್ರ ಸರ್ಕಾರದ ಕೆಳೆಗೆ ಕಾರ್ಯನಿರ್ವಹಿಸುತ್ತಿದೆ. ಕೇಂದ್ರ ಸಚಿವರೇ ಅಸಹಾಯಕತೆಯನು ವ್ಯಕ್ತಪಡಿಸಿದರೆ ಹೇಗೆ? ಎಂದರು.
ನಬಾರ್ಡ್ ನಲ್ಲಿ ಕಳೆದ ವರ್ಷ 5600 ಕೋಟಿ ರೂ.ಗಳನ್ನು ಅಲ್ಪಾವಧಿ ಸಾಲಕ್ಕಾಗಿ ನೀಡಲಾಗಿತ್ತು ಈ ವರ್ಷ 2340 ಕೊಟಿ ರೂ.ಗಳನ್ನು ನೀಡಿದ್ದಾರೆ. 3220 ಕೋಟಿ ರೂ.ಗಳನ್ನು ಕಡಿತಗೊಳಿಸಲಾಗಿದೆ. 58% ರಷ್ಟು ಕಡಿಮೆ ಮಾಡಿರುವುದು ರೈತರಿಗೆ ಮಾಡಿರುವ ದ್ರೋಹ. ನಬಾರ್ಡ್ 4.50% ಬಡ್ಡಿ ದರದಲ್ಲಿ ಸಾಲ ಕೊಡುತ್ತಾರೆ. 5 ವರ್ಷಗಳ ಅಂಕಿಅಂಶಗಳನ್ನು ತೆಗೆದು ನೋಡಿದರೆ 5000 ಕೋಟಿ ರೂ.ಗಳಿದೆ. ಸಾಲ ಕೊಡುವುದು ಯಾವಾಗಲೂ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಎಲ್ಲಾ ರಾಜ್ಯಗಳಿಗೂ ಕಡಿತ ಮಾಡಲಾಗಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ವಿವರಿಸಲಾಗಿದೆ. ಆರು ವರ್ಷಗಳಿಂದ ಜಾಸ್ತಿ ಕೊಟ್ಟಿದ್ದು, ಈಗ ಕಡಿಮೆ ಮಾಡಿದರೆ ಹೇಗೆ? ನಮ್ಮ ಸರ್ಕಾರದ ವತಿಯಿಂದ 5 ಲಕ್ಷದವರೆಗೆ ಬಡ್ಡಿರಹಿತವಾಗಿ ಸಾಲ ನೀಡಲಾಗುತ್ತಿದೆ. 4.50% ಬಡ್ಡಿ ಕೊಡುವುದು ನಮ್ಮ ಸರ್ಕಾರ ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲವನ್ನು 5-15 ಲಕ್ಷದವರೆಗೆ 3% ಬಡ್ಡಿದರದಲ್ಲಿ ನೀಡಲಾಗುತ್ತಿದೆ. 1200 ಕೋಟಿಗಳಿಗಿಂತಲೂ ಹೆಚ್ಚು ಬಡ್ಡಿಯನ್ನು ನೀಡುತ್ತೇವೆ. ಈ ಬಗ್ಗೆ ಆರ್.ಅಶೋಕ್, ಬಿ.ಎಸ್.ಯಡಿಯೂರಪ್ಪ, ಯತ್ನಾಳ್, ಸಿ.ಟಿ.ರವಿ, ಹೆಚ್.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ವ್ಯಂಗ್ಯವಾಡಿದರು.
*ಬಿಜೆಪಿಗೆ ಬಡವರ ಕುರಿತು ಯಾವ ಕಾಳಜಿಯೂ ಇಲ್ಲ್ಲ*
ಸರ್ಕಾರಿ ನೌಕರರು, ತೆರಿಗೆದಾರರನ್ನು ಬಿಟ್ಟು ಬೇರೆಯಾರನ್ನೂ ಬಿಪಿಎಲ್ ಕಾರ್ಡಿನಿಂದ ತೆಗೆಯಬೇಡಿ ಎಂದು ಸೂಚಿಸಿರುವುದಾಗಿ ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು ಬಿಜೆಪಿಯವರು ರಾಜಕೀಯಕ್ಕಾಗಿ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ. ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದು ಯಾರು? ಅವರೇ? ಅದನ್ನು ಜಾರಿಗೆ ತಂದಿದ್ದು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರು. ರಾಜ್ಯಸಭೆಯಲ್ಲಿ ಮಂಡಿಸಿದಾಗ ಮುರಳಿ ಮನೋಹರ್ ಜೋಶಿ ಅವರು ಅದನ್ನು ವಿರೋಧಿಸಿ ಭಾಷಣ ಮಾಡಿದ್ದಾರೆ. ಅದು ಆಹಾರ ಭದ್ರತಾ ಕಾಯ್ದೆಯಲ್ಲ, ಮತ ಭದ್ರತಾ ಕಾಯ್ದೆ ಎಂದು ಕರೆದಿದ್ದರು . ಅಂದರೆ ಆಹಾರ ಭದ್ರತಾ ಕಾಯ್ದೆಗೆ ಅವರು ವಿರೋಧವಾಗಿದ್ದರು. ಇವರಿಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ ? ಎಂದರು.*ಬಿಪಿಎಲ್ ಕಾರ್ಡು ರೂಪಿಸಿರುವುದು ಬಡವರಿಗಾಗಿ*
ಕರ್ನಾಟಕದಲ್ಲಿ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಟ್ಟಿದ್ದು ಸಿದ್ದರಾಮಯ್ಯನ ಸರ್ಕಾರ. 7 ರಿಂದ 5 ಕೆ.ಜಿಗೆ ಇಳಿಸಿದ್ದು ಬಿ.ಎಸ್.ಯಡಿಯೂರಪ್ಪ. ಆರ್.ಅಶೋಕ್ ಅವರ ಸಚಿವ ಸಂಪುಟದಲ್ಲಿದ್ದರು. 2 ಕೆ.ಜಿಯನ್ನು ಕಡಿಮೆ ಮಾಡಿದಾಗ ಯಾಕೆ ಉಸಿರೆತ್ತಲಿಲ್ಲ. ಆಹಾರ ಭದ್ರತಾ ಕಾಯ್ದೆಯನ್ನು ವಿರೋಧಿಸಿದ ಬಿಜೆಪಿ ಬಡವರ ಬಗ್ಗೆ ಮಾತನಾಡುತ್ತಾರೆ. ಆಹಾರ ಪದಾರ್ಥಗಳನ್ನು ಉಚಿತವಾಗಿ ಕೊಡಬೇಕೆಂದು ಯೋಜನೆ ಜಾರಿಗೆ ತಂದಿದ್ದು ನಾವು. ಸರ್ಕಾರಿ ನೌಕರರು, ತೆರಿಗೆದಾರರಿಗೆ ಬಿಪಿಎಲ್ ಕಾರ್ಡು ಕೊಡಬಾರದು ಎಂದು ಹೇಳಿದ್ದೇವೆ. ಈ ಯೋಜನೆ ಮಾಡಿರುವುದು ಬಡವರಿಗಾಗಿ. ಸರ್ಕಾರಿ ನೌಕರರು ಬಿಪಿಎಲ್ ಗೆ ಅರ್ಹರೇ? ಎಂದು ಪ್ರಶ್ನಿಸಿದರು. ನಾವು 5 ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮಾಡಿದ್ದಾರಾ? ಎಸ್.ಸಿ.ಎಸ್.ಪಿ/ಟಿಎಸ್.ಪಿ ಕಾಯ್ದೆಯನ್ನು ಎಲ್ಲಿಯಾದರೂ ಜಾರಿಗೆ ತಂದಿದ್ದಾರೆಯೇ? ಬಿಜೆಪಿಗೆ ಬಡವರ ಕುರಿತು ಯಾವ ಕಾಳಜಿಯೂ ಇಲ್ಲ ಎಂದರು.*ಬಿಜೆಪಿ ಬಳಿ ಸಾಲ ಕೇಳಿಲ್ಲ*
ಗ್ಯಾರಂಟಿಗಳಿಗೆ ದುಡ್ಡಿಲ್ಲ ಎಂದು ಬಿಜೆಪಿ ಆರೋಪಿಸಿರುವ ಬಗ್ಗೆ ಮಾತನಾಡಿ ನಾವು ಹಣವಿಲ್ಲ ಎಂದು ಬಿಜೆಪಿ ಬಳಿ ಸಾಲ ಕೇಳಿಲ್ಲ. ಯಾವುದಕ್ಕೆ ಹಣವಿಲ್ಲ ಎಂದು ತಿಳಿಸಿ ಎಂದು ಪ್ರಶ್ನಿಸಿದರು. ರಾಜಕೀಯವಾಗಿ ಮಾತನಾಡುತ್ತಾರೆ ಅಷ್ಟೇ ಎಂದರು.
ಚುನಾವಣೆ ಸಂದರ್ಭದಲ್ಲಿ ಎಲ್ಲರಿಗೂ ಉಚಿತವಾಗಿ ಓಡಾಟ ಮಾಡಬಹುದು ಎಂದು ಹೇಳಿದ್ದರು ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ನಾವು ಯಾರಿಗೂ ತಾರತಮ್ಯ ಮಾಡಿಲ್ಲ. ಅಶೋಕ್ ಅವರ ಪತ್ನಿಯೂ ಓಡಾಡಬಹುದು ಎಂದರು.*1 ಲಕ್ಷದ 20 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ*
ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೆ ತಂದ ಮೇಲೆ ವಿವಿಧ ಯೋಜನೆಗಳಿಗೆ ಅನುದಾನ ಕಡಿಮೆಯಾಗಿದೆ ಎಂಬ ಬಗ್ಗೆ ಮಾತನಾಡಿ ಯಾವುದಕ್ಕೆ ಕಡಿಮೆಯಾಗಿದೆ ಎಂದರು. 1 ಲಕ್ಷದ 20 ಸಾವಿರ ಕೋಟಿ ರೂ.ಗಳನ್ನು ಅಭಿವೃದ್ಧಿಗಳಿಗಾಗಿ ಮೀಸಲಿಡಲಾಗಿದೆ. ಅವರಿಗಿಂತ ಹೆಚ್ಚು ಅನುದಾನವನ್ನು ಮೀಸಲಿಡಲಾಗಿದೆ ಎಂದರು. ಕಾಂಗ್ರೆಸ್ ಶಾಸಕರೇ ಈ ಬಗ್ಗೆ ಮಾತನಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಶಾಸಕರು ವಿಶೇಷ ಅನುದಾನವನ್ನು ಕೇಳುತ್ತಿದ್ದಾರೆ. ಬಜೆಟ್ ಬಿಟ್ಟು ಕೇಳುತ್ತಿರುವುದನ್ನೂ ಕೊಟ್ಟಿದ್ದೇವೆ ಅವರು ಕೇಳಿದಷ್ಟು ಕೊಡಲು ಸಾಧ್ಯವಾಗದೇ ಇರಬಹುದು ಎಂದರು.*ಬಿಜೆಪಿ ಭರವಸೆ ನೀಡಿದ್ದ 10% ರಷ್ಟನ್ನೂ ಈಡೇರಿಸಿಲ್ಲ*
ಬಿಜೆಪಿ ಮೂರು ವರ್ಷಗಳ ಅಧಿಕಾರದಲ್ಲಿದ್ದು ಏನೇನು ಮಾಡಿದ್ದಾರೆ ? 2018 ರಲ್ಲಿ 600 ಭರವಸೆ ನೀಡಿ ಅದರಲ್ಲಿ ಎಷ್ಟು ಭರವಸೆಗಳನ್ನು ಈಡೇರಿಸಿದ್ದಾರೆ? 1 ಲಕ್ಷದವರೆಗೆ ಸಾಲ ಮನ್ನಾ ಮಾಡುತ್ತೇವೆ ಎಂದು ಮೊದಲನೇ ಸಚಿವ ಸಂಪುಟದಲ್ಲಿಯೇ ಹೇಳಿದ್ದರು ಮಾಡಿದ್ದಾರಾ? ಎಂದು ಪ್ರಶ್ನಿಸಿದರು. 10% ರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ. ರಾಜಕಾರಣಕ್ಕಾಗಿ ಹೇಳುತ್ತಿದ್ದಾರೆ ಎಂದರು.*ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ*
ಗ್ಯಾರಂಟಿ ಯೋಜನೆಗಳನ್ನು ಲೋಕಸಭಾ ಚುನಾವಣೆಯ ನಂತರ ನಿಲ್ಲಿಸುತ್ತಾರೆ, ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದರು, ಆಗಿದೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಬಿಜೆಪಿಯವರು ರಾಜಕೀಯಕ್ಕಾಗಿ ಪರಿಷ್ಕರಣೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿಗಳು ಶಕ್ತಿ ಯೋಜನೆಯ ಪರಿಷ್ಕರಣೆ ಮಾಡುವುದಾಗಿ ಹೇಳಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಶಕ್ತಿ ಯೋಜನೆಯಡಿ 325 ಕೋಟಿ ಮಹಿಳೆಯರು ಉಚಿತವಾಗಿ ಓಡಾಡಿದ್ದಾರೆ. ಅದರಲ್ಲಿ ಬಿಜೆಪಿಯವರು, ಎಲ್ಲಾ ಧರ್ಮದವರು, ಜಾರಿಯವರೂ ಸೇರಿದ್ದಾರೆ ಎಂದರು.*ಉಪಚುನಾವಣೆ: ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ*
ಚುನಾವಣೋತ್ತರ ಸಮೀಕ್ಷೆ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು ಹರಿಯಾಣದಲ್ಲಿ ಎಕ್ಸಿಟ್ ಪೋಲ್ ಏನಾಯ್ತು. ಅದನ್ನು ನಂಬಲು ಸಾಧ್ಯವಿಲ್ಲ. ಉಪಚುನಾವಣೆಯಲ್ಲಿ ನನಗಿರುವ ಮಾಹಿತಿಯ ಪ್ರಕಾರ ನಾವು ಎಲ್ಲಾ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.