ರಾಜ್ಯದಲ್ಲಿ ಈ ಬಾರಿ ಹೆಚ್ಚು ಚಳಿ..! ಕಾರಣ ಬಿಚ್ಚಿಟ್ಟ ಹವಾಮಾನ ಇಲಾಖೆ
ಬೆಂಗಳೂರು : ರಾಜ್ಯದ ಜನರಿಗೆ ಮಳೆ ರಿಲೀಫ್ ಕೊಟ್ಟಿರುವ ಬೆನ್ನಲ್ಲೆ ಚಳಿ ಟೆನ್ಷನ್ ಕೊಡಲು ಶುರುವಾಗಿದೆ. ಕಳೆದ ವಾರದಿಂದ ನಿರಂತರವಾಗಿ ಚಳಿಯ ಪ್ರಮಾಣ ಹೆಚ್ಚಾಗುತ್ತಿದ್ದು, ಈ ವರ್ಷ ರಾಜ್ಯದಲ್ಲಿ ಚಳಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಲ್ಯಾನಿನೋ ಸ್ಥಿತಿಯಿಂದಾಗಿ ರಾಜ್ಯದಲ್ಲಿ ಚಳಿ ಪ್ರಮಾಣ ತೀವ್ರಗೊಳ್ಳಲಿದೆ. ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗುವ ಮುನ್ಸೂಚನೆ ಇದ್ದು, ಈ ಪ್ರಕ್ರಿಯೆಯನ್ನೇ ಲ್ಯಾನಿನೋ ಎನ್ನಲಾಗುತ್ತದೆ. ಸಾಮಾನ್ಯವಾಗಿ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಈ ಲ್ಯಾನಿನೋ ಪರಿಸ್ಥಿತಿ ಉಂಟಾಗಲಿದ್ದು, ಇದು ಮುಂದಿನ ಜನವರಿ ಹಾಗೂ ಮಾರ್ಚ್ ತನಕ ಮುಂದುವರಿಯಲಿದೆ.
ಹಾಗಾಗಿ ಲ್ಯಾನಿನೋ ಪ್ರಭಾವ ಬೀರುವುದರಿಂದ ರಾಜ್ಯದಾದ್ಯಂತ ತಾಪಮಾನ ಕಡಿಮೆಯಾಗಲಿದೆ. ಮತ್ತೊಂದೆಡೆ ಉತ್ತರ ಭಾರತದಿಂದಲೂ ಒಣ ಹಾಗೂ ತಣ್ಣನೆಯ ಗಾಳಿ ಬೀಸುವುದರಿಂದ ಕನಿಷ್ಠ ಉಷ್ಣಾಂಶ ಕ್ರಮೇಣ ತಗ್ಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈಗಾಗಲೇ ಚಳಿ ಹೆಚ್ಚಾಗಿದ್ದು, ಡಿಸೆಂಬರ್ ಹಾಗೂ ಜನವರಿಯಲ್ಲಿ ಕನಿಷ್ಠ ಉಷ್ಣಾಂಶ 8 ಡಿಗ್ರಿ ಸೆಲ್ಸಿಯಸ್‌ವರೆಗೆ ಕಂಡುಬರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್ ತನಕ ಕುಸಿಯಬಹುದು ಎಂದು ಹೇಳಲಾಗಿದೆ.
ಬೀದರ್, ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮುಂದಿನ ವಾರ ಕನಿಷ್ಠ ಉಷ್ಣಾಂಶವು 12 ಡಿಗ್ರಿ ಸೆಲ್ಸಿಯಸ್‌ನಿಂದ 14 ಡಿಗ್ರಿ ಸೆಲ್ಸಿಯಸ್‌ವರೆಗೆ ಇರಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಈ ವಾರವಿಡೀ ಗರಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್‌ನಿಂದ 18 ಡಿಗ್ರಿ ಸೆಲ್ಸಿಯಸ್ ಕಂಡುಬರಲಿದೆ.
ರಾಜ್ಯದೆಲ್ಲೆಡೆ ಒಣಹವೆ ಮುಂದುವರೆದಿದ್ದು, ನವೆಂಬರ್ 21ರ ವೇಳೆಗೆ ದಕ್ಷಿಣ ಅಂಡಮಾನ್ ಸಮುದ್ರದ ಮೇಲ್ಭಾಗದಲ್ಲಿ ಚಂಡಮಾರುತದ ಪರಿಚಲನೆ ರೂಪುಗೊಳ್ಳುವ ಸಾಧ್ಯತೆ ಇದೆ. ನವೆಂಬರ್ 23ರ ವೇಳೆಗೆ ಬಂಗಾಳ ಕೊಲ್ಲಿಯಲ್ಲೂ ವಾಯುಭಾರ ಕುಸಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಮುಂಜಾನೆಯಿಂದಲೇ ದಟ್ಟವಾದ ಮಂಜು ಆವರಿಸುತ್ತಿದೆ. ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜ್ಯದ ಚಿಕ್ಕಮಗಳೂರು, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಇರಲಿದ್ದು, ಉಳಿದ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಕಂಡುಬರಲಿದೆ. ನವೆಂಬರ್ 25ರಿಂದ ಡಿಸೆಂಬರ್ 3ರವರೆಗೆ ರಾಜ್ಯದ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯೂ ಇದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಅವಧಿಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ. ಹೆಚ್ಚಾಗಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಸಂಜೆಯಿಂದಲೇ ಚಳಿ ತೀವ್ರಗೊಳ್ಳಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್‌ವರೆಗೆ ಕಂಡುಬರಲಿದೆ. ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ರಾಮನಗರ, ಕೋಲಾರದಲ್ಲೂ ಚಳಿಯ ವಾತಾವರಣ ಇರಲಿದೆ.
ಚಳಿಗಾಲ ಆರಂಭವಾಗಿದೆ. ಕರ್ನಾಟಕದ ವಿವಿಧಡೆ ಚಳಿ ಜೋರಾಗಿದೆ. ಡಿಸೆಂಬರ್ ಮತ್ತು ಜನವರಿ ಅಂತ್ಯದವರೆಗೆ ಚಳಿಯ ಅಬ್ಬರ ಜೋರಾಗುವ ಸಾಧ್ಯತೆ ಇದೆ. ವಾಡಿಕೆಗಿಂತ 2 ರಿಂದ 3 ಡಿಗ್ರಿಯಷ್ಟು ನಷ್ಟು ಉಷ್ಣಾಂಶ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಬೀದರ್, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ರಾಯಚೂರು, ಕಲಬುರಗಿ ಕೆಲವು ಪ್ರದೇಶಗಳಲ್ಲಿ ಮುಂದಿನ ದಿನಗಳಲ್ಲಿ ಕನಿಷ್ಠ ಉಷ್ಣಾಂಶ 12 ಡಿಗ್ರಿ ಸೆಲ್ಸಿಯಸ್‌ವರಗೂ ಇಳಿಕೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ಹೇಳಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ ಶುಕ್ರವಾರ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ, ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 13 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನು, ಮಂಗಳೂರಿನಲ್ಲಿ ಗರಿಷ್ಠ 33, ಕನಿಷ್ಠ 24, ಶಿವಮೊಗ್ಗದಲ್ಲಿ ಗರಿಷ್ಠ 31 ಮತ್ತು ಕನಿಷ್ಠ 16, ಬೆಳಗಾವಿಯಲ್ಲಿ ಗರಿಷ್ಠ 29 ಮತ್ತು ಕನಿಷ್ಠ 16, ಮೈಸೂರಿನಲ್ಲಿ ಗರಿಷ್ಠ 29 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ನಷ್ಟು ತಪಾಮಾನ ವರದಿಯಾಗಲಿದೆ.
ಕಳೆದ 24 ಗಂಟೆಯಲ್ಲಿ ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 35.5 ಡಿಗ್ರಿ ಸೆಲ್ಸಿಯಸ್ ಮತ್ತು ವಿಜಯಪುರದಲ್ಲಿ ಕನಿಷ್ಠ ಉಷ್ಣಾಂಶ 12.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಯಚೂರು, ಗದಗ, ಬದಾಮಿ ಮತ್ತು ಬಾಗಲಕೋಟೆ, ಧಾರವಾಡ, ಕಲಬುರಗಿ, ಬೆಳಗಾವಿ ಮತ್ತು ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ 15 ಡಿಗ್ರಿ ಸೆಲ್ಸಿಯಸ್‌ಗಿಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ದಕ್ಷಿಣ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಬೆಳಗಿನ ಜಾವ ಮಂಜು ಅಥವಾ ಇಬ್ಬನಿ ಬಿದ್ದಿದೆ. ಇನ್ನು ನವೆಂಬರ್ 26 ಮತ್ತು 27 ರಂದು ದಕ್ಷಿಣ ಒಳನಾಡಿನ ಮಳೆಯಾಗುವ ಸಾಧ್ಯತೆ ಇದೆ.