ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಂಬಂಧ ಇದೀಗ ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಡಿಸಿಎಂ ಸಹ ಆಗಿರುವ ಹಾಲಿ ಗೃಹ ಸಚಿವ ಜಿ. ಪರಮೇಶ್ವರ್ ನಡುವೆ ತೀವ್ರ ಸೆಣಸಾಟದಲ್ಲಿ ವಿಮಾನ ನಿಲ್ದಾಣ ಘೋಷಣೆ ತೀವ್ರ ವಿಳಂಬವಾಗುತ್ತಿದೆ.
ಪರಮೇಶ್ವರ ಅವರು ತಮ್ಮ ತವರು ತುಮಕೂರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ಆಸಕ್ತಿ ತೋರಿದರೆ, ಡಿಸಿಎಂ ಡಿ.ಕೆ. ಶಿವಕುಮಾರ್ ರಾಮನಗರ ಜಿಲ್ಲೆಯಲ್ಲಿ ಈ ಪ್ರತಿಷ್ಠಿತ ವಿಮಾನ ನಿಲ್ದಾಣಕ್ಕೆ ಜಾಗ ಅಂತಿಮಗೊಳಿಸುವಂತೆ ಒತ್ತಡ ಹಾಕುತ್ತಿರುವುದು ಇದೀಗ ಬಹಿರಂಗವಾಗಿದೆ.
ನೆರೆಯ ತಮಿಳುನಾಡಿನ ಹೊಸೂರು ವಿಮಾನ ನಿಲ್ದಾಣಕ್ಕೆ ಪರ್ಯಾಯವಾಗಿ ಕರ್ನಾಟಕ ಸರಕಾರ ದಿಢೀರನೆ ಬೆಂಗಳೂರಿನಲ್ಲಿ ಮತ್ತೊಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ಮುಂದಾಗಿದೆ. ಹಾಲಿ ಇರುವ ಬೆಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರ ದಟ್ಟಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ಸ್ಥಾಪಿಸಲು ಕರ್ನಾಟಕ ಉದ್ದೇಶ ಹೊಂದಿದೆ.
ಮುಂದಿನ ಒಂದು ದಶಕದ ವೇಳೆಗೆ ಇದು ಕಾರ್ಯಾರಂಭ ಮಾಡಲಿದೆ.ಹೊಸೂರು ವಿಮಾನ ನಿಲ್ದಾಣ ಸಂಬಂಧ ನೆರೆಯ ತಮಿಳುನಾಡು ಈಗಾಗಲೇ ಘೋಷಣೆ ಮಾಡಿದ್ದು ಬೆಂಗಳೂರಿನ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ವಿಮಾನ ನಿಲ್ದಾಣದತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ಆದರೆ, ಇದೀಗ ಕರ್ನಾಟಕ ಸರಕಾರದ ಪ್ರಭಾವಿ ಸಚಿವರ ನಡುವೆ ನಡೆದಿರುವ ಈ ಸೆಣಸಾಟ ರಾಜ್ಯದ ಪಾಲಿಗೆ ಹಿನ್ನಡೆಯಾಗಿದೆ. ಆದಷ್ಟು ಬೇಗ ಹೊಸ ವಿಮಾನ ನಿಲ್ದಾಣ ಜಾಗ ಗುರುತಿಸುವ ಕೆಲಸವಾಗಬೇಕು. ವಿಳಂಬವಾದರೆ ನೆರೆಯ ತಮಿಳುನಾಡು ಹೊಸೂರಿನಲ್ಲಿ ಉದ್ದೇಶಿಸಿತ ವಿಮಾನ ನಿಲ್ದಾಣ ಸ್ಥಾಪಿಸುವ ನಿಟ್ಟಿನಲ್ಲಿ ಚುರುಕಾಗಿ ಪ್ರಕ್ರಿಯೆ ಆರಂಭಿಸಬಹುದು. ಡಿ.ಕೆ.ಶಿವಕುಮಾರ್ ಅವರು ರಾಮನಗರ ಜಿಲ್ಲೆಯ ಹಾರೋಹಳ್ಳಿ ಅಥವಾ ಬಿಡದಿಯಲ್ಲಿ ಜಾಗ ಗುರುತಿಸಲು ಒತ್ತಡ ಹಾಕುತ್ತಿದ್ದಾರೆ. ಪರಮೇಶ್ವರ ಅವರು ಕುಣಿಗಲ್ ಮತ್ತು ದಾಬಸ್ ಪೇಟೆ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣಕ್ಕೆ ಜಾಗ ಹುಡುಕಲು ಒತ್ತಡ ಹೇರುತ್ತಿದ್ದಾರೆ. ಬೆಂಗಳೂರು ಹೊರಬಲಯದ ಹೆಮ್ಮಿಗೆಪುರ ಬಳಿ ಇರುವ ಜಾಗವನ್ನು ಗುರುತಿಸುವ ಪ್ರಯತ್ನ ನಡೆದಿದೆ. ಒಟ್ಟಾರೆ ಕರ್ನಾಟಕದ ಅಭಿವೃದ್ಧಿಗೆ ಬೆಂಗಳೂರಿನ ದಕ್ಷಿಣ ಅದರಲ್ಲೂ ಹೊಸೂರಿಗೆ ಹೋಗುವ ಬೆಂಗಳೂರು ಪ್ರಯಾಣಿಗರನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ಕೇಂದ್ರಿತವಾಗಿ ವಿಮಾನ ನಿಲ್ದಾಣ ಸ್ಥಾಪನೆಯ ಆದರೆ ಕರ್ನಾಟಕಕ್ಕೆ ಹೆಚ್ಚು ಅನುಕೂಲವಾಗಲಿದೆ.