ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ನಡೆದ ಸ್ಥಳದಲ್ಲಿಯೇ, ಮೃತದೇಹದ ಎದುರು ನಟ ದರ್ಶನ್ ಇತರ ಆರೋಪಿಗಳ ಜತೆ ನಿಂತಿರುವ ಫೋಟೊವನ್ನು ಆರೋಪಿ ಪವನ್ ಮೊಬೈಲ್ನಿಂದ ತನಿಖಾ ತಂಡ ಮರು ಸಂಗ್ರಹಿಸಿದೆ.
ಘಟನೆ ನಡೆದ ದಿನದಂದು ಕೊಲೆ ನಡೆದ ಪಟ್ಟಣಗೆರೆ ಶೆಡ್ನಲ್ಲಿ ಆರೋಪಿಗಳ ಪೈಕಿ ಪವನ್ ಎಂಬಾತ ತನ್ನ ಮೊಬೈಲ್ನಿಂದ ಎರಡು ಫೋಟೊವನ್ನು ತೆಗೆದಿದ್ದರು. ಬಳಿಕ ಬಂಧನದ ಭಯದಿಂದ ಫೋಟೊವನ್ನು ಅಳಿಸಿ ಹಾಕಿದ್ದರು. ತನಿಖೆ ಹಂತದಲ್ಲಿ ಲಭಿಸಿದ ಎಲ್ಲ ಸಾಕ್ಷ್ಯಾಧಾರಗಳನ್ನು ತನಿಖಾಧಿಕಾರಿಗಳು ಬೆಂಗಳೂರು ಹಾಗೂ ಹೈದರಾಬಾದ್ ವಿಧಿ ವಿಜ್ಞಾನ ಪ್ರಯೋಗಾಲಯಗಳಿಗೆ ರವಾನಿಸಿದ್ದರು.
ಹೈದರಾಬಾದ್ ಪ್ರಯೋಗಾಲಯದ ವರದಿ ಮಾತ್ರ ಬಂದಿರಲಿಲ್ಲ. ಈಗ ಹೈದರಾಬಾದ್ ಎಫ್ಎಸ್ಎಲ್ ವರದಿಯು ಬಂದಿದ್ದು, ಮೊಬೈಲ್ನಿಂದ ಫೋಟೊವನ್ನು ಮರು ಸಂಗ್ರಹಿಸಲಾಗಿದೆ. ಆರೋಪಿಗಳ ಜತೆ ದರ್ಶನ್ ಅವರು ನೀಲಿ ಟಿ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿ ನಿಂತಿರುವ ದೃಶ್ಯ ಫೋಟೊದಲ್ಲಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಮತ್ತು ಇತರರ ವಿರುದ್ಧ ಒಂದು ಸಾವಿರ ಪುಟದ ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಸಲಿದ್ದಾರೆ.
20ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ತಾಂತ್ರಿಕ ಸಾಕ್ಷ್ಯ ಮತ್ತು ಎಫ್ಎಸ್ಎಲ್ ವರದಿಯನ್ನು ಆರೋಪಪಟ್ಟಿಯಲ್ಲಿ ಸೇರಿಸಲಾಗುತ್ತದೆ’ ಎಂದು ಮೂಲಗಳು ಹೇಳಿವೆ.
ನಗರದ ಪಟ್ಟಣಗೆರೆಯ ಶೆಡ್ನಲ್ಲಿ ಜೂನ್ 9ರಂದು ಕೊಲೆ ನಡೆದಿತ್ತು. ಕೊಲೆ ಆರೋಪದಡಿ ದರ್ಶನ್ ಹಾಗೂ ಅವರ ಆಪ್ತ ಪವಿತ್ರಾಗೌಡ ಸೇರಿ 17 ಮಂದಿಯನ್ನು ಬಂಧಿಸಿದ್ದರು.
ದರ್ಶನ್ ಮತ್ತು ಇತರ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ 3,991 ಪುಟಗಳ ಪ್ರಾಥಮಿಕ ದೋಷಾರೋಪ ಪಟ್ಟಿಯನ್ನು ಸೆಪ್ಟೆಂಬರ್ 4ರಂದು ಪೊಲೀಸರು ಸಲ್ಲಿಸಿದ್ದರು. ಮೂವರು ಪ್ರತ್ಯಕ್ಷದರ್ಶಿ ಸಾಕ್ಷಿಗಳ ಹೇಳಿಕೆ, ಎಂಟು ವರದಿಗಳು, 231ಕ್ಕೂ ಹೆಚ್ಚು ಸಾಕ್ಷ್ಯಾದಾರರ ಹೇಳಿಕೆಗಳನ್ನು ಆರೋಪಪಟ್ಟಿಯಲ್ಲಿ ಒದಗಿಸಲಾಗಿತ್ತು.