ಗುವಾಹಟಿ: ಅಸ್ಸಾಂನ ಕರೀಮ್‌ ಗಂಜ್ ಜಿಲ್ಲೆಯ ಹೆಸರನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಿರುವ ಸರ್ಕಾರ ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಗುರುವಾರ ಹೊರಡಿಸಿದೆ.

ಜಿಲ್ಲಾ ಕೇಂದ್ರ ಕರೀಂಗಂಜ್ ಪಟ್ಟಣವನ್ನು ಶ್ರೀಭೂಮಿ ಪಟ್ಟಣ ಎಂದು ಮರುನಾಮಕರಣ ಮಾಡಲಾಗಿದ್ದು, ಈ ಬದಲಾವಣೆಯು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅದು ಹೇಳಿದೆ.

‘ಅಸ್ಸಾಂನ ರಾಜ್ಯಪಾಲರು ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ ಜಿಲ್ಲೆ ಮತ್ತು ಕರೀಂಗಂಜ್ ಪಟ್ಟಣವನ್ನು ಶ್ರೀಭೂಮಿ ಪಟ್ಟಣ ಎಂದು ಮರುನಾಮಕರಣ ಮಾಡಿದ್ದಾರೆ’ ಎಂದು ಸಾಮಾನ್ಯ ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಖೇಶ್ ಚಂದ್ರ ಸಾಹು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಅಸ್ಸಾಂ ಸಂಪುಟವು ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಲು ಮಂಗಳವಾರ ನಿರ್ಧರಿಸಿದೆ.

‘ಜಿಲ್ಲೆಯನ್ನು ಮರುನಾಮಕರಣ ಮಾಡುವ ನಿರ್ಧಾರವು ಜಿಲ್ಲೆಯ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.