ಮುರುಡೇಶ್ವರ : ಈ ಹಿಂದೆ ಮೀನುಗಾರರಿಗೆ ಸಮುದ್ರದಲ್ಲಿ ಮೀನುಗಾರಿಕೆ ವೇಳೆ ಹಾನಿಯಾದರೆ ಪರಿಹಾರವಾಗಿ ₹6 ಲಕ್ಷ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ₹8 ಲಕ್ಷಕ್ಕೆ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ₹10 ಲಕ್ಷಕ್ಕೆ ಏರಿಸುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಘೋಷಣೆ ಮಾಡಿದರು.

ಮುರುಡೇಶ್ವರದಲ್ಲಿ ನಡೆದ ವಿಶ್ವ ಮೀನುಗಾರಿಕೆ ದಿನ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಗುರುವಾರ ಭಾಗವಹಿಸಿ ಮಾತನಾಡಿದರು.

“ಈ ವರ್ಷ ಮೀನುಗಾರರಿಗಾಗಿ 10 ಸಾವಿರ ಮನೆಗಳನ್ನು ನೀಡಲು ತೀರ್ಮಾನ ಮಾಡಿದ್ದೇವೆ.

ಮಂಗಳೂರಿನಲ್ಲಿ ₹49 ಕೋಟಿ ವೆಚ್ಚದಲ್ಲಿ ಮೀನುಗಾರಿಕೆ ಬಂದರು ಕಾಮಗಾರಿ ಪೂರ್ಣಗೊಂಡಿದೆ. ಸಮೀಕ್ಷೆ ಪ್ರಕಾರ 99% ಮೀನುಗಾರರು ಆರ್ಥಿಕವಾಗಿ ಹಿಂದುಳಿದಿದ್ದು, ಈ ಮೀನುಗಾರರ ರಕ್ಷಣೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಮೀನು ಮಾರಾಟ ಮಾಡಲು ತ್ರಿಚಕ್ರ ಎಲೆಕ್ಟ್ರಿಕ್ ವಾಹನ ಹಂಚಲಾಗಿದೆ” ಎಂದು ತಿಳಿಸಿದರು.

*ಪ್ರವಾಸೋದ್ಯಮ ನೀತಿಯಲ್ಲಿ ಕರಾವಳಿಗೆ ವಿಶೇಷ ಆದ್ಯತೆ:

“ಈ ಕರಾವಳಿ ಭಾಗದಲ್ಲಿ ನೂತನ ಪ್ರವಾಸೋದ್ಯಮ ನೀತಿ ರೂಪಿಸಬೇಕು ಎಂದು ಸಚಿವರಾದ ಹೆಚ್.ಕೆ ಪಾಟೀಲ್ ಅವರಿಗೆ ಸಚಿವ ಸಂಪುಟ ಸಭೆಯಲ್ಲಿ ತಿಳಿಸಿದ್ದೇವೆ. ನೂತನ ಪ್ರವಾಸೋದ್ಯಮ ನೀತಿಯಲ್ಲಿ ಮಂಗಳೂರಿನಿಂದ ಕಾರವಾರದವರೆಗೂ ಹೆಚ್ಚಿನ ಆದ್ಯತೆ ನೀಡಲಾಗುವುದು. ಈ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಲಹೆಗಳನ್ನು ಪಡೆದಿದ್ದೇವೆ. ಈ ಭಾಗದಲ್ಲಿ ಪಂಚತಾರಾ ಹೋಟೆಲ್ ಗಳಿಲ್ಲ. ಈ ಬಗ್ಗೆಯೂ ಗಮನ ಹರಿಸಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಮ್ಮ ಕಾರ್ಯಕ್ರಮ ಜಾರಿ ಮಾಡುತ್ತೇವೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು. ಇಲ್ಲಿನ ಬಂದರುಗಳ ಅಭಿವೃದ್ಧಿ ಮಾಡಲಾಗುವುದು. ಕರಾವಳಿ ಭಾಗ ನಮ್ಮ ರಾಜ್ಯದ ಶಕ್ತಿ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಮೊಹಮದ್ ಯೂನಿಸ್ ಅವರು ಒಂದು ಮಾತು ಹೇಳಿದ್ದಾರೆ. ಒಬ್ಬ ವ್ಯಕ್ತಿಗೆ ಮೀನು ಕೊಟ್ಟರೆ ಅದು ಆತನಿಗೆ ಒಂದು ಹೊತ್ತಿನ ಊಟಕ್ಕೆ ಸಮ. ಆದರೆ ಅದೇ ವ್ಯಕ್ತಿಗೆ ಮೀನುಗಾರಿಕೆ ಹೇಳಿಕೊಟ್ಟರೆ ಅದು ಅವನ ಬದುಕಿಗೆ ಊಟ ಕಲ್ಪಿಸಿಕೊಡುವುದಕ್ಕೆ ಸಮ ಎಂದು. ಅದೇ ರೀತಿ ನಮ್ಮ ಸರ್ಕಾರ ಮೀನುಗಾರರ ಬದುಕು ಬದಲಾಯಿಸಿ, ಅವರ ಕಾಲ ಮೇಲೆ ಅವರು ಸ್ವಾವಲಂಬನೆ ಬದುಕುವಂತೆ ಮಾಡಲು ಕಾರ್ಯಕ್ರಮ ರೂಪಿಸುತ್ತಿದೆ. ಮೀನುಗಾರರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ.”

*ಬೆಲೆ ಏರಿಕೆ ಸಮಸ್ಯೆಗೆ ಗ್ಯಾರಂಟಿ ಯೋಜನೆಗಳಿಂದ ಪರಿಹಾರ:

“ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದ ಬಡ, ಮಧ್ಯಮ ವರ್ಗದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಬಿಜೆಪಿ ಸ್ನೇಹಿತರು ಈ ಯೋಜನೆ ಬಗ್ಗೆ ಟೀಕೆ, ಅಪಪ್ರಚಾರ ಮಾಡುತ್ತಿದ್ದಾರೆ. ಆದರೂ ಮಧ್ಯಪ್ರದೇಶ ಸೇರಿದಂತೆ ಎಲ್ಲಾ ರಾಜ್ಯಗಳಲ್ಲಿ ನಮ್ಮ ಮಾದರಿಯಲ್ಲಿ ಬಿಜೆಪಿ ಸರ್ಕಾರಗಳು ಯೋಜನೆ ರೂಪಿಸುತ್ತಿವೆ. ಆಮೂಲಕ ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದಾರೆ ಎಂದು ಬಿಜೆಪಿಯವರಿಗೂ ಅರ್ಥವಾಗಿದೆ. ನಮ್ಮ ಸರ್ಕಾರ 2 ಸಾವಿರ, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, 10 ಕೆ.ಜಿ ಅಕ್ಕಿ, ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುತ್ತಿದೆ. ಎಲ್ಲಾ ಪಕ್ಷದವರಿಗೂ ಈ ಯೋಜನೆ ಜಾರಿ ಮಾಡಿದ್ದೇವೆ. ಇದಕ್ಕಾಗಿ ₹56 ಸಾವಿರ ಕೋಟಿ ಮೀಸಲಿಟ್ಟಿದ್ದೇವೆ. ಇದರಿಂದ ಬಡ ಕುಟುಂಬಕ್ಕೆ ವಾರ್ಷಿಕವಾಗಿ ಸರಾಸರಿ 50 ಸಾವಿರದಷ್ಟು ಉಳಿತಾಯ ಮಾಡಲು ಮುಂದಾಗಿದೆ. ಆಮೂಲಕ ದೇಶಕ್ಕೆ ಕರ್ನಾಟಕ ಮಾದರಿ ಪರಿಚಯಿಸಿದ್ದೇವೆ.”

*ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನನ್ನ ಭಾಗ್ಯ:

“ದೆಹಲಿಯಲ್ಲಿ ನಮ್ಮ ರಾಜ್ಯದ ರೈತರು ಉತ್ಪಾದಿಸುವ ನಂದಿನಿ ಹಾಲಿನ ಮಾರುಕಟ್ಟೆ ವಿಸ್ತರಣೆ ಮಾಡಲು ಇಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮಕ್ಕೆ ಮೂಖ್ಯಮಂತ್ರಿಗಳು ತೆರಳಿದರು. ಕರಾವಳಿ ಭಾಗದಲ್ಲಿ ನೀರಿನಲ್ಲಿ ಕೃಷಿ ಮಾಡುತ್ತಿರುವ ಮೀನುಗಾರರ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದೇನೆ. ಮಂಕಾಳ ವೈದ್ಯ ಅವರು ಈ ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಒತ್ತಡ ಹಾಕಿದರು.

ಕೊಲ್ಲೂರು ಮೂಕಾಂಬಿಕೆ, ಇಡಗುಂಜಿ ಗಣಪತಿ, ಮುರುಡೇಶ್ವರದಲ್ಲಿ ಶಿವನ ದರ್ಶನ ಮಾಡಿ ಈ ಕಾರ್ಯಕ್ರಮದಲ್ಲಿ ಈ ಜನರ ದರ್ಶನ ಮಾಡುತ್ತಿರುವುದು ನನ್ನ ಭಾಗ್ಯ.

ರೈತ ಭೂಮಿಯಲ್ಲಿ ಕೃಷಿ ಮಾಡಿದರೆ, ಮೀನುಗಾರರು ನೀರಿನಲ್ಲಿ ಕೃಷಿ ಮಾಡುತ್ತೀರಿ. ನಿಮ್ಮಿಬ್ಬರಿಗೂ ವೇತನ, ಬಡ್ತಿ, ಲಂಚ, ನಿವೃತ್ತಿ ಪಿಂಚಣಿ ಇಲ್ಲ. ನೀವು ಆತ್ಮವಿಶ್ವಾಸದ ಮೇಲೆ ನಂಬಿಕೆ ಇಟ್ಟುಕೊಂಡು ಪ್ರಾಣವನ್ನು ಒತ್ತೆಯಿಟ್ಟು ಮೀನುಗಾರಿಕೆ ಮಾಡಿಕೊಂಡು ಬರುತ್ತಿದ್ದೀರಿ. ನೀವೆಲ್ಲರೂ ಬದುಕು ಸಾಗಿಸುತ್ತಿದ್ದೀರಿ. ಕೇವಲ ದೊಡ್ಡ ದೊಡ್ಡ ಮೀನುಗಾರಿಕೆ ಸಂಸ್ಥೆಗಳು ಮಾತ್ರ ಬದುಕಿನಲ್ಲಿ ಉತ್ತಮ ಲಾಭ ಕಾಣುತ್ತಿದ್ದಾರೆ.

ನಿಮ್ಮ ಬದುಕು ಹಸನಾಗಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ನಂತರ ಈ ಭಾಗದ ಜನರ ಸಮಸ್ಯೆ ಆಲಿಸಿದ್ದೆ. ಮೊಗವೀರರ ಸಂಘ, ಬೋಟ್ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಬೇಡಿಕೆ ನನ್ನ ಮುಂದೆ ಇಟ್ಟಿದ್ದರು.

ಮಂಕಾಳ ವೈದ್ಯ ಅವರು ಮೀನುಗಾರನಾಗಿ ಹುಟ್ಟಿದ್ದು, ಈ ಸಮುದಾಯದ ಜನರ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಸರ್ಕಾರದ ಮೇಲೆ ಒತ್ತಡ ತಂದು ಅನೇಕ ಹೊಸ ಕಾರ್ಯಕ್ರಮ ರೂಪಿಸಿದ್ದಾರೆ. ಈ ಭಾಗದಲ್ಲಿ ಮತ್ತಷ್ಟು ಬಂದರು ಆಗಬೇಕು, ಮೀನುಗಾರರಿಗೆ ಅನುಕೂಲವಾಗಬೇಕು ಎಂದು ಚರ್ಚೆ ಮಾಡಿದ್ದಾರೆ.

ಕರಾವಳಿ ಭಾಗದ ಜನ, ವಿದ್ಯಾವಂತ, ಬುದ್ಧಿವಂತ, ಪ್ರಜ್ಞಾವಂತರಾಗಿದ್ದೀರಿ. ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದೀರಿ. ಇಲ್ಲಿ ದೊಡ್ಡ ದೇವಾಲಯ, ವಿದ್ಯಾ ಸಂಸ್ಥೆಗಳು, ಪರಿಸರ ಸಂಪನ್ಮೂಲಗಳಿವೆ. ಆದರೂ ಈ ಭಾಗದ 40% ಜನ ಉದ್ಯೋಗಕ್ಕಾಗಿ ಮುಂಬೈ, ಅರಬ್ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ಇಲ್ಲಿ ಕೋಮು ಗಲಭೆಗಳು ಹೆಚ್ಚಾಗುತ್ತಿದ್ದು, ಇವುಗಳಿಗೆ ನಾವು ಅವಕಾಶ ನೀಡಬಾರದು. ಯುವಕರು ತಮ್ಮ ಬದುಕು ಕಟ್ಟಿಕೊಳ್ಳುವಂತೆ ನೋಡಿಕೊಳ್ಳಬೇಕು.”

*ನಿಮ್ಮ ಆಶೀರ್ವಾದ ಹೀಗೆ ಇರಲಿ

“ನಿಮ್ಮ ಜಿಲ್ಲೆಯಿಂದ 6 ಶಾಸಕರನ್ನು ಕೊಟ್ಟು ಈ ಸರ್ಕಾರಕ್ಕೆ ಆಶೀರ್ವಾದ ಮಾಡಿದ್ದೀರಿ. ಕಾಂಗ್ರೆಸ್ ಪಕ್ಷದಿಂದ 5 ಶಾಸಕರಿದ್ದರೂ ಶಿವರಾಂ ಹೆಬ್ಬಾರ್ ಅವರು ನಮಗೆ ಶಕ್ತಿ ತುಂಬುತ್ತಾರೆ ಎಂದು ಭಾವಿಸಿದ್ದೇನೆ. ಈ ಮೂಲಕ ನನ್ನ ಕೈಗೆ ಶಕ್ತಿ ಬಂದಿದೆ.

ಐದು ಬೆರಳು ಸೇರಿ ಕೈ ಮುಷ್ಟಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಿಮ್ಮ ಸಹಕಾರ ಹೀಗೆ ಇರಲಿ. ಮತ್ತೆ ನಿಮ್ಮ ಸೇವೆ ಮಾಡುವ ಅವಕಾಶ ನೀಡಿ.”

*ಎಕ್ಸಿಟ್ ಪೋಲ್ ಗಳು ತಲೆಕೆಳಗಾಗುತ್ತವೆ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆಲ್ಲಲಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ವಿಶ್ವಾಸ

“ನಿಮ್ಮ ಎಕ್ಸಿಟ್ ಪೋಲ್ ಫಲಿತಾಂಶಗಳೆಲ್ಲಾ ತಲೆಕೆಳಗಾಗುತ್ತವೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರಿಗೆ ಮರಳುವ ಮುನ್ನ ಮುರುಡೇಶ್ವರ ಗಾಲ್ಫ್ ಕ್ಲಬ್ ನ ಹೆಲಿಪ್ಯಾಡ್ ಬಳಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.

ಉಪಚುನಾವಣೆ ಫಲಿತಾಂಶ ನಾಳೆ ಪ್ರಕಟವಾಗುತ್ತಿದ್ದು, ಮಹಾರಾಷ್ಟ್ರದ ಚುನಾವಣೋತ್ತರ ಸಮೀಕ್ಷೆ ಕುರಿತು ಬಗ್ಗೆ ಕೇಳಿದಾಗ, “ನಾವು ಅಲ್ಲಿಯೂ ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸವಿದೆ. ನನಗೆ ಆ ರಾಜ್ಯದ ಬಗ್ಗೆ ಹೆಚ್ಚು ಚಿತ್ರಣವಿಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಸರಳ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾನು ಕೂಡ ಪ್ರಚಾರಕ್ಕೆ ಹೋಗಿದ್ದೆ, ಆಗ ಕಾಂಗ್ರೆಸ್ ಪರ ಅಲೆ ಕಂಡಿತು. ಆದರೆ ಮತ ಪೆಟ್ಟಿಗೆಯಲ್ಲಿ ಏನಿದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಜಾರ್ಖಂಡ್ ಬಗ್ಗೆ ಗೊತ್ತಿಲ್ಲ” ಎಂದು ಹೇಳಿದರು.

*ಚನ್ನಪಟ್ಟಣದಲ್ಲಿ ಗೆಲುವು ಖಂಡಿತ

ಎಲ್ಲಾ ಎಕ್ಸಿಟ್ ಪೋಲ್ ಗಳು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆ ಸೋಲು ಹಾಗೂ ಜಮೀರ್ ಅವರ ಮೈ ಬಣ್ಣ ಹೇಳಿಕೆ ಪರಿಣಾಮ ಬೀರಿದೆ ಎನ್ನುವ ಬಗ್ಗೆ ಕೇಳಿದಾಗ, “ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೇವಲ 16 ಸಾವಿರ ಮತಗಳು ಮಾತ್ರ ದೊರೆತಿದ್ದವು. ಆದರೆ ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸ ನನಗಿದೆ. ರಾಮನಗರದಲ್ಲಿ ಇಕ್ಬಾಲ್ ಹುಸೇನ್, ಮಾಗಡಿಯಲ್ಲಿ ಬಾಲಕೃಷ್ಣ, ಕನಕಪುರದಲ್ಲಿ ನಾನು ಗೆದ್ದಿದ್ದೆವು. ಚನ್ನಪಟ್ಟಣದಲ್ಲಿ ಮಾತ್ರ ಗೆದ್ದಿರಲಿಲ್ಲ. ಈ ಬಾರಿ ಗೆಲುವು ಖಂಡಿತ” ಎಂದರು.

*ಜಮೀರ್ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ

ಕುಮಾರಸ್ವಾಮಿ ಅವರ ಮೈ ಬಣ್ಣದ ಬಗ್ಗೆ ಮಾತನಾಡಿದ ಸಚಿವ ಜಮೀರ್ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ, ಅವರ ಹೇಳಿಕೆ ಕುರಿತು ಪಕ್ಷದೊಳಗೆ ಅಸಮಾಧಾನ ಇರುವ ಬಗ್ಗೆ ಕೇಳಿದಾಗ, “ಜಮೀರ್ ಅವರು ಉತ್ತಮ ಕೆಲಸಗಾರ. ಇದು ಪಕ್ಷದ ಆಂತರಿಕ ವಿಚಾರ. ಅವರಿಗೆ ಈ ಬಗ್ಗೆ ಬುದ್ದಿ ಹೇಳಲಾಗಿದೆ. ಅವರು ಆತುರವಾಗಿ ಒಂದಷ್ಟು ಹೇಳಿಕೆ ಕೊಟ್ಟಿದ್ದಾರೆ. ಇದು ತಪ್ಪು ಎಂದು ನಾವು ಹೇಳಿದ್ದೇವೆ. ಪಕ್ಷದ ಅಧ್ಯಕ್ಷನಾಗಿ ನಾನೇ ಅವರಿಗೆ ಬುದ್ಧಿ ಹೇಳಿದ್ದೇನೆ. ನನ್ನ ಹೊರತಾಗಿ ಮತ್ತಿನ್ಯಾರು ಅವರಿಗೆ ಬುದ್ಧಿವಾದ ಹೇಳಬೇಕು? ಜಮೀರ್ ಅವರು ಈಗಾಗಲೇ ಅವರ ಹೇಳಿಕೆಯ ಬಗ್ಗೆ ಕ್ಷಮೆ ಕೇಳಿದ್ದಾರೆ. ಅವರಿಗೆ ತಮ್ಮ ತಪ್ಪಿನ ಅರಿವಾಗಿದೆ” ಎಂದರು.

*ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ಚರ್ಚೆ

“ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಕುರಿತು ಮುಖ್ಯಮಂತ್ರಿ ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರ ಬಳಿ ಚರ್ಚೆ ಮಾಡಲಾಗುವುದು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುವುದು. ಕರಾವಳಿಯ ಪ್ರಕೃತಿ ಸಂಪತ್ತು ಸದ್ಭಳಕೆಯಾಗಬೇಕು. ಬಂಡವಾಳ ಹೂಡಿಕೆದಾರರು ಬಂದರೆ ಉತ್ತಮ ರೀತಿಯಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ” ಎಂದರು.

“ನಾನು 15-20 ವರ್ಷಗಳ ಹಿಂದೆ ಬ್ಯಾಂಕಾಕಿಗೆ ಹೋಗಿದ್ದ ವೇಳೆ ಗಮನಿಸಿದಂತೆ ಅಲ್ಲಿನ ಯುವಕರಿಗಿಂತ ನಮ್ಮ ಕರಾವಳಿಯ ಹುಡುಗರು ಹೆಚ್ಚು ಕ್ರಿಯಾಶೀಲವಾಗಿದ್ದಾರೆ. ಇಲ್ಲಿ ಅಂತರರಾಷ್ಟೀಯ ಮಟ್ಟದ ಅನುಕೂಲತೆ ನೀಡುವಂತಹ ವಾತಾವರಣ ಇದೆ. ಈ ಕಾರಣಕ್ಕಾಗಿ ಇಲ್ಲಿ ಉಳಿದುಕೊಂಡು ಅನುಕೂಲತೆಗಳನ್ನು ವೀಕ್ಷಣೆ ಮಾಡಿದೆ” ಎಂದರು.

“ಇಲ್ಲಿನ ಸಮುದ್ರ ಕಿನಾರೆಗಳು ಗೋವಾಕ್ಕಿಂತ ಹೆಚ್ಚು ಸುಂದರವಾಗಿವೆ. ಅದಕ್ಕಾಗಿ ಸ್ವತಃ ಕಣ್ಣಾರೆ ನೋಡಲು ಬಂದೆ. ನಾನು ಕಿವಿಗಳಿಗಿಂತ ಹೆಚ್ಚು ಕಣ್ಣನ್ನು ನಂಬುತ್ತೇನೆ. ಸ್ಕೂಬಾ ಡೈವಿಂಗ್ ಮಾಡಿದೆ. ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯ, ಶಾಸಕ ಭೀಮಣ್ಣ ನಾಯ್ಕ ಇದ್ದರು” ಎಂದರು.

ಸಂಪುಟ ವಿಸ್ತರಣೆಯ ಬಗ್ಗೆ ಊಹಾಪೋಹಗಳು ಹರಡಿರುವ ಬಗ್ಗೆ ಕೇಳಿದಾಗ, “ನಾನು ಮುಖ್ಯಮಂತ್ರಿ ಅಲ್ಲ, ಸಿದ್ದರಾಮಯ್ಯನವರು ನಮ್ಮ ಮುಖ್ಯಮಂತ್ರಿ. ಅವರು ಇದರ ಬಗ್ಗೆ ಉತ್ತರ ಹೇಳುತ್ತಾರೆ” ಎಂದರು.

*ಭಕ್ತಿ, ಜ್ಞಾನ, ಸಂಸ್ಕೃತಿ ಸಂಗಮವೇ ಬಿಜಿಎಸ್: ಡಿಸಿಎಂ ಡಿ.ಕೆ. ಶಿವಕುಮಾರ್*

*ಬೆಂಗಳೂರು, ನ.22*

“ಬಿಜಿಎಸ್ ಸಂಸ್ಥೆಯು ಭಕ್ತಿ, ಜ್ಞಾನ, ಸಂಸ್ಕೃತಿಯ ಸಂಗಮವಾಗಿದ್ದು, ಸುಮಾರು 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಪ್ರತಿ ವರ್ಷ ಲಕ್ಷಾಂತರ ಮಕ್ಕಳಿಗೆ ಅಕ್ಷರ ದಾಸೋಹ ಮಾಡಿಕೊಂಡು ಬಂದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ ಕೆಂಗೇರಿಯಲ್ಲಿ ಶುಕ್ರವಾರ ನಡೆದ ಬಿಜಿಎಸ್ ಉತ್ಸವದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ಆದಿ ಚುಂಚನಗಿರಿ ಮಠದ ವತಿಯಿಂದ 500 ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲಾಗಿದೆ. ಈ ಸಂಸ್ಥೆಗಳಲ್ಲಿ 1.5 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಉದ್ಯೋಗ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪರ್ಯಾಯವಾಗಿ ನಮ್ಮ ಮಠಮಾನ್ಯಗಳು ರಾಜ್ಯದಲ್ಲಿ ಅಕ್ಷರದಾಸೋಹ ಮಾಡಿಕೊಂಡು ಬಂದಿವೆ. ಇದಕ್ಕಿಂತ ದೊಡ್ಡ ಮಾನವೀಯ ಸೇವೆ ಮತ್ತೊಂದಿಲ್ಲ ಎಂದು ಸರ್ಕಾರದ ಪ್ರತಿನಿಧಿಯಾಗಿ ಹೇಳಬಯಸುತ್ತೇನೆ.

ಈ ಕಾರ್ಯಕ್ರಮದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಗಳನ್ನು ಹಾಗೂ ಅವರ ಮಾರ್ಗದರ್ಶನ ಸ್ಮರಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ.

ಇದು ನಮ್ಮ ಸಂಸ್ಕೃತಿ, ಇದೇ ನಮ್ಮ ದೇಶದ ಆಸ್ತಿ. ಇಂದು ಬಾಲಗಂಗಾಧರನಾಥ ಸ್ವಾಮೀಜಿಗಳ ಜಯಂತಿಯಂದು ನಿಮ್ಮೆಲ್ಲರ ಪರವಾಗಿ ನಾನು ದೀಪ ಬೆಳಗಿಸಿದ್ದೇನೆ. ಶುಭಂ ಕರೋತಿ ಕಲ್ಯಾಣಂ, ಆರೋಗ್ಯ ಧನ ಸಂಪದಂ, ಜ್ಞಾನಶಕ್ತಿ ಸ್ವರೂಪಸ್ಯ ದೀಪ ಜ್ಯೋತಿ ಪ್ರಕಾಶಿತಂ ಶ್ಲೋಕದ ಆಶಯದಂತೆ ನಿಮ್ಮೆಲ್ಲರಿಗೂ ಆರೋಗ್ಯ, ಐಶ್ವರ್ಯ, ಸಂಪತ್ತು, ವಿದ್ಯೆ ಎಲ್ಲವೂ ಸಿಗಲಿ ಎಂದು ಆಶಿಸುತ್ತೇನೆ.

ಶಿಕ್ಷಣ ಸಂಸ್ಥೆ ಕಾರ್ಯಕ್ರಮದಲ್ಲಿ ನಾವು ಸೇರಿದ್ದು, ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ನಾನು ಕೆಲ ಕಾಲ ಕಾರ್ಯಕ್ರಮ ನೋಡಿ ಸಂತೋಷವಾಯಿತು. ಬಿಜಿಎಸ್ ಎಂದರೆ ಕೇವಲ ವಿದ್ಯಾ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಸಾಹಿತ್ಯ, ಕಲೆ ಕ್ಷೇತ್ರಕ್ಕೆ ಆದ್ಯತೆ ನೀಡಿ ಗ್ರಾಮೀಣ ಕಲೆಗಳನ್ನು ಉಳಿಸಿ, ಬೆಳೆಸಲು ಸಹಕಾರ ನೀಡುತ್ತಿದೆ.

ನಾನು 2008ರಲ್ಲಿ ರಾಜ್ಯಶಾಸ್ತ್ರ ಪದವಿ ವ್ಯಾಸಂಗ ಮಾಡಿದೆ. ಇತಿಹಾಸ ಓದುವಾಗ ಅಲೆಕ್ಸಾಡಂರ್ ಭಾರತ ವಶಪಡಿಸಿಕೊಳ್ಳಲು ಹೂರಟಾಗ ತನ್ನ ಗುರು ಅರಿಸ್ಟಾಟಲ್ ಅವರನ್ನು ಭೇಟಿ ಮಾಡುತ್ತಾನೆ. ಆಗ ಅರಿಸ್ಟಾಟಲ್ ಅಲೆಕ್ಸಾಂಡರ್ ಗೆ ಒಂದು ಮಾತು ಹೇಳುತ್ತಾರೆ. ಭಾರತದಿಂದ ಮರಳಿ ಬರುವಾಗ ಐದು ವಸ್ತು ತೆಗೆದುಕೊಂಡು ಬಾ. ರಾಮಾಯಣ, ಮಹಾಭಾರತ ಗ್ರಂಥ, ಗಂಗಾಜಲ, ಕೃಷ್ಣನ ಕೊಳಲು, ಬಾಲಗಂಗಾಧರನಾಥ ಸ್ವಾಮೀಜಿಯಂತಹ ತತ್ವಜ್ಞಾನಿ ಕರೆದುಕೊಂಡು ಬಾ. ಈ ಐದು ವಸ್ತುಗಳನ್ನು ಗೆದ್ದರೆ ಭಾರತವನ್ನೇ ಗೆದ್ದಂತೆ. ನಮ್ಮ ಸಂಸ್ಕೃತಿ ನಮ್ಮ ಮಠ ಮಾನ್ಯಗಳು.

25 ವರ್ಷಗಳ ಹಿಂದೆ ನಾನು ಸಹಕಾರ ಮಂತ್ರಿಯಾಗಿದ್ದಾಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ಯಾರೀಸ್ ದೇಶಕ್ಕೆ ಭೇಟಿ ನೀಡಿದ್ದೆ. ಆ ಕಾರ್ಯಕ್ರಮದ ದಿನ ನನ್ನ ಜನ್ಮದಿನವಾಗಿತ್ತು. ಅಂದು ವೇದಿಕೆ ಮೇಲೆ ಕರೆದು ನನ್ನ ಪರಿಚಯಿಸಿ ಕೇಕ್ ಕತ್ತರಿಸಲು ಹೇಳಿದರು. ಆ ಸಂದರ್ಭದಲ್ಲಿ ಮೇಣದ ದೀಪ ಆರಿಸಲು ಹೇಳಿದರು. ಆಗ ವ್ಯಕ್ತಿಯೊಬ್ಬ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವರು ಭಾರತೀಯರು ಅವರದ್ದು ದೀಪ ಹಚ್ಚುವ ಸಂಸ್ಕೃತಿಯೇ ಹೊರತು, ದೀಪ ಆರಿಸುವ ಸಂಸ್ಕೃತಿಯಲ್ಲ ಎಂದು ಹೇಳಿದರು.

ನೀವು ನಿಮ್ಮ ಮೂಲ ಮರೆಯಬಾರದು. ಪೋಷಕರು, ಶಾಲೆ, ಶಿಕ್ಷಕರೇ ನಿಮ್ಮ ಮೂಲ. ಅವರನ್ನು ಎಂದಿಗೂ ಮರೆಯಬಾರದು. ನಾವು ನಮ್ಮ ಮನೆಗಳನ್ನು ರಕ್ಷಿಸಿಕೊಂಡಂತೆ, ಮಠವನ್ನು ರಕ್ಷಣೆ ಮಾಡಿಕೊಳ್ಳಬೇಕು. ಬಿಜಿಎಸ್ ಸಂಸ್ಥೆ ಆಲದಮರದಂತೆ, ನಿರಂತರವಾಗಿ ಬೆಳೆದು ಜನರಿಗೆ ನೆರಳಾಗಿ ನಿಲ್ಲುತ್ತದೆ. ಬಾಲಗಂಗಾಧರನಾಥ ಸ್ವಾಮೀಜಿಗಳು ಹಾಕಿಕೊಟ್ಟಿರುವ ಅಡಿಪಾಯ ಮಹತ್ವದ್ದಾಗಿದ್ದು, ನಿರ್ಮಲಾನಂದ ಸ್ವಾಮೀಜಿಗಳು ಹಾಗೂ ಇತರೆ ಸ್ವಾಮೀಜಿಗಳು ಬಹಳ ಆಸ್ಥೆಯಿಂದ ಬೆಳೆಸಿಕೊಂಡು ಹೋಗುತ್ತಿದ್ದಾರೆ.

ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ಪ್ರತಿ ವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡಿ ಮಾರ್ಗದರ್ಶನ ನೀಡುತ್ತಿರುವ ಈ ಸಂಸ್ಥೆ ಕೊಡುಗೆ ಅನನ್ಯ.

ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಮಠದ ವತಿಯಿಂದ ಪರಿಸರ ಉಳಿಸಲು 5 ಕೋಟಿ ಗಿಡ ನೆಡುವ ಕಾರ್ಯಕ್ರಮ ಮಾಡಲಾಗಿತ್ತು. ನೀವುಗಳು ಕೂಡ 10 ಗಿಡಗಳನ್ನು ನೆಟ್ಟು ಪರಿಸರ ಉಳಿಸುವ ಕಾರ್ಯ ಮಾಡಬೇಕು. ಪರೋಪಕಾರಾರ್ಥ ವಹಂತಿ ವದ್ಯಃ | ಪರೋಪಕಾರಾರ್ಥ ದುಹಂತಿ ಗಾವಃ || ಪರೋಪಕಾರಾರ್ಥ ಫಲಂತಿ ವೃಕ್ಷಾಃ | ಪರೋಪಕಾರಾರ್ಥಮಿದಂ ಶರೀರಂ||” ಅಂದರೆ ನದಿ ಹರಿಯುವುದು, ಹಸು ಹಾಲು ನೀಡುವುದು, ಮರ ಹಣ್ಣು ನೀಡುವುದು ಬೇರೆಯವರಿಗಾಗಿ. ಅದೇ ರೀತಿ ನಮ್ಮ ಜೀವನವು ಬೇರೆಯವರ ಸಹಾಯಕ್ಕೆ ಮೀಸಲಿಡಬೇಕು.

ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕಲ್ಲನ್ನು ಚಪ್ಪಡಿಯಾಗಿ, ಜಲ್ಲಿಯಾಗಿ, ಕಂಬವಾಗಿ, ವಿಗ್ರಹವಾಗಿ ಬಳಸಬಹುದು. ನೀವು ಕೂಡ ನಿಮ್ಮ ಜೀವನದಲ್ಲಿ ಬೇರೆ ಬೇರೆ ರೀತಿಯಲ್ಲಿ ಸಮಾಜಕ್ಕೆ ನೆರವಾಗಬೇಕು. ಈ ಸಂಸ್ಥೆಯಲ್ಲಿ ಓದಿರುವವರೆಲ್ಲರೂ ಹಳೇ ವಿದ್ಯಾರ್ಥಿಗಳ ಸಂಘಟನೆ ಮಾಡಿಕೊಳ್ಳಬೇಕು. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ದಾನ ಮಾಡಬೇಕು.”