ಬೆಂಗಳೂರು :
ಕೋವಿಡ್ ಸೋಂಕಿನ ಉಪತಳಿಯಾದ JN.1 ಸಂಬಂಧಿಸಿದಂತೆ ರಾಜ್ಯದಲ್ಲಿ ಈವರೆಗೆ 34 ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಮಾರ್ಗಸೂಚಿ ಹೊರಡಿಸಲಾಗಿದೆ.
ಲಭ್ಯವಿರುವ ಮಾಹಿತಿ ಪ್ರಕಾರ JN.1 ಸೋಂಕಿನ ಹರಡುವಿಕೆ ಸಾಮರ್ಥ್ಯ ಹೆಚ್ಚಿರುವುದು ಕಂಡುಬಂದಿದೆ. ಹೊಸವರ್ಷಾಚರಣೆಯ ಸಂದರ್ಭದಲ್ಲಿ ಜನಸಂದಣಿಯಾಗುವ ಹಾಗೂ ಒಳಾಂಗಣ ಜನಸಂದಣಿ ಪ್ರದೇಶಗಳಲ್ಲಿ ಮುಂಜಾಗ್ರತ ಕ್ರಮವಾಗಿ ಸೂಕ್ತ ಕೋವಿಡ್ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ.
ಅಲ್ಲದೇ, 60 ವರ್ಷ ಮೇಲ್ಪಟ್ಟವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ಇತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ.
ರಾಜ್ಯದಲ್ಲಿ ಡಿಸೆಂಬರ್ 26ರವರೆಗೆ 464 ಸಕ್ರಿಯ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 376 ಪ್ರಕರಣಗಳು ವರದಿಯಾಗಿವೆ. ಒಟ್ಟು 74 ಖಚಿತ ಪ್ರಕರಣಗಳಲ್ಲಿ 57 ಪ್ರಕರಣಗಳು ಮತ್ತು 9 ಮರಣ ಪ್ರಕರಣಗಳಲ್ಲಿ 4 ಬೆಂಗಳೂರು ನಗರದಲ್ಲಾಗಿದೆ.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಮುಂಬರುವ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಜನಸಂದಣಿ ಹಾಗೂ ಒಳಾಂಗಣ ಪ್ರದೇಶಗಳಲ್ಲಿ ಜನಸಂದಣಿಯಾಗುವುದನ್ನು ಗಮನದಲ್ಲಿಟ್ಟುಕೊಂಡು, ಮುಂಜಾಗ್ರತಾ ಕ್ರಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಸುವುದರ ಬಗ್ಗೆ ಅರಿವು ಮೂಡಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರಿಗೆ ಸಲಹಾ ಪತ್ರದಲ್ಲಿ ತಿಳಿಸಿರುವಂತೆ, 60 ವರ್ಷ ಮೇಲ್ಪಟ್ಟವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರವವರು ಮಾಸ್ಕ್ ಧರಿಸುವುದನ್ನು ಪುನರುಚ್ಚರಿಸಲಾಗಿದೆ. ಅಲ್ಲದೆ, ಈಗಾಗಲೇ ಹೊರಡಿಸಿರುವ ಮಾರ್ಗದರ್ಶಿ ಸುತ್ತೋಲೆಗಳು ಹಾಗೂ ಸಲಹಾ ಪತ್ರದಲ್ಲಿರುವ ಮಾಹಿತಿಯನ್ನು ಎಲ್ಲಾ ಮಾಧ್ಯಮಗಳ ಮೂಲಕ (ಎಲೆಕ್ಟ್ರಾನಿಕ್/ಪ್ರಿಂಟ್/ ಸೋಶಿಯಲ್ ಮೀಡಿಯಾ) ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸುವಂತೆ ಸೂಚಿಸಲಾಗಿದೆ.