ಬೆಂಗಳೂರು: ಅರೆಸ್ಟ್ ವಾರೆಂಟ್ ಬಂದಿದ್ದರೂ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಅದಾನಿಯನ್ನು ಬಂಧಿಸಿ ತಪ್ಪಿಸಿಕೊಳ್ಳಲು ಬಿಡಬೇಡಿ ಎಂದು ಆಗ್ರಹಿಸಿದರು.

ಮೈಸೂರು ವಿಮಾನ‌ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು.

ಅದಾನಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಪದೇ ಪದೇ ಹರಾಜಾಗುತ್ತಿದೆಯಲ್ಲವೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅದಾನಿಗೆ ರಕ್ಷಣೆ ಕೊಡುತ್ತಿರುವವರು ಯಾರು ಎನ್ನುವುದು ದೇಶಕ್ಕೇ ಗೊತ್ತಿದೆ. ನಿಮಗೆ ಗೊತ್ತಿಲ್ವಾ? ಈ ಸತ್ಯವನ್ನು ಮಾಧ್ಯಮಗಳು ದೇಶದ ಜನರಿಗೆ ಏಕೆ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದರು.

*ರಾಜ್ಯದ ರೈತರಿಗೆ ಕೇಂದ್ರ ಮಾಡಿದ ಅನ್ಯಾಯ ಸರಿಯಾ?

ರೈತರಿಗೆ ರಿಯಾಯ್ತಿ ಬಡ್ಡಿ ದರದಲ್ಲಿ ಕೊಡುವ ಸಾಲದ ಮೊತ್ತವನ್ನು ನಬಾರ್ಡ್ ಈ ಬಾರಿ ಶೇ 58 ರಷ್ಟು ರಾಜ್ಯಕ್ಕೆ ಕಡಿತಗೊಳಿಸಿದೆ. ಇದು ರಾಜ್ಯದ ರೈತರಿಗೆ ಮಾಡಿದ ಪರಮ ಅನ್ಯಾಯ ಎಂದರು.

ಆದರೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಈ ಅನ್ಯಾಯ ಸರಿ ಎಂದು ಹೇಳಿದ್ದಾರಲ್ಲಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜ್ಯದ ರೈತರಿಗೆ ಕೇಂದ್ರ ಅನ್ಯಾಯ ನಾಡಿದ್ದು ಸರಿ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದರೆ ಮಣ್ಣಿನ ಮಗ, ರೈತರ ಮಗ ಅಂದುಕೊಂಡಿರುವ ಹೆಚ್.ಡಿ.ಕುಮಾರಸ್ವಾಮಿಯವರು ಉಸಿರೇ ಬಿಡ್ತಿಲ್ಲವಲ್ಲ ಏಕೆ ಎಂದು ಪ್ರಶ್ನಿಸಿದರು.

ವರ್ಷದಿಂದ ವರ್ಷಕ್ಕೆ ನಬಾರ್ಡ್ ನಿಂದ ರಾಜ್ಯದ ರೈತರಿಗೆ ಕೊಡುವ ಸಾಲದ ಪ್ರಮಾಣ ಹೆಚ್ಚಾಗಬೇಕು. ಆದರೆ ಈ ಬಾರಿ ಕಡಿತಗೊಳಿಸಿದೆ.

ರೈತರಿಗೆ ಶೇ4.5 ಬಡ್ಡಿದರದಲ್ಲಿ ನಬಾರ್ಡ್ ರಾಜ್ಯದ ರೈತರಿಗೆ ಸಾಲ ಕೊಡುತ್ತದೆ. ಈ ಬಡ್ಡಿಯನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಆದರೆ ಈಗ ನಬಾರ್ಡ್ ಸಾಲದ ಪ್ರಮಾಣ ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕ್ ಗಳ ಬಳಿ ಸಾಲಕ್ಕೆ ಹೋಗಿ ಶೇ10 ರಷ್ಟು ಬಡ್ಡಿ ಕಟ್ಟಬೇಕು. ಇದು ರಾಜ್ಯಕ್ಕೆ ಆಗುವ ನಷ್ಟ. ಇಷ್ಟು ದೊಡ್ಡ ಪ್ರಮಾಣದ ಅನ್ಯಾಯವನ್ನು ಜೋಶಿ ಸಮರ್ಥಿಸಿಕೊಂಡಿದ್ದಾರೆ. ರಾಜ್ಯದಿಂದಲೇ ಆಯ್ಕೆ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಈ ಅನ್ಯಾಯ ಸರಿ ಪಡಿಸಿ ಎಂದು ಮನವಿ ಕೊಟ್ಟಿದ್ದೇನೆ. ರಾಜ್ಯದ ರೈತರ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಅನ್ಯಾಯ ಸರಿಪಡಿಸಲಿ ಎಂದು ಸವಾಲು ಹಾಕಿದರು.‌

*ಆಹಾರ ಭದ್ರತಾ ಕಾಯ್ದೆ ನಮ್ಮದು-ವಿರೋಧಿಸಿದ್ದು ಮುರಳಿ ಮನೋಹರ ಜೋಶಿ

ಕೇಂದ್ರ ಸರ್ಕಾರವೇ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಿದೆ. ಈಗ ಅವರೇ ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರಲ್ಲಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಆಕ್ರೋಶಗೊಂಡ ಸಿಎಂ, ಆಹಾರ ಭದ್ರತಾ ಕಾಯ್ದೆಯನ್ನು ಜಾರಿ ಮಾಡಿದ್ದು ಪ್ರಧಾನಿ ಮನಮೋಹನ್ ಸಿಂಗ್ ಅವರು. ಇದನ್ನು ಬಿಜೆಪಿ ವಿರೋಧಿಸಿತ್ತು. ಹಿಂದಿನ‌ ಕೇಂದ್ರ ಸಚಿವರಾಗಿದ್ದ ಮುರಳಿ ಮನೋಹರ ಜೋಶಿಯವರು ಆಹಾರ ಭದ್ರತೆ ಕಾಯ್ದೆಯನ್ನು ವಿರೋಧಿಸಿದ್ದರು. ಈಗ ಅನ್ಯಾಯ ಅನ್ಯಾಯ ಅಂತ ಸುಳ್ ಸುಳ್ಳೇ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೊದಲಿಗೆ ರಾಜ್ಯದ ಜನರಿಗೆ ಏಳು ಕೆಜಿ ಅಕ್ಕಿ ಕೊಟ್ಟವರು ನಾವು. ಇದನ್ನು ಐದು ಕೆಜಿಗೆ ಇಳಿಸಿದ್ದು ಯಡಿಯೂರಪ್ಪ. ಈಗ ಯಡಿಯೂರಪ್ಪ ಅವರ ಮಗ ವಿಜಯೇಂದ್ರನಿಗೆ ಈ ಬಗ್ಗೆ ಮಾತಾಡಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಅಕ್ಕಿ ಪ್ರಮಾಣವನ್ನು ಐದು ಕೆಜಿಗೆ ಇಳಿಸಿದ್ದನ್ನು ಹತ್ತು ಕೆಜಿಗೆ ಏರಿಸಿದ್ದು ನಾವು. ಈ ಸತ್ಯ ರಾಜ್ಯದ ಜನರಿಗೆ ಗೊತ್ತಿದೆ ಎಂದರು.

*ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ: ಸಿಎಂ ಪ್ರಶ್ನೆ

ಸರ್ಕಾರಿ ನೌಕರರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ? ಆದಾಯ ತೆರಿಗೆ ಪಾವತಿಸುವವರಿಗೂ ಬಿಪಿಎಲ್ ಕಾರ್ಡ್ ಕೊಡಬೇಕಾ? ಏನ್ ಆರ್.ಅಶೋಕಾ ಫೋಟೋ ತೆಗೆಸಿಕೊಂಡಿದ್ದೇ ಕೊಂಡಿದ್ದು ಎಂದು ಲೇವಡಿ ಮಾಡಿದರು.

ಸರ್ಕಾರಿ ನೌಕರರಿಗೆ, ಆದಾಯ ತೆರಿಗೆ ಪಾವತಿಸುವವರಿಗೆ ಬಿಪಿಎಲ್ ಕಾರ್ಡ್ ಕೊಡಬಾರದು ಅಂತ ನಿಯಮಾವಳಿ, ಗೈಡ್ ಲೈನ್ ರಚಿಸಿದ್ದೇ ಬಿಜೆಪಿ‌. ಈಗ ಇವರೇ ಪ್ರತಿಭಟನೆ ಅಂತ ಫೋಟೋ ತೆಗೆಸಿಕೊಳ್ತಾ ಇದಾರೆ ಎಂದು ಲೇವಡಿ ಮಾಡಿದರು.

 

ಡಾಕ್ಟರ್ ಓದಿರ್ತಾರೆ, ಎಂಜಿನಿಯರಿಂಗ್ ಓದಿರ್ತಾರೆ. ಆದರೆ ಮೌಢ್ಯ, ಕಂದಾಚಾರ ಬಿಡೋದೇ ಇಲ್ಲ. ಇಂಥಾ ಶಿಕ್ಷಣ ಬೇಕಾ: ಸಿ‌.ಎಂ.ಸಿದ್ದರಾಮಯ್ಯ ಪ್ರಶ್ನೆ

ಬಸವಣ್ಣನವರು ಕರ್ಮ‌ ಸಿದ್ಧಾಂತ ತಿರಸ್ಕರಿಸಿದ್ದರು: ಈಗ ಬಸವಣ್ಣನವರ ಹೆಸರಲ್ಲೇ ಕರ್ಮಸಿದ್ಧಾಂತ ಪಾಲಿಸುವವರು ಇದ್ದಾರೆ: ಸಿಎಂ

ಮೈಸೂರು: ಡಾಕ್ಟರ್ ಓದಿರ್ತಾರೆ, ಎಂಜಿನಿಯರಿಂಗ್ ಓದಿರ್ತಾರೆ. ಆದರೆ ಮೌಡ್ಯ, ಕಂದಾಚಾರ ಬಿಡೋದೇ ಇಲ್ಲ. ಇಂಥಾ ಶಿಕ್ಷಣ ಬೇಕಾ?
ಬಸವಣ್ಣನವರು ಕರ್ಮ‌ ಸಿದ್ಧಾಂತ ತಿರಸ್ಕರಿಸಿದ್ದರು. ಈಗ ಬಸವಣ್ಣನವರ ಹೆಸರಲ್ಲೇ ಕರ್ಮಸಿದ್ಧಾಂತ ಪಾಲಿಸುವವರು ಇದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಸಿದ್ಧಾರ್ಥ ಎಜುಕೇಷನ್ ಸೊಸೈಟಿಯ ಕ್ವೆಸ್ಟ್ ಶಿಕ್ಷಣ ಅಕಾಡೆಮಿಯನ್ನು ಉದ್ಘಾಟಿಸಿ ಮಾತನಾಡಿದರು.

ಬರೀ ಶಿಕ್ಷಣ ಸಿಕ್ಕರೆ ಸಾಲದು. ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ವಿಕಾಸ ಆಗಲು, ಸ್ವಾಭಿಮಾನಿಗಳಾಗಲು ಶಿಕ್ಷಣ ಅತ್ಯಗತ್ಯ. ಬಹಳ ಮಂದಿ ಶಿಕ್ಷಿಣ ಪಡೆದಿರುತ್ತಾರೆ, ಆದರೆ ಅವರಲ್ಲಿ ಸಾಮಾಜಿಕ ಸ್ಪಂದನೆ, ಮಾನವೀಯ ಸ್ಪಂದನೆ ಇರುವುದಿಲ್ಲ. ಶಿಕ್ಷಣ ಕಲಿತೂ ಜಾತಿವಾದಿಗಳಾದು, ಧಾರ್ಮಿಕ ತಾರತಮ್ಯ ಪಾಲಿಸೋದು ಮಾಡಿದ್ರೆ ಅಂಥಾ ಶಿಕ್ಷಣದಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಕೆಲವರು ಮಾತ್ರ ಸಮಾಜದ ಸವಲತ್ತುಗಳನ್ನು ಅನುಭವಿಸಬೇಕಾ? ಸಮಾಜದ ಪ್ರತಿಯೊಬ್ಬರಿಗೂ ಈ ಸವಲತ್ತುಗಳು ಸಿಗಬೇಕು ತಾನೇ? ಸಾಮಾಜಿಕ ತಾರತಮ್ಯ ಹೋಗಬೇಕೂ ತಾನೇ ಎಂದು ಪ್ರಶ್ನಿಸಿದರು.

ಡಾಕ್ಟರ್ ಓದಿರ್ತಾರೆ, ಎಂಜಿನಿಯರಿಂಗ್ ಓದಿರ್ತಾರೆ. ಆದರೆ ಮೌಢ್ಯ, ಕಂದಾಚಾರ ಬಿಡೋದೇ ಇಲ್ಲ. ಇಂಥಾ ಶಿಕ್ಷಣ ಬೇಕಾ ಎಂದು ಪ್ರಶ್ನಿಸಿದರು.

ಬಸವಣ್ಣನವರು ಜಾತಿ ವ್ಯವಸ್ಥೆ ವಿರುದ್ಧ ಸಂದೇಶ ಕೊಟ್ಟು 850 ವರ್ಷ ಆಯ್ತು. ಆದರೆ ಇವತ್ತೂ ಅವರೆಲ್ಲಾ ಜಾತಿ ಮಾಡ್ತಾನೇ ಇದಾರೆ. ಇದು ತಪ್ಪಲ್ವಾ ಎಂದು ಪ್ರಶ್ನಿಸಿದರು.

ಶಿಕ್ಷಣ ಪ್ರತಿಯೊಬ್ಬರ ಹಕ್ಕು. ಈ ಹಕ್ಕು ಸುಮ್ಮನೆ ಬರಲಿಲ್ಲ. ಶೂದ್ರರ ರೀತಿ, ಮಹಿಳೆಯರನ್ನೂ ಸಂಪೂರ್ಣವಾಗಿ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿ ಮೂಲೆಯಲ್ಲಿ ಇರಿಸಲಾಗಿತ್ತು. ಆದರೆ ಈಗ ನಿರಂತರ ಹೋರಾಟದ ಫಲವಾಗಿ ಶಿಕ್ಷಣದ ಹಕ್ಕು ಬಂದಿದೆ. ಈ ಶಿಕ್ಷಣ ವೈಚಾರಿಕವಾಗಿರಬೇಕು, ವೈಜ್ಞಾನಿಕವಾಗಿರಬೇಕು ಎಂದರು.

*ಬಸವಣ್ಣನವರು ಕರ್ಮ‌ ಸಿದ್ಧಾಂತ ತಿರಸ್ಕರಿಸಿದ್ದರು

ಬಸವಣ್ಣನವರು ಕರ್ಮ‌ ಸಿದ್ಧಾಂತ ತಿರಸ್ಕರಿಸಿದ್ದರು. ಹಣೆಬರಹ ಅನ್ನೋದನ್ನೆಲ್ಲಾ ಧಿಕ್ಕರಿಸಿದ್ದರು. ಆದರೂ ಈಗಲೂ ಬಸವಣ್ಣನವರ ಹೆಸರಲ್ಲಿ ಕರ್ಮಸಿದ್ಧಾಂತ ಪಾಲಿಸುವ ಶಿಕ್ಷಿತರಿದ್ದಾರೆ. ಇಂಥಾ ಶಿಕ್ಷಣ ಬೇಡವೇ ಬೇಡ ಎಂದರು.

*ನಮ್ ಜಾತಿಯವನು ಅದ್ಕೆ ಓಟು ಹಾಕಿ: ಸಿ.ಎಂ ವ್ಯಂಗ್ಯ

ಹೇಳಿಕೊಳ್ಳೋಕೆ ವಿದ್ಯಾವಂತರು. ಆದರೆ, ಇವನು ನಮ್ ಜಾತಿಯವನಲ್ಲ, ಓಟು ಹಾಕೋದು ಬೇಡ ಅಂತಾರೆ. ಮತ್ತೆ ಕೆಲವರು ಇವನು ನಮ್ಮ ಜಾತಿಯವನು ಅದಕ್ಕೇ ಓಟು ಹಾಕಿ ಅಂತಾರೆ. ಅವನಿಗೆ ರಾಜಕೀಯ ಪ್ರಜ್ಞೆ , ತಿಳಿವಳಿಕೆ ಇದೆಯೊ, ಇಲ್ವೋ ಗೊತ್ತಿಲ್ಲ. ಕಾಳಜಿ ಇದೆಯೋ, ಇಲ್ವೋ ಗೊತ್ತಿಲ್ಲ. ಜಾತಿ ನೋಡು, ಓಟು ಹಾಕು ಅಷ್ಟೆ. ಇದಕ್ಕೆ ವಿದ್ಯೆ ಕಲಿಬೇಕಾ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಶಾಸಕರೊಬ್ಬರ ಮಾತನ್ನು ಸ್ಮರಿಸಿದ ಸಿಎಂ, ಅವರು ರಾತ್ರಿ ಮಲಗುವಾಗಲೂ ಕೈ ಮುಗಿಯುತ್ತಲೇ ಮಲಗೋದಂತೆ. ಕೈ ಮುಗಿಯೋದು ರೂಢಿ ಆಗೋಗಿತ್ತು. ಇಂಥವರೆಲ್ಲಾ ಈಗ ರಾಜಕಾರಣಕ್ಕೆ ಬರ್ತಿದ್ದಾರೆ. ವಿದ್ಯಾವಂತ ಜಾತಿವಾದಿಗಳಿಂದ ಇಂಥವರು ಬರ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಸಿದ್ಧಾರ್ಥ ಸಂಸ್ಥೆಯ ಅಧ್ಯಕ್ಷ, ಗೃಹ ಸಚಿವ ಜಿ.ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ , ಶಾಸಕರಾದ ತನ್ವೀರ್ ಸೇಠ್ , ಕೃಷ್ಣಮೂರ್ತಿ, ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ಕನ್ನಿಕಾ ಪರಮೇಶ್ವರಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.