ಹುಬ್ಬಳ್ಳಿ: ಭಾರತದ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ವಿವಾದಾತ್ಮಕ ತೀರ್ಪಿಗೆ ಔಟ್ ಆಗಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ -ಧಾರವಾಡ ಪೊಲೀಸರ ಎಕ್ಸ್ ಪೋಸ್ಟುಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಗವಾಸ್ಕರ್- ಬಾರ್ಡರ್ ಟೆಸ್ಟ್ನ ಮೊದಲ ಪಂದ್ಯದಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟಿಗ ಕೆ.ಎಲ್. ರಾಹುಲ್ ಔಟ್ ಆಗಿರುವುದು ಬಹು ದೊಡ್ಡ ಚರ್ಚೆ ಹುಟ್ಟು ಹಾಕಿದೆ. ಪಂದ್ಯದ 23 ನೇ ಓವರ್ ಸಂದರ್ಭದಲ್ಲಿ ಮೂರನೇ ಅಂಪೈರ್‌ ನೀಡಿದ ತೀರ್ಪಿಗೆ ಕೆ.ಎಲ್ .ರಾಹುಲ್ ಔಟ್ ಆಗಿದ್ದಾರೆ. ಆಗ ಅವರು 23 ರನ್ ಗಳಿಸಿದ್ದರು.

ಈ ಬಗ್ಗೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸರು ಎಕ್ಸ್ ಪೋಸ್ಟ್ ಗಮನ ಸೆಳೆದಿದ್ದು ಬ್ಯಾಟ್ ಹಾಗೂ ಬಾಲ್ ನಡುವಿನ ಅಂತರ ಕಾಣಿಸದಿದ್ದರೆ ದಯಮಾಡಿ ಇಂದು ರಾತ್ರಿ ರಸ್ತೆಯಲ್ಲಿ ವಾಹನ ಚಲಾಯಿಸಬೇಡಿ ಎಂದು ಹಾಸ್ಯಾತ್ಮಕವಾಗಿ ಬರೆದುಕೊಂಡಿದ್ದಾರೆ !

ಇದಕ್ಕೆ ಟಿವಿ ರಿಪ್ಲೈ ಚಿತ್ರ ಬಳಸಲಾಗಿದೆ. ಇದು ನೆಟ್ಟಿಗರ ಮನೆ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಿಚೆಲ್ ಸ್ಟಾರ್ಕ್ ಅವರು ಎಸೆದ ಎಸೆತವನ್ನು ಡಿಫೆಂಡ್ ಮಾಡಲು ರಾಹುಲ್ ಯತ್ನಿಸಿದರು. ಬ್ಯಾಟ್ ಗೆ ಮುಟ್ಟಿದೆ ಎನ್ನುವಷ್ಟು ಸನಿಹದಿಂದ ಬಾಲ್ ಕೀಪರ್ ಕೈ ಸೇರಿದೆ. ಆಗ ಕೀಪರ್ ಮಾಡಿದ ಮನವಿಯನ್ನು ಅನ್ ಫೀಲ್ಡ್ ಅಂಪೈರ್ ತಿರಸ್ಕರಿಸಿದ್ದಾರೆ. ಈ ಬಗ್ಗೆ ಆಸ್ಟ್ರೇಲಿಯಾ ತಂಡ ಮೇಲ್ಮನವಿ ಸಲ್ಲಿಸಿತು, ಪರಿಶೀಲನೆ ವೇಳೆ ಸ್ನೀಕೋ ಮೀಟರ್ ನಲ್ಲಿ ಏರಿಳಿತ ಕಂಡುಬಂತು. ಆದರೆ ಮತ್ತೊಂದು ಕೋನದಲ್ಲಿ ಚೆಂಡು ಬ್ಯಾಟಿಗೆ ತಾಗದೆ ಇರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಶಬ್ದ ಬ್ಯಾಟಿನದ್ದೊ ಅಥವಾ ಪ್ಯಾಡಿನದ್ದೋ ಎಂಬ ನಿರ್ಧಾರಕ್ಕೆ ಬರಲಾಗದೆ ಮೂರನೇ ಅಂಪೈರ್ ತೀರ್ಪು ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ಕ್ರಿಕೆಟ್ ಪ್ರೇಮಿಗಳು ಹಾಗೂ ಕ್ರಿಕೆಟ್ ದಿಗ್ಗಜರು ರಾಹುಲ್ ಅವರನ್ನು ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿರುವ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.