ಬೆಳಗಾವಿ : ಪ್ರತಿಯೊಬ್ಬರಿಗೆ ಪರಿಸರದ ಸಾಕ್ಷರತೆ ಇರಬೇಕು. ಪರಿಸರವಿದ್ದರೆ ಮಾನವ ಎಂಬುದನ್ನು ಅರಿತುಕೊಂಡು ಪ್ರತಿಯೊಬ್ಬರು ಪರಿಸರಕ್ಕೆ ಪೂರಕವಾಗಿ ಬದುಕಬೇಕು ಎಂದು ಭಾರತೀಯ ಅರಣ್ಯ ಸೇವಾ ಅಧಿಕಾರಿ ಮಂಜುನಾಥ ಆರ್ ಚೌವ್ಹಾಣ್ ಅಭಿಪ್ರಾಯಪಟ್ಟರು.
ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಭೂ ಮಾಹಿತಿ ಶಾಸ್ತ್ರ ವಿಭಾಗದಿಂದ ಬುಧವಾರ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಭೌಗೋಳಿಕ ಮಾಹಿತಿ ವ್ಯವಸ್ಥೆ ದಿನಾಚರಣೆಯ ನಿಮಿತ್ತ ಹವಾಮಾನ ಬದಲಾವಣೆ ಮತ್ತು ದೂರ ಸಂವೇದನಾಶೀಲತೆ ಎಂಬ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಹವಾಮಾನ ಬದಲಾವಣೆಯು ಕೈಗಾರಿಕೆಯಿಂದ ಹೊರಬರುವ ತ್ಯಾಜ್ಯವಸ್ತುಗಳು, ಹೊರಸೂಸುವ ವಿಷಪೂರಿತ ಗಾಳಿ, ವಾಹನದಿಂದ ಹೊರಸೂಸುವ ವಿಷಯುಕ್ತ ಅನಿಲ ಇನ್ನೂ ಅನೇಕ ಮೂಲಗಳಿಂದ ಜಲಮಾಲಿನ್ಯ, ವಾಯುಮಾಲಿನ್ಯ, ಮಣ್ಣು ಮಲೀನವಾಗುವುದರ ಜೊತೆಗೆ ಜೀವಿಗಳ ಮೇಲೆ ಅಪಾರವಾದ ಪರಿಣಾಮ ಬೀರುತ್ತಿದೆ. ಇದರಿಂದಾಗಿ ಭೂಮಿಯ ಮೇಲಿನ ಜೀವ ಸಂಕುಲಕ್ಕೆ ಗಂಡಾಂತರ ಎದುರಾಗಿದೆ. ಇಂಥ ಸಂದರ್ಭದಲ್ಲಿ ಜಗತ್ತು ಹವಾಮಾನ ವೈಪರಿತ್ಯದ ಕಡೆಗೆ ತುರ್ತಾಗಿ ಗಮನ ಹರಿಸಬೇಕು. ಅದಕ್ಕೆ ಬೇಕಾದ ಅತ್ಯುತ್ತಮ ಯೋಜನೆಗಳನ್ನು ರೂಪಿಸಬೇಕು. ತನ್ನ ಬದುಕಿನ ಜೊತೆಗೆ ಇತರ ಜೀವಿಗಳ ಬದುಕು ಇದೆ ಎಂಬುದನ್ನು ಮಾನವ ಅರಿತು ಬದುಕಬೇಕು. ಹವಾಮಾನ ಬದಲಾವಣೆಯನ್ನು ಎದುರಿಸಲ್ಲಿ ಅರಣ್ಯ ನಿರ್ವಹಣೆಯೂ ಒಂದು. ಹವಾಮಾನ ಬದಲಾವಣೆಯನ್ನು ತಡೆಯುವ ಅನೇಕ ಮಾರ್ಗಗಳಲ್ಲಿ ಪ್ರಮುಖವಾದುದು ಮರಗಳನ್ನು ಬೆಳೆಸುವುದಾಗಿದೆ. ಭೌಗೋಳಿಕ ಮಾಹಿತಿ ದಿನಾಚರಣೆಯು ಮಹತ್ವವಾದ ದಿನಾಚರಣೆಯಾಗಿದೆ. ಪರಿಸರ ನಿರ್ವಹಣೆ, ನಗರ ಯೋಜನೆ, ವಿಪತ್ತು ಪ್ರತಿಕ್ರಿಯೆ ಮತ್ತು ಸಾರ್ವಜನಿಕ ಆರೋಗ್ಯದಂತಹ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜಿಐಎಸ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ದಿವೇಚಾ ಸೆಂಟರ್ ಫಾರ್ ಕ್ಲೈಮೇಟ್ ಚೇಂಜನ ವಿಜ್ಞಾನಿ ಡಾ. ಅನಿಲ್ ಕುಲಕರ್ಣಿ ಅವರು ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಗುರುತಿಸುವಲ್ಲಿ ಮತ್ತು ಪರಿಹರಿಸುವಲ್ಲಿ ಜಿಐಎಸ್ ಉಪಕರಣಗಳು ಮತ್ತು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳು ಹೇಗೆ ಪ್ರಮುಖವಾಗಿವೆ ಎಂಬುದನ್ನು ವಿವರಿಸಿದರು.
ಹವಾಮಾನ ಬದಲಾವಣೆ ಮತ್ತು ದೂರ ಸಂವೇದಿ ಕುರಿತು ಅದರ ಒಳನೋಟಗಳನ್ನು ಬಿಚ್ಚಿಟ್ಟರು.ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಭಾರತ ಸರ್ಕಾರದ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿಜ್ಞಾನಿ ಡಾಕ್ಟರ್ ರತ್ನ ವಿ ಅವರು ಹವಾಮಾನ ಬದಲಾವಣೆ ಮತ್ತು ಅರಣ್ಯ ರಕ್ಷಣೆ ಕುರಿತು ಮಾತನಾಡಿ, ಹವಾಮಾನ ರಕ್ಷಣೆಯಲ್ಲಿ ಅರಣ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಅರಣ್ಯ ಸಂರಕ್ಷಣೆಯ ಕಾರ್ಯತಂತ್ರಗಳ ಕುರಿತು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ, ಹವಾಮಾನ ಬದಲಾವಣೆ ಇಂದು ಒಂದು ದೇಶದ ಸಮಸ್ಯೆಯಾಗಿ ಉಳಿದಿಲ್ಲ. ಅದು ಜಾಗತಿಕ ಸಮಸ್ಯೆಯಾಗಿದೆ. ಒಂದು ದೇಶದ ಹವಾಮಾನ ವೈಪರೀತ್ಯವು ಇನ್ನೊಂದು ದೇಶದ ಮೇಲೆ ಪರಿಣಾಮ ಬೀರುತ್ತಿದೆ. ಹವಾಮಾನ ಬದಲಾವಣೆಯ ಕುರಿತು ಪ್ರತಿಯೊಬ್ಬ ವಿದ್ಯಾರ್ಥಿಯೂ ಗಮನ ಹರಿಸಬೇಕು. ಉತ್ತಮ ಪರಿಸರ ಉತ್ತಮ ಜೀವಸಂಕುಲ ಎಂಬುದನ್ನು ನಾವೆಲ್ಲರೂ ಅರಿತು ಪಾಲಿಸಬೇಕು. ನಮ್ಮ ಮಹಾವಿದ್ಯಾಲಯದಲ್ಲಿ ಪರಿಸರಕ್ಕೆ ಸಂಬಂಧಿಸಿದ ದಿನಾಚರಣೆಗಳನ್ನು ವಿಶೇಷವಾಗಿ ಆಚರಿಸುವುದರ ಜೊತೆಗೆ ವಿದ್ಯಾರ್ಥಿಗಳು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದೇವೆ ಎಂದರು.
ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ ಪ್ರಾಜೆಕ್ಟ್ ಗಳನ್ನು ಇಬ್ಬರೂ ಸಂಪನ್ಮೂಲ ವ್ಯಕ್ತಿಗಳು ಮೌಲ್ಯಮಾಪನ ಮಾಡಿ, ಸ್ವಯಂ ಚಾಲಿತ ಬೀದಿ ದೀಪ ಸಿದ್ಧಪಡಿಸಿದ ರಾಮೇಶ್ವರ ಮತ್ತು ತಂಡಕ್ಕೆ ಮೊದಲ ಸ್ಥಾನ ಹಾಗೂ ಜಿಐಎಸ್ ನಲ್ಲಿ ವೃತ್ತಿ ಜೀವನದ ಅಂಶಗಳು ಕುರಿತು ಸಿದ್ಧಪಡಿಸಿದ ಕರಣ್ ಪವರ್ ಮತ್ತು ತಂಡಕ್ಕೆ ದ್ವಿತೀಯ ಸ್ಥಾನವನ್ನು ನೀಡಿದರು.
ವಿದ್ಯಾರ್ಥಿನಿ ಮೇಘಾ ಹೆಚ್. ನಿರೂಪಿಸಿದರು, ಸುಮಾ ಟಿ. ಸ್ವಾಗತಿಸಿದರು, ಮೇಘಾ ಬಿ. ವಂದಿಸಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ, ಗದಗ ಬಾಗಲಕೋಟೆಯ ವಿವಿಧ ತಾಂತ್ರಿಕ ಮತ್ತು ಪ್ರಥಮ ದರ್ಜೆ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.