ಬೆಳಗಾವಿ : ಮೂಡಲಗಿ ಆರ್ಡಿಎಸ್ ಸಂಸ್ಥೆಯ ಮೈದಾನದಲ್ಲಿ ನ. 23 ಮತ್ತು 24 ರಂದು ಬೆಳಗಾವಿ ಜಿಲ್ಲಾ 16 ನೇ ಕನ್ನಡ ಸಾಹಿತ್ಯ ನಡೆಯಲಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಲುವಾಗಿ ಪುರಸಭೆಯ ವಿವಿಧ ಅನುದಾನದ ಅಡಿಯಲ್ಲಿ ರೂ. 1.14 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗಿದೆ.
ಮೆರವಣಿಗೆ ಉದ್ಘಾಟನೆ: ನ. 23ರಂದು ಬೆಳಿಗ್ಗೆ 8.30ಕ್ಕೆ
ಶಿವಾಪುರದ ಅಡವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಮ್ಮೇಳನ ನೆರವೇರಲಿದೆ. ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಪುರಸಭೆ ಅಧ್ಯಕ್ಷೆ ಖುರ್ಷದಾ ಬೇಗಂ ನದಾಫ್, ಉಪಾಧ್ಯಕ್ಷೆ ಭೀಮವ್ವಾ ಪೂಜೇರಿ ಉದ್ಘಾಟಿಸುವರು. ತಾಲೂಕು ಆಡಳಿತದ ಅಧಿಕಾರಿಗಳು, ಪುರಸಭೆ ಸದಸ್ಯರು, ತಾಲೂಕಿನ ಎಲ್ಲ ಗ್ರಾಮ ಪಂಚಾಯ್ತಿಯ ಸದಸ್ಯರು ಭಾಗವಹಿಸುವರು.ಸಮ್ಮೇಳನದ ಉದ್ಘಾಟನೆ: ನ. 23ರಂದು ಬೆಳಿಗ್ಗೆ 11ಕ್ಕೆ
ಮೂಡಲಗಿ ಶಿವಬೋಧರಂಗ
ಮಠದ ಪೀಠಾಧಿಪತಿ ದತ್ತಾತ್ರಯಬೋಧ ಸ್ವಾಮೀಜಿ, ಶ್ರೀಧರಬೋಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಚಿಂತಕ ಪ್ರೊ.ಚಂದ್ರಶೇಖರ ಅಕ್ಕಿ ಸಮ್ಮೇಳನಾಧ್ಯಕ್ಷತೆ ವಹಿಸುವರು. ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಪ್ರಭಾಕರ ಕೋರೆ ಧ್ವಜ ಹಸ್ತಾಂತರಿಸುವರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ ಜೋಶಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು. ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಸಂಸದರಾದ ಜಗದೀಶ ಶೆಟ್ಟರ, ವಿಶ್ವೇಶ್ವರ ಕಾಗೇರಿ, ಶಾಸಕ ರಮೇಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಾಹಿತಿ ಬಾಳಾಸಾಹೇಬ ಲೋಕಾಪುರ ಭಾಗವಹಿಸುವರು. ಜಿಲ್ಲೆಯ ಎಲ್ಲ ಶಾಸಕರು ಅತಿಥಿಗಳಾಗಿ ಪಾಲ್ಗೊಳ್ಳುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಆಶಯ ನುಡಿಯನ್ನಾಡುವರು. ಮೂಡಲಗಿ ತಾಲೂಕು ಘಟಕದ ಅಧ್ಯಕ್ಷ ಸಂಜಯ ಶಿಂಧಿಹಟಿ, ಪ್ರಾಸ್ತಾವಿಕ ಮಾತನಾಡುವರು.
ಗೋಕಾವಿ ನಾಡಿನ ಸಾಂಸ್ಕೃತಿಕ ಸಿರಿ ಪ್ರೊ. ಚಂದ್ರಶೇಖರ ಅಕ್ಕಿ ಸಮ್ಮೇಳನದ ಅಧ್ಯಕ್ಷತೆ ಸೌಭಾಗ್ಯ :
ಸಾಹಿತ್ಯ ಹಾಗೂ ಸಾಂಸ್ಕೃತಿಕ
ಸಂಘಟನೆಗಳಲ್ಲಿ ಐದು ದಶಕಗಳಿಂದ ತೊಡಗಿಸಿಕೊಂಡಿರುವ ಪ್ರೊ.ಚಂದ್ರಶೇಖರ ಅಕ್ಕಿ ನ. 23 ಮತ್ತು 24ರಂದು ಮೂಡಲಗಿಯಲ್ಲಿ ನಡೆಯರುವ ಬೆಳಗಾವಿ ಜಿಲ್ಲೆಯ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಗೌರವ ಸಿಕ್ಕಿದೆ.
ಗೋಕಾಕ ತಾಲೂಕಿನ ಶಿಲ್ತಿಭಾವಿ ಗ್ರಾಮದ ಕೃಷಿ ಮತ್ತು ಸಂಪ್ರದಾಯ ಕುಟುಂಬದಲ್ಲಿ 1948 ರ ಜೂನ್ 1 ರಂದು ಅವರು ಜನಿಸಿರುವರು. ತಂದೆ ದುಂಡಪ್ಪ ಸ್ವಾತಂತ್ರ ಹೋರಾಟಗಾರ, ತಾಯಿ ಅಂಬವ್ವ. ಪ್ರಾಥಮಿಕ ಶಿಕ್ಷಣವನ್ನು ಶಿಲ್ತಿಭಾವಿಯಲ್ಲಿ ಮುಗಿಸಿ, 1974ರಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂ.ಎ. ಪದವಿ ಮುಗಿಸಿದರು. ತಾವು ಪದವಿ ಓದಿದ ಗೋಕಾಕದ ಜೆಎಸ್ಎಸ್ ಮಹಾವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಿಸಿದರು.ಕಥೆ, ಕವನ, ವಿಮರ್ಶೆ, ಬರವಣಿಗೆಯ ಮೂಲಕ ಕಾಲೇಜು ಮತ್ತು ಗೋಕಾವಿ ನಾಡಿನಲ್ಲಿ ಸಾಹಿತ್ಯ, ಸಾಂಸ್ಕೃತಿಕ ಪರಿಸರ ಬೆಳೆಸಿದ ಕೀರ್ತಿ ಅವರದು. ಸಾವಿರಾರು ಶಿಷ್ಯ ವೃಂದಕ್ಕೆ ಪ್ರೀತಿಯ ಗುರು ಎನಿಸಿಕೊಂಡಿದ್ದಾರೆ.
‘ಕಸಿ’ ಕಥಾ ಸಂಕಲನವು ಅವರೊಬ್ಬ ಸತ್ವಶಾಲಿ ಕಥೆಗಾರ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ ಸರ್ಕಾರದಿಂದ ಪ್ರಕಟವಾದ ಸಂಸದೀಯ ಪಟು ಎ.ಆರ್. ಪಂಚಗಾಂವಿ, ಮಹಾದೇವಪ್ಪ ಮುನವಳ್ಳಿ ಅವರ ಚರಿತ್ರೆ, ನಿಂಗಣ್ಣ ಸಣ್ಣಕ್ಕಿ ಅವರ ಅಭಿನಂದನಾ ಗ್ರಂಥ ‘ಹಾಲುಬಾನ’, ಗೋಕಾವಿ ಸಂಸ್ಕೃತಿ ಸಂಪದ, ಬೆಳಗಾವಿ ಬೆಳಕು, ದಾಸೋಹಿ, ಕಥಾಂತರಂಗ, ವಿಮರ್ಶಾ ಸಂಚಯ ಈ ಎಲ್ಲ ಸಂಪಾದನೆ ಮಾಡಿದ್ದಾರೆ.
ಬಸವರಾಜ ಕಟ್ಟಿಮನಿ ಪ್ರತಿಷ್ಠಾನದ ಸದಸ್ಯರಾಗಿ ಕಟ್ಟಿಮನಿ ಅವರ 10 ಸಾವಿರ ಪುಟಗಳ, 64 ಕೃತಿಗಳನ್ನೊಳಗೊಂಡ 15 ಸಂಪುಟಗಳ ಪ್ರಧಾನ ಸಂಪಾದನೆ ನಿಭಾಯಿಸಿ, ಎಂ.ಎಂ.ಕಲಬುರ್ಗಿ ಅವರ ಮೆಚ್ಚುಗೆಗೆ ಪಾತ್ರವಾದವರು. ವೈಚಾರಿಕ ಲೇಖನಗಳ ‘ಮಣ್ಣುಕೊಟ್ಟದ್ದು ಮತ್ತು ಇತರೆ ಕಥೆಗಳು’ ಮತ್ತು ‘ಬರೆದು ಬದುಕಿದ ಹಾದಿ’, ವ್ಯಕ್ತಿ ಪರಿಚಯಗಳಿರುವ ‘ಎತ್ತರದ ಏಣಿಗೆ’ ಕೃತಿಗಳು ಲೋಕಾರ್ಪಣೆಗೆ ಸಿದ್ಧವಾಗಿವೆ.
ಮೈತ್ರಿ ಮತ್ತು ಪೂರ್ಣಿಮಾ ಪ್ರಕಾಶನವನ್ನು ಸ್ಥಾಪಿಸಿ ತಮ್ಮ ಪುಸ್ತಕಗಳು ಸೇರಿದಂತೆ ಸ್ನೇಹಿತರ ಮತ್ತು ಶಿಷ್ಯರ ಕೃತಿಗಳನ್ನು ಪ್ರಕಟಿಸಿದ್ದಾರೆ. 2006ರಲ್ಲಿ ನಿವೃತ್ತರಾದ ಅವರಿಗೆ ಶಿಷ್ಯ ಬಳಗ ‘ಸಹೃದಯಿ’ ಅಭಿನಂದನಾ ಗ್ರಂಥ ಅರ್ಪಿಸಿದೆ. ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ. 2016ರಲ್ಲಿ ಕಲ್ಲೋಳಿಯಲ್ಲಿ ನಡೆದ ಅವಿಭಜಿತ ಗೋಕಾಕ ತಾಲೂಕು 3 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. 77ರ ಪ್ರಾಯದ ಅವರದು ಕನ್ನಡಕ್ಕಾಗಿ ಹೋರಾಡುವ ಹುಮ್ಮಸ್ಸು.