ಬೆಳಗಾವಿ : ನವೆಂಬರ್ ೨೩ ಮತ್ತು ೨೪ರಂದು ಮೂಡಲಗಿಯಲ್ಲಿ ೧೬ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಕಸಾಪ ಹಮ್ಮಿಕೊಂಡಿದೆ. ಮೊದಲಿನಿಂದಲೂ ತಮಗೆ ಬೇಕಾದವರಿಗೆ ಮಾತ್ರ ಮಣೆ ಹಾಕುವ ಹಾಗೂ ತಮಗೆ ಬಕೆಟ್ ಹಿಡಿಯುವವರಿಗೆ ಮಾತ್ರವೇ ಕೆಂಪು ಹಾಸಿನ ಸ್ವಾಗತವನ್ನು ಕೋರುವ ಬೆಳಗಾವಿ ಜಿಲ್ಲಾ ಕಸಾಪದ ಬಗ್ಗೆ ಅನೇಕ ದೂರುಗಳಿವೆ. ಯಾವ ಪ್ರಶಸ್ತಿ, ಸನ್ಮಾನ, ಹಾರ-ತುರಾಯಿಗಳ ಗೋಜಿಗೆ ಹೋಗದೆ ತಮ್ಮಷ್ಟಕ್ಕೆ ತಾವು ನಿರಂತರವಾಗಿ ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡವರು ಅನೇಕರು. ಅಂತವರ ಸಾಲಿಗೆ ಕಳೆದ ೧೫ ವರ್ಷಗಳಿಂದ ಗಡಿಭಾಗದಲ್ಲಿ ಕನ್ನಡದ ಕೆಲಸಗಳ ಮೂಲಕ ಚಿರಪರಿಚಿತರಾಗಿರುವ ಒಬ್ಬ ಪ್ರಾಮಾಣಿಕ ಕನ್ನಡ ಹೋರಾಟಗಾರ, ವಿಶ್ವಕನ್ನಡ ರಕ್ಷಕ ದಳದ ರಾಜ್ಯಾಧ್ಯಕ್ಷ ಡಾ. ಕುಮಾರ ಎಂ. ತಳವಾರ ಅವರನ್ನು ಪ್ರತಿವರ್ಷವೂ ಜಿಲ್ಲಾ ಕಸಾಪ ಕಡೆಗಣಿಸುತ್ತಾ ಬಂದಿರುವುದು ದುರಂತವೇ ಸರಿ.

‘ಕನ್ನಡವನ್ನುಳಿದೆನಗೆ ಅನ್ಯಜೀವನವಿಲ್ಲ’ ಎಂಬ ದಿ. ಬೆನಗಲ್ ರಾಮರಾಯ್‌ರ ಮಾತು ಇವರಂತವರಿಗಾಗಿಯೇ ಹೇಳಿದಂತಿದೆ. ಗಡಿಭಾಗದಲ್ಲಿ ಕನ್ನಡ ಸಂಘಟಕ, ಪತ್ರಕರ್ತ, ಪ್ರಾಧ್ಯಾಪಕ, ಕವಿಯಾಗಿ ಗುರುತಿಸಿಕೊಂಡಿರುವ ಡಾ. ಕುಮಾರ ಎಂ. ತಳವಾರ ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೋಲಾಪುರದವರು. ಪ್ರಸ್ತುತ ಅಥಣಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಂ.ಎ, ಬಿ.ಎಡ್ ಮುಗಿಸಿ ‘ನಿಪ್ಪಾಣಿ ಪರಿಸರದ ಸ್ಥಳನಾಮಗಳು’ ಎಂಬ ವಿಷಯದಲ್ಲಿ ಆರ್‌ಸಿಯು ಕನ್ನಡ ವಿಭಾಗದಿಂದ ಪಿಎಚ್.ಡಿ ಪದವಿ ಪಡೆದುಕೊಂಡಿದ್ದಾರೆ. ೯ನೇ ತರಗತಿಯಿಂದಲೇ ಕನ್ನಡದ ಬಗ್ಗೆ ಅಪಾರ ಪ್ರೀತಿಯನ್ನು ಬೆಳೆಸಿಕೊಂಡಿರುವ ಇವರು ಗಡಿಭಾಗದಲ್ಲಿ ಕನ್ನಡದ ಕಂಪು ಕಮರದಂತೆ ನೋಡಿಕೊಳ್ಳುವಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿದ್ದಾರೆ.
ಇವರ ಕನ್ನಡದ ಹುಚ್ಚುಪ್ರೀತಿ ಎಷ್ಟಿದೆ ಎಂದರೆ ತಾವು ವಿದ್ಯಾರ್ಥಿಯಾಗಿದ್ದಾಗ ಕನ್ನಡ ಪತ್ರಿಕೆಗಳು ಹೆಚ್ಚೆಚ್ಚು ಮಾರಾಟವಾಗಲಿ ಎಂಬ ಆಶಯದಿಂದ ತಮ್ಮ ಕೀಸೆಯಲ್ಲಿ ಇರುತ್ತಿದ್ದ ಅಷ್ಟೂ ದುಡ್ಡನ್ನು ದಿನಪತ್ರಿಕೆಗಳನ್ನು ಕೊಳ್ಳಲು ಬಳಸುತ್ತಿದ್ದರು. ನಿಪ್ಪಾಣಿಯಲ್ಲಿ ಅಪರೂಪಕ್ಕೊಮ್ಮೆ ಬರುತ್ತಿದ್ದ ಕನ್ನಡ ಚಿತ್ರಗಳನ್ನು ತಮ್ಮ ಸ್ನೇಹಿತರನ್ನು ಸೇರಿಸಿಕೊಂಡು ಹೋಗಿ ನೋಡುತ್ತಿದ್ದರು. ಕನ್ನಡ ನಾಮಫಲಕಗಳಿಲ್ಲದ ಅಂಗಡಿ-ಮುಂಗಟ್ಟುಗಳ ಮಾಲೀಕರಿಗೆ ಈಗಲೂ ಕನ್ನಡ ಹಾಕುವಂತೆ ಆಗ್ರಹಿಸುತ್ತಾರೆ. ಯಾರದೇ ಮದುವೆ ಅಥವಾ ಶುಭ ಸಮಾರಂಭಗಳಿಗೆ ಉಡುಗೊರೆ ಒಯ್ಯಬೇಕಾದಾಗ ಕನ್ನಡ ಪುಸ್ತಕ ಇಲ್ಲವೇ ನಾಡದೇವಿ ಭುವನೇಶ್ವರಿಯ ಭಾವಚಿತ್ರವನ್ನೇ ಉಡುಗೊರೆಯಾಗಿ ನೀಡುತ್ತಾರೆ. ತಾವು ಪ್ರಯಾಣಿಸುವ ವೇಳೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಕನ್ನಡ ಹಾಡುಗಳ ಬದಲಾಗಿ ಪರಭಾಷೆಯ ಹಾಡುಗಳು ಕೇಳಿ ಬಂದರೆ ತಕ್ಷಣವೇ ಕನ್ನಡ ಹಾಡುಗಳನ್ನು ಹಾಕುವಂತೆ ನಿರ್ವಾಹಕ, ಚಾಲಕರಿಗೆ ತಿಳಿಸುವ ಇವರು ತಮ್ಮ ಅಧ್ಯಾಪನ ವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡದ ದೀಕ್ಷೆಯನ್ನು ನೀಡಿದ್ದಾರೆ. ಇಂದಿಗೂ ಪತ್ರಿಕೆಗಳಲ್ಲಿ ತಮ್ಮ ಬರವಣಿಗೆಯ ಮೂಲಕ ಕನ್ನಡ ಜಾಗೃತಿಯನ್ನು ನಿತ್ಯ ನಿರಂತರವಾಗಿ ಮಾಡುತ್ತಿರುತ್ತಾರೆ.
ವಿದ್ಯಾರ್ಥಿ ದೆಸೆಯಿಂದಲೇ ಕನ್ನಡದ ಕೈಂಕರ್ಯವನ್ನು ಮಾಡುತ್ತಾ, ತಮಗೆ ಮನೆಯಲ್ಲಿ ಖರ್ಚಿಗೆ ಕೊಡುತ್ತಿದ್ದ ಹಣ ಹಾಗೂ ವಿದ್ಯಾರ್ಥಿ ವೇತನವನ್ನು ಸಹ ಕನ್ನಡದ ಕೆಲಸಗಳಿಗೆ ಬಳಸಿದವರು. ತಮ್ಮ ಹಸ್ತಾಕ್ಷರದಿಂದ ಹಿಡಿದು ಎಟಿಎಂ ಬಳಕೆಯವರೆಗೆ ಪ್ರತಿಯೊಂದರಲ್ಲೂ ಕನ್ನಡತನ ಕಾಣುತ್ತದೆ. ನೂರಾರು ಕಾರ್ಯಕ್ರಮಗಳ ಮೂಲಕ ಗಡಿಭಾಗದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಶ್ರೇಯಸ್ಸು ಇವರದು. ವಿಶ್ವವನ್ನೇ ಕನ್ನಡಮಯವನ್ನಾಗಿಸುವ ಕನಸು ಕಂಡ ಕನಸುಗಾರ. ಇವರು ಎಲ್ಲೇ ಹೋದರೂ ಕನ್ನಡವಿಲ್ಲದಿದ್ದರೆ ಅದರ ಬಗ್ಗೆ ಪ್ರಶ್ನಿಸಿ ಕನ್ನಡತನ ಮೆರೆಯುತ್ತಾರೆ. ಇವರ ತನು, ಮನವೆಲ್ಲವೂ ಕನ್ನಡವೇ ಆಗಿದ್ದು, ಕನ್ನಡವನ್ನೇ ಉಸುರುವ, ಉಸಿರಾಡುವ ಅಪರೂಪದ ಗಡಿಕನ್ನಡಿಗ, ವಿಶ್ವಕನ್ನಡಿಗ ಇವರಾಗಿದ್ದಾರೆ.

ತಾವು ದುಡಿದ ಹಣದಲ್ಲಿ ಶೇ. ೧೦%ರಷ್ಟನ್ನು ಕನ್ನಡದ ಸೇವೆಗೆ ಮೀಸಲು!
ಈಗಲೂ ತಾವು ದುಡಿದ ಹಣದಲ್ಲಿ ಶೇ. ೧೦ರಷ್ಟನ್ನು ಕನ್ನಡದ ಸೇವೆಗೆಂದೇ ಎತ್ತಿಡುವುದು ಇವರ ಹವ್ಯಾಸ. ವಿದ್ಯಾರ್ಥಿಯಾಗಿದ್ದಾಗ ಕನ್ನಡದ ಕೆಲಸಗಳನ್ನು ಮಾಡುತ್ತ, ಕನ್ನಡಕ್ಕಾಗಿಯೇ ೭೦ ಸಾವಿರ ಸಾಲ ಮಾಡಿಕೊಂಡಿದ್ದರು. ಆ ದಿನಗಳಲ್ಲಿ ಗಡಿಭಾಗದಲ್ಲಿ ಕನ್ನಡ ಅಂಕಿಗಳ ಜಾಗೃತಿ ಅಭಿಯಾನ ಎಂಬ ವಿನೂತನ ಕಾರ್ಯಕ್ರಮದ ಮೂಲಕ ದಾವಣಗೆರೆಯ ಗ್ರಂಥ ಸರಸ್ವತಿ ಪ್ರಕಾಶನದವರು ಹೊರತರುತ್ತಿದ್ದ ಕನ್ನಡನುಡಿ ಕ್ಯಾಲೆಂಡರ್‌ನ್ನು ಲೇವಾದೇವಿಯವರ ಬಳಿ ಶೇ. ೫ರಷ್ಟು ಬಡ್ಡಿಗೆ ಸಾಲ ಮಾಡಿ ತರಿಸಿ ಗಡಿನಾಡಿನಾದ್ಯಂತ ಕನ್ನಡದ ಕಂಪು ಸೂಸಿದ್ದರು. ತಮ್ಮ ಈ ನಿಸ್ವಾರ್ಥ ಸೇವೆಯಿಂದ ಸಾಕಷ್ಟು ಸಾಲವನ್ನು ಮಾಡಿಕೊಳ್ಳಬೇಕಾಗಿ ಬಂತು. ಅದರಿಂದ ಧೃತಿಗೆಡದೆ ಆ ಸಾಲವನ್ನು ತೀರಿಸಲು ಅನಿವಾರ್ಯವಾಗಿ ಪ್ರಾಧ್ಯಾಪಕ ವೃತ್ತಿಗೆ ಬರಬೇಕಾಗಿ ಬಂತು; ಅದೇ ಇಂದು ಖಾಯಂ ಆಯ್ತು ಎನ್ನುತ್ತಾರೆ ಕುಮಾರ.

ಸಂಘಟನೆಗಳ ಸ್ಥಾಪನೆ :
ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾಗ ಹುಟ್ಟುಹಾಕಿದ್ದ ವಿಶ್ವಕನ್ನಡ ರಕ್ಷಕ ದಳ ಎಂಬ ರಾಜ್ಯಮಟ್ಟದ ಸಂಘಟನೆ ಇಂದು ೧೫ ಜಿಲ್ಲೆಗಳಿಗೆ ತಲುಪಿದೆ. ಗಡಿಯಂಚಿನ ನಿಪ್ಪಾಣಿಯಲ್ಲಿ ಗಡಿನಾಡು ಕನ್ನಡ ಬಳಗ ಎಂಬ ಮತ್ತೊಂದು ಸಂಘಟನೆಯನ್ನು ಹುಟ್ಟು ಹಾಕಿ ಗಡಿಭಾಗದ ಹಳ್ಳಿಗಳಲ್ಲಿಯೂ ಕನ್ನಡದ ಕಂಪು ಪಸರಿಸುವ ಕಾರ್ಯ ಮಾಡುತ್ತಿದ್ದಾರೆ.

ಕನ್ನಡ ಶಾಲೆಗಳ ಬಗೆಗಿನ ಒಲವು :
ಗಡಿಭಾಗದ ನಿಪ್ಪಾಣಿ ತಾಲೂಕಿನ ಎಲ್ಲ ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಪ್ರತಿಬಾರಿ ಭೇಟಿ ನೀಡಿದಾಗಲೂ ಅಲ್ಲಿನ ಮೂಲಭೂತ ಸಮಸ್ಯೆಗಳ ಕುರಿತು ತಮ್ಮ ಪತ್ರಿಕೆಯಲ್ಲಿ ಮೇಲಿಂದ ಮೇಲೆ ಬರೆಯುತ್ತಲೇ ಇರುತ್ತಾರೆ. ಕನ್ನಡ ಶಾಲೆಯ ಶಿಕ್ಷಕರಿಗೆ, ಮಕ್ಕಳಿಗೆ ಎನಾದರೂ ತೊಂದರೆಯಾದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸುವ ಇವರ ಕುರಿತು ಗಡಿಕನ್ನಡ ಶಾಲೆಯ ಶಿಕ್ಷಕರಿಗೆ ಒಳ್ಳೆಯ ಅಭಿಪ್ರಾಯವಿದೆ.

ಕನ್ನಡಮಯ ಮದುವೆ :
ಇವರು ೨೦೨೧ರಲ್ಲಿ ಆದ ತಮ್ಮ ಮದುವೆಯಲ್ಲಿ ಸಂಪೂರ್ಣವಾಗಿ ಹಳದಿ-ಕೆಂಪು ಬಾವುಟದೊಂದಿಗೆ ಸಿಂಗರಿಸಿ, ಪುಸ್ತಕ ಬಿಡುಗಡೆ, ದಾಂಪತ್ಯ ಕವಿಗೋಷ್ಠಿ, ಕನ್ನಡಪರ ಚಿಂತನ-ಮಂಥನ ಗೋಷ್ಠಿಗಳನ್ನು ಏರ್ಪಡಿಸುವ ಮೂಲಕ ಕನ್ನಡ ಹಬ್ಬದ ರೀತಿಯಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಒಂದು ವಿಶೇಷ ರೀತಿಯ ಮದುವೆಯಿಂದಾಗಿ ನಾಡಿನ ಗಮನ ಸೆಳೆದಿದ್ದರು. ಈ ಮದುವೆಯಿಂದ ಪ್ರೇರಣೆಯಾಗಿ ಮುಂದೆ ಅನೇಕರು ಇದೇ ರೀತಿಯ ಮದುವೆಗಳನ್ನು ಆಗಿದ್ದನ್ನು ಕಾಣುತ್ತೇವೆ.

ಡಾ. ರಾಜಕುಮಾರ ವೃತ್ತ :
ತಮ್ಮ ಹುಟ್ಟುರಾದ ಸೋಲಾಪುರ ಗ್ರಾಮದ ಪ್ರಮುಖ ವೃತ್ತವೊಂದಕ್ಕೆ ಕರ್ನಾಟಕ ರತ್ನ ಡಾ. ರಾಜಕುಮಾರ ಎಂದು ೨೦೧೭ರಲ್ಲಿ ನಾಮಕರಣ ಮಾಡಿದ್ದು, ಬೆಳಗಾವಿ ಜಿಲ್ಲೆಯಲ್ಲಿಯೇ ಪ್ರಥಮ.

ಜೈ ಕನ್ನಡ!
ನೀವು ಇವರಿಗೆ ಕರೆ ಮಾಡಿದರೆ ಆಕಡೆಯಿಂದ ಹಲೋ ಬದಲಾಗಿ ‘ಜೈ ಕನ್ನಡ ಹೇಳ್ರಿ…’ ಎಂಬ ಧ್ವನಿ ಕೇಳಿಸುತ್ತದೆ.

ಕನ್ನಡಪರ ಅಭಿಲಾಷೆ :
ನವೆಂಬರ್ ೧ರ ಕನ್ನಡಿಗರು ನಾವಾಗದೇ ವರ್ಷಪೂರ್ತಿ ಕನ್ನಡಿಗರು ನಾವಾಗಬೇಕು. ಬಲಪಂಥೀಯ ಹಾಗೂ ಎಡಪಂಥೀಯ ವಿಚಾರಗಳು ನಮ್ಮ ನಾಡನ್ನು ಅಧೋಗತಿಗೆ ಒಯ್ದಿದ್ದು, ಇಂದು ಕನ್ನಡ ನಾಡಿನಲ್ಲಿ ಕನ್ನಡಿಗರು ಅನಾಥವಾಗುವ ಸ್ಥಿತಿ ಒದಗಿದೆ. ಹೀಗಾಗಿ ಇಂದಿನ ಯುವಪೀಳಿಗೆ ಈ ವಿಚಾರಗಳಿಂದ ಹೊರಬಂದು ಕನ್ನಡ ಪಂಥೀಯ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು. ಕೇವಲ ನವೆಂಬರ್ ೧ಕ್ಕೆ ಬೆಳಗಾವಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಕನ್ನಡಿಗರು; ಕನ್ನಡಕ್ಕೆ ಅನ್ಯಾಯವಾದಾಗಲೂ ಧ್ವನಿ ಎತ್ತಲೂ ಮುಂದೆ ಬರಬೇಕು ಎನ್ನುತ್ತಾರೆ ಕುಮಾರ.
ಇಂತಹ ಕನ್ನಡದ ಕಟ್ಟಾಳುಗಳನ್ನು ಗುರುತಿಸುವ ಕೆಲಸ ಕಸಾಪ ಆದಿಯಾಗಿ ಎಲ್ಲರಿಂದಲೂ ಆಗಬೇಕಾಗಿದೆ.