ಶಿರಸಿ: ಇಂದು ಅಡಕೆಗೆ ಕಳಂಕ ಬರಲು ಅಡಕೆ ಉತ್ಪಾದಕರು ಮತ್ತು ಬಳಕೆದಾರರ ನಡುವೆ ಮಧ್ಯವರ್ತಿಗಳೇ ಕಾರಣ. ಯಾಕೆಂದರೆ ಅವರ ಮೇಲೆ ಯಾರ ನಿಯಂತ್ರಣವೂ ಇಲ್ಲ ಎಂದು ಶಿವಮೊಗ್ಗ ಮ್ಯಾಮ್ಕೊಸ್ ಅಧ್ಯಕ್ಷ ಎಚ್.ಎಸ್.ಮಂಜಪ್ಪ ಹೇಳಿದರು.

ಉತ್ತರ ಕನ್ನಡ ಜಿಲ್ಲಾ ಅಡಿಕೆ ಮತ್ತು ಸಂಬಾರ ಬೆಳೆಗಾರರ ಸಂಘ, ಶಿರಸಿ ತಾಲ್ಲೂಕು ಅಡಿಕೆ ಬೇಸಾಯಗಾರರ ಸಂಘ ಹಾಗೂ ಶಿರಸಿ ತೋಟಗಾರಿಕಾ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ‘ಉತ್ಪಾದನೆಯಿಂದ ಬಳಕೆಯವರೆಗೆ’ ಗುಣಮಟ್ಟದ ಅಡಿಕೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಂಪರಾಗತ ಅಡಕೆ ಬೆಳೆಗಾರರು ಜೀವನೋಪಾಯಕ್ಕೆ ಅಡಕೆ ಮೇಲೆ ಮಾತ್ರ ಅವಲಂಬಿಸಿದ್ದಾರೆ. ಪರಂಪರಾಗತ ಬೆಳೆಗಾರರು ಬಡವರಾಗಿಯೇ ಇದ್ದಾರೆ. ಇವರಿಗೆ ಬೆಳೆ ವಿಸ್ತರಣೆಗೂ ಅವಕಾಶವಿಲ್ಲ. ಈ ನಡುವೆ ಅಡಕೆ ಕ್ಯಾನ್ಸರ್ ಕಾರಕ ವಿಷಯ ಮೂರು ದಶಕಗಳಿಂದ ಚರ್ಚಿತ ಆಗುತ್ತಿದೆ. ಹಲವು ಪ್ರಕರಣ ಕೋರ್ಟ್ ಮೆಟ್ಟಿಲೇರಿವೆ. ಈ ಬಗ್ಗೆ ಅಂತಿಮ ತೀರ್ಪು ಬಂದಿಲ್ಲ. ಪ್ರಸ್ತುತ ವಿಶ್ವ ಸಂಸ್ಥೆಯ ಅಂಗ ಸಂಸ್ಥೆ ಅಡಕೆ ಕ್ಯಾನ್ಸರ್ ಕಾರಕ ಎಂಬ ವರದಿ ಬಿಡುಗಡೆ ಮಾಡಿದೆ. ಜಾಗತಿಕವಾಗಿ ಭಾರತದ ಅಡಕೆ ವಹಿವಾಟು ಹೆಚ್ಚಿದ್ದು, ಅದನ್ನು ನಿಯಂತ್ರಿಸಲು ಇಂಥ ವರದಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇವುಗಳನ್ನು ತಡೆಯುವ ಉದ್ದೇಶಕ್ಕೆ ವೈಜ್ಞಾನಿಕ ವರದಿ ಸಿದ್ಧಪಡಿಸಿ ಅದಕ್ಕೆ ಪ್ರತ್ಯುತ್ತರ ನೀಡುವ ಅವಶ್ಯಕತೆಯಿದೆ’ ಎಂದು ಪ್ರತಿಪಾದಿಸಿದರು.

 

‘ಕ್ಯಾನ್ಸರ್ ಕಾರಕ ತಂಬಾಕು ಉತ್ಪನ್ನಗಳ ಮೇಲೆ ನಿಷೇಧ ಇಲ್ಲ. ಆದರೆ ಅಡಕೆ ಮೇಲೆ ಮಾತ್ರ ಈ ತೂಗುಗತ್ತಿ ಏಕೆ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಅಡಕೆ ಬೆಳೆಗಾರರಿಗೆ ಪ್ರಬಲ ಲಾಬಿ ಇಲ್ಲದಿರುವುದೇ ಕಾರಣ. ಗುಟ್ಕಾ, ಪಾನ್ ಮಸಾಲಾ ಕಂಪನಿಗಳು ನೇರವಾಗಿ ಸಹಕಾರಿ ಸಂಘಗಳಿಂದ ಅಡಿಕೆ ಖರೀದಿಸದೆ ಮಧ್ಯವರ್ತಿಗಳಿಂದ ಖರೀದಿಸುತ್ತಾರೆ. ಹೀಗೆ ಮಧ್ಯವರ್ತಿ ಹಂತದಲ್ಲಿ ಅಡಕೆಯು ಕಲಬೆರಕೆಯಾಗುವ ಸಾಧ್ಯತೆಯಿದ್ದು, ಅಂಥ ಅಡಕೆ ಪರೀಕ್ಷಿಸಿದರೆ ಹಾನಿಕಾರಕ ಅಂಶ ಕಂಡುಬರುವ ಸಾಧ್ಯತೆಯಿದೆ. ಸರ್ಕಾರ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಕಲಬೆರಕೆ ತಡೆಯುವ ಕಾರ್ಯವಾಗಬೇಕು’ ಎಂದು ಆಗ್ರಹಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಅಡಕೆ ಕ್ಯಾನ್ಸರ್ ಕಾರಕ ಎಂಬ ಷಡ್ಯಂತ್ರದ ವಿರುದ್ಧ ಜನಾಭಿಪ್ರಾಯ ರೂಪಿಸಬೇಕು. ಸರ್ಕಾರ, ತಜ್ಞರು, ವಿಜ್ಞಾನಿಗಳ ಸಹಕಾರದಿಂದ ವೈಜ್ಞಾನಿಕ ವರದಿ ಸಿದ್ಧವಾಗಬೇಕು. ಸಿಪಿಸಿಆರ್ ಐ ಕೈಗೊಂಡ ಸಂಶೋಧನೆ ವರದಿ ತ್ವರಿತವಾಗಿ ಪೂರ್ಣಗೊಳಿಸಬೇಕು. ಸಹಕಾರಿ ಪ್ರಮುಖರು ನಿಯೋಗದ ಮೂಲಕ ಕೇಂದ್ರ ಸಚಿವರ ಭೇಟಿ ಮಾಡಬೇಕು. ಈ ಬಗ್ಗೆ ಅಧಿವೇಶನದಲ್ಲಿಯೂ ಗಮನ ಸೆಳೆಯಲಾಗುವುದು ಎಂದರು.

ಕರ್ನಾಟಕ ರಾಜ್ಯ ಅಡಿಕೆ ಮಹಾಮಂಡಳದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೇರಿ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರಕುಮಾರ ಕೊಡ್ಗಿ, ಸಿಪಿಸಿಆರ್ ಐ ವಿಜ್ಞಾನಿ ರವಿ ಭಟ್, ಸಂಘಟಕ ಎಂ.ವಿ. ಹೆಗಡೆ ಇತರರಿದ್ದರು.

“ಉತ್ಪಾದನೆಯಿಂದ ಬಳಕೆಯವರೆಗೆ ಗುಣಮಟ್ಟದ ಅಡಿಕೆ”ಕಾರ್ಯಾಗಾರದ ನಿರ್ಣಯಗಳು…
1)ಬೆಳೆಗಾರರ ಹಂತದಲ್ಲಿ ಅಡಕೆಯ ಸಮಗ್ರ ಗುಣ ಧರ್ಮಗಳ ಕುರಿತು ವಿಸ್ತೃತ ಸಂಶೋಧನೆಗೆ ಚಾಲನೆ ನೀಡಬೇಕು.
2)ಅಡಕೆ ಪೊಟ್ಟಣದ ಮೇಲೆ ಕಡ್ಡಾಯವಾಗಿ ಬರೆಯಬೇಕಾದ ಅಡಕೆ ಜಗೆಯುವುದು ಆರೋಗ್ಯಕ್ಕೆ ಹಾನಿಕರ ಎಂಬುದು ನಿರಾಧಾರವಾಗಿದೆ. ಇದನ್ನು ತಕ್ಷಣ ರದ್ದು ಮಾಡಬೇಕು.
3)ಅಡಕೆ ಬೆಳೆಯ ಅವೈಜ್ಞಾನಿಕ ವಿಸ್ತರಣೆಯನ್ನು ನಿಯಂತ್ರಿಸುವ ನೀತಿ ಜಾರಿಗೆ ಬರಬೇಕು.

4) ನಮ್ಮ ದೇಶದೊಳಗೆ ಕಾನೂನುಬಾಹಿರವಾಗಿ ಒಳನುಸುಳುತ್ತಿರುವ ಅಡಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು.
5)ರೈತರಿಂದ-ಬಳಕೆದಾರರವರೆಗಿನ ಅಡಕೆ ಉತ್ಪನ್ನದ ಗರಿಷ್ಠ ಗುಣಮಟ್ಟ ಕಾಯ್ದುಕೊಳ್ಳಬೇಕು ಹಾಗೂ ಅಡಕೆಗೆ ಕಲಬೆರಕೆಯಾಗುತ್ತಿರುವ ಅಪಾಯಕಾರಿ ರಾಸಾಯನಿಕಗಳ ಬಳಕೆಗೆ ಕಠಿಣ ಕಡಿವಾಣ ಹಾಕಲು, “ಅಡಕೆ ಮತ್ತು ಸಾಂಬಾರು ಬೆಳೆ ಅಭಿವೃದ್ಧಿ ನಿರ್ದೇಶನಾಲಯ” ಸಮಗ್ರವಾಗಿ ನಿಯಮಾವಳಿ ರೂಪಿಸಿ, ಜಾರಿಗೆ ತರಬೇಕು.
6) ಮಾರುಕಟ್ಟೆಯಲ್ಲಿ ಮಾರಾಟವಾಗುವ ಅಡಕೆಯ ಉತ್ಪನ್ನಗಳ ಗುಣಮಟ್ಟದ ಕುರಿತು “ಆಹಾರ ಸುರಕ್ಷತೆ ಮತ್ತು ಮಾನದಂಡ ನಿರ್ವಹಣಾ ಪ್ರಾಧಿಕಾರ” (Food Safety and Standards Authority of India-FSSAI) ಸೂಕ್ತ ನಿಯಮವಾಳಿ ರೂಪಿಸಿ ಜಾರಿಗೆ ತರಬೇಕು.
7) ಆಹಾರ ವಸ್ತು ಹಾಗೂ ಅಡಕೆಯ ಗುಣಮಟ್ಟದ ಮೇಲ್ವಿಚಾರಣೆಗಾಗಿ ತಾಲೂಕಾ ಮಟ್ಟದಲ್ಲಿ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ ಮಾಡಬೇಕು.
8) ಅಡಕೆ ಬೆಳೆಯ ಪಾರಂಪರಿಕ ಪ್ರದೇಶಗಳಲ್ಲಿ ಸೂಕ್ತ ಮಿಶ್ರ ಬೆಳೆಗಳಿಗೆ (Alterante Viable Crops) ಉತ್ತೇಜನ ನೀಡಬೇಕು.
9) ಅಡಕೆಯಲ್ಲಿರುವ ಔಷಧೀಯ ಗುಣಗಳನ್ನು ಬಳಕೆಮಾಡಲು ನೀತಿ ನಿಯಮಗಳನ್ನು ರೂಪಿಸಬೇಕು.
10) ತಂಬಾಕುರಹಿತ ಮೌಲ್ಯವರ್ಧಿತ ಅಡಕೆ ಉತ್ಪನ್ನಗಳಿಗೆ ಹಾಗೂ ಬದಲಿ ವಾಣಿಜ್ಯ ಉಪಯೋಗಗಳಿಗೆ ಉತ್ತೇಜನ ನೀಡಬೇಕು.
11) ಉತ್ಪಾದಕರಿಂದ ಗ್ರಾಹಕರವರೆಗಿನ ಅಡಿಕೆಯ ಸಂಗ್ರಹ, ಸಂಸ್ಕರಣೆ, ಮಾರಾಟ ಜೋಡಣೆಯಲ್ಲಿ ಸಹಕಾರಿ ರಂಗಕ್ಕೆ ಪ್ರೋತ್ಸಾಹ ನೀಡಬೇಕು ಹಾಗೂ ಇಂತಹ ಸಂಸ್ಥೆಗಳಿಗೆ ತೆರಿಗೆ ರಿಯಾಯಿತಿ ಸಿಗುವಂತಾಗಬೇಕು.
12) ಅಡಕೆ ಬೇಸಾಯ, ರೋಗ ನಿರ್ವಹಣೆ, ಕೊಯಿಲು, ಕೊಯ್ಲೋತ್ತರ ಸಂಸ್ಕರಣೆ, ಸಂಗ್ರಹಣೆ ಹಾಗೂ ಮಾರುಕಟ್ಟೆಗೆ ಒಯ್ಯುವದು-ಈ ಎಲ್ಲ ಹಂತಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವ ಸೂಕ್ತ ವಿಧಾನಗಳನ್ನು ಪಾಲಿಸುವ ಸ್ವಯಂಶಿಸ್ತನ್ನು ರೈತರು ಪಾಲಿಸಬೇಕು.
13) ಅಡಕೆಯ ವ್ಯಾಪಾರದಲ್ಲಿ ತೊಡಗಿರುವವರು, ಸ್ವಯಂಶಿಸ್ತು, ಸೂಕ್ತ ನಿಯಮಾವಳಿ, ತಂತ್ರಜ್ಞಾನ ಹಾಗೂ Trade Mark ತತ್ವಗಳನ್ನು ಅಳವಡಿಸಿಕೊಳ್ಳಬೇಕು.
14) ಅಡಕೆ ಕುರಿತ ಎಲ್ಲ ನೀತಿ-ನಿಯಮಾವಳಿಗಳನ್ನು ರೂಪಿಸುವಾಗ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರಿ ಸಂಘಟನೆಗಳ ಅಭಿಪ್ರಾಯಪಡೆದು ಮುಂದುವರಿಯಬೇಕು.
15) ಅಡಕೆ ಬೆಳೆಯುವ ಪ್ರದೇಶದ ಸಹಕಾರಿ ಸಂಘಗಳ ಪ್ರತಿನಿಧಿಗಳನ್ನೂ ಒಳಗೊಂಡಿರುವ ತಜ್ಞರ ಒಂದು ತಾಂತ್ರಿಕ ಸಮಿತಿಯನ್ನು ಕೇಂದ್ರ ಸರ್ಕಾರ ರಚನೆ ಮಾಡಬೇಕು.
16) ಅಡಕೆ ಬೆಳೆಯುವ ಪಾರಂಪರಿಕ ಪ್ರದೇಶಗಳ ರೈತರು ಹಾಗೂ ಮಾರಾಟಗಾರರ ಸಂಕೀರ್ಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಸಮಿತಿ ರಚನೆ ಮಾಡಬೇಕು.