ಪುತ್ತೂರು: ಸಣ್ಣ ಮಟ್ಟದ ಮಣ್ಣು ತಪಾಸಣೆ ಯಂತ್ರವನ್ನು ಕ್ಯಾಂಪ್ಕೊ ಖರೀದಿಸಿದ್ದು, ಮೊಬೈಲ್ ಕೇಂದ್ರವನ್ನು ಪುತ್ತೂರಿನಲ್ಲಿ ಸ್ಥಾಪಿಸಲಾಗುವುದು.1.45 ಲಕ್ಷ ಸದಸ್ಯರಿದ್ದು, ಎಲ್ಲರ ಹಿತಕಾಯುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಬದ್ಧವಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.
ಮಹಮ್ಮಾಯಾ ದೇವಸ್ಥಾನದ ಸಭಾಂಗಣದಲ್ಲಿ ಕೇಂದ್ರ ಅಡಿಕೆ ಮತ್ತು ಕೊಕ್ಕೋ ಮಾರಾಟ ಮತ್ತು ಪರಿಷ್ಕರಣ ಸಹಕಾರಿ (ಕ್ಯಾಂಪ್ಕೊ) ಪುತ್ತೂರು ನವಿಕೃತ ಕಚೇರಿ ಉದ್ಘಾಟನೆ ಮತ್ತು ಸದಸ್ಯ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನುಷ್ಯ ಆಕ್ರಮಣದಿಂದ ಕಾಡು ಪ್ರಾಣಿಗಳು ನಾಡಿನತ್ತ ಬರುವುದು ಹೆಚ್ಚಾಗುತ್ತಿದೆ. ಮಂಗನಿಗೆ ಮಂಕಿ ಪಾರ್ಕ್, ಸಂತಾನ ಹರಣ ಚಿಕಿತ್ಸೆ ಮಾಡುವ ಘೋಷಣೆ ಸರ್ಕಾರದಿಂದ ನಡೆದಿದ್ದು, ಕಾರ್ಯಗತವಾಗಿಲ್ಲ. ಕೋತಿಯನ್ನು ಅಂಡಮಾನ್ ದ್ವೀಪಕ್ಕೆ ಬಿಟ್ಟು ಬರುವಂತೆ ಸರ್ಕಾರಕ್ಕೆ ಮನವಿ ನೀಡುವ ಕಾರ್ಯವಾಗಿದೆ. ರೈತರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಸಿಪಿಸಿಆರ್ಐ ನಿರ್ದೇಶಕರಲ್ಲಿ ಈಗಾಗಲೇ ಮಾತುಕತೆ ಮಾಡಲಾಗಿದೆ. ಕೊಬ್ಬರಿಯ ಜತೆಗೆ ತೆಂಗಿನ ಕಾಯಿ ಖರೀದಿಸುವ ಚಿಂತನೆಯಿದೆ ಎಂದು ತಿಳಿಸಿದರು.