ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಇದರ ಹಿಂದಿನ ರೂವಾರಿ ಆರ್ ಎಸ್ ಎಸ್ ಎನ್ನುವುದು ಇದೀಗ ಬಹಿರಂಗವಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆರ್ ಎಸ್ ಎಸ್ ಈ ಬಾರಿ ಬಿಜೆಪಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಲಿಲ್ಲ. ಜೊತೆಗೆ ಚುನಾವಣೆಯಲ್ಲೂ ಬಿಜೆಪಿ ಜೊತೆಗೆ ಹೆಜ್ಜೆ ಹಾಕಿರಲಿಲ್ಲ. ಇದರಿಂದ ಬಿಜೆಪಿ ಒಂದೇ ಬಹುಮತ ಸಾಧಿಸಲು ಸಾಧ್ಯವಾಗದೆ ಮೈತ್ರಿಕೂಟದ ನೆರವಿನಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಂತಾಯಿತು. ಆದರೆ, ಆರು ತಿಂಗಳ ಅವಧಿಯಲ್ಲೇ ಮತ್ತೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಹಿಂದಿನ ವೈಮನಸ್ಸು ಮರೆತು ಒಂದಾಗಿರುವುದು ಸ್ಪಷ್ಟವಾಗಿದೆ. ಅದರಲ್ಲೂ ವಿಧಾನ ಸಭಾ ಚುನಾವಣೆ ಮುಗಿಯುತ್ತಿದ್ದಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಡಿಸಿಎಂ ಆಗಿರುವ ದೇವೇಂದ್ರ ಫಡ್ನವಿಸ್ ಅವರು ಆರ್ ಎಸ್ ಎಸ್ ಪರಮೋಚ್ಚ ನಾಯಕ ಮೋಹನ ಭಾಗವತ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು ಅವರಿಗೆ ಅಭಿನಂದನೆ ಸಲ್ಲಿಸಿರುವುದು ಇಡೀ ಚುನಾವಣೆ ಹಿಂದೆ ಆರೆಸ್ಸೆಸ್ ಇದೆ ಎನ್ನುವುದು ಸಾಬೀತಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವನ್ನು ಧ್ವಂಸ ಮಾಡಿದೆ. ಈ ಗೆಲುವಿನ ಹಿಂದೆ ಆರ್ ಎಸ್ ಎಸ್ ರಣತಂತ್ರ ಈಗ ಮುನ್ನೆಲೆಗೆ ಬಂದಿದೆ. ಹರ್ ಘರ್ ಸಂವಿಧಾನ ಅಭಿಯಾನ, ಸಣ್ಣ ಪುಟ್ಟ ಜಾತಿಗಳ ಒಗ್ಗೂಡಿಸುವಿಕೆ , 60 ಸಾವಿರಕ್ಕೂ ಹೆಚ್ಚು ಸಭೆ, ದಲಿತರ ಮನೆ ಮನೆ ಭೇಟಿ ಜೊತೆಗೆ ಲವ್ ಜಿಹಾದ್ನಿಂದ ಏನಾಗುತ್ತಿದೆ? ವಕ್ಸ್ ಬೋರ್ಡ್ ಹೇಗೆ ಜಾಗ ಕಬಳಿಸುತ್ತಿದೆ ಎಂಬುದರ ಕುರಿತು ಆರ್ ಎಸ್ ಎಸ್ ಕರಪತ್ರ ಹಂಚಿತ್ತು. ಇವೆಲ್ಲದರ ಫಲವಾಗಿ ಎನ್ ಡಿಎ ಭರ್ಜರಿಯಾಗಿ ಗೆದ್ದು ಬೀಗಿದೆ.
ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರ 48 ಕ್ಷೇತ್ರಗಳ ಪೈಕಿ ಮಹಾಯುತಿ ಕೇವಲ 17 ಸ್ಥಾನ ಪಡೆದು ಕಳಪೆ ಪ್ರದರ್ಶನ ತೋರಿತ್ತು. ಆದರೆ ಇದಾದ ಆರೇ ತಿಂಗಳಲ್ಲಿ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಆ ಸೋಲನ್ನು ಮಹಾಯುತಿ ಹಿಮ್ಮೆಟ್ಟಿಸಿದೆ. ಇದಕ್ಕೆ ಆರೆಸ್ಸೆಸ್ ಕೊಡುಗೆ ಪ್ರಧಾನವಾಗಿದೆ. ನಗರಗಳಲ್ಲಿ ಹೆಚ್ಚಾಗಿ ಬಿಜೆಪಿ ಪರ ಒಲವಿದ್ದರೂ ಮತದಾರರು ಮತಗಟ್ಟೆಗೆ ಹೋಗುವುದು ಅಪರೂಪ. ಹೀಗಾಗಿ ನಗರಗಳಲ್ಲಿ ಮತದಾನ ಕಡಿಮೆ ಆಗುತ್ತಿದೆ ಎಂಬುದನ್ನು ಮನಗಂಡ ಆರೆಸ್ಸೆಸ್ ಅನೇಕ ನಗರಗಳಲ್ಲಿ ಮನೆ-ಮನೆಗೆ ತೆರಳಿ ಮತದಾರರ ಪ್ರೇರೇಪಿಸುವ ಕೆಲಸ ಮಾಡಿತು. ಇದು ಫಲ ನೀಡಿದ್ದು ಬಿಜೆಪಿಗೆ ಉತ್ತಮ ಸ್ಥಾನ ಬರಲು ನಾಂದಿ ಹಾಡಿದೆ. ಇದೇ ವೇಳೆ ಲಡ್ಕಿ ಬಹಿನ್ನಂಥ ಉಚಿತ ಯೋಜನೆ, ಮರಾಠಾ ಕೋಟಾ ವಿವಾದದ ಸೂಕ್ಷ್ಮ ನಿರ್ವಹಣೆ, ಬಹುಸಂಖ್ಯಾತರು ಒಗ್ಗಟ್ಟಿನಿಂದ ಇರಬೇಕು ಎಂಬ ಆಂದೋಲನಗಳು ಲೋಕಸಭೆ ಚುನಾವಣೆಯಲ್ಲಿನ ಮಹಾಯುತಿ ಹಿನ್ನಡೆಯನ್ನು ಹಿಮ್ಮೆಟ್ಟಿಸಿವೆ. ಒಟ್ಟಾರೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಬಿಜೆಪಿಗೆ ಇನ್ನಿಲ್ಲದ ಬಲವನ್ನು ತಂದು ಕೊಟ್ಟಿದೆ. ಜೊತೆಗೆ ಕೇಂದ್ರದಲ್ಲಿ ಸರಕಾರ ಮುನ್ನೆಡೆಸುತ್ತಿರುವ ನರೇಂದ್ರ ಮೋದಿ ಅವರ ಪಾಲಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಲು ಕಾರಣವಾಗಿದೆ. ಬಿಜೆಪಿ ಈಗ ಮಹಾರಾಷ್ಟ್ರ ಗೆದ್ದಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯಸಭೆಯಲ್ಲೂ ಬಿಜೆಪಿ ಸ್ಥಾನಗಳು ಹೆಚ್ಚಾಗಲಿವೆ.ಮಹಾರಾಷ್ಟ್ರ ಚುನಾವಣೆಯ ಬಹುದೊಡ್ಡ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಗಿದೆ. ರಾಜ್ಯಗಳಲ್ಲಿ ಗೆಲುವಿನ ಅಂಚು ತಲುಪಿ ಕೈ ಕಾಲು ಬಡಿಯುವ ಬಿಜೆಪಿಯನ್ನು ತನ್ನ ಪ್ರಭಾವಳಿಯಿಂದಲೇ ಗೆಲ್ಲಿಸುತ್ತೇನೆ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ರುಜುವಾತುಪಡಿಸಿದ್ದಾರೆ. ರಾಜ್ಯದಲ್ಲಿ 10 ರ್ಯಾಲಿಗಳಲ್ಲಿ ಭೋರ್ಗರೆದಿದ್ದ ಪ್ರಧಾನಿ ಅವರು ಹಿಂದೂಗಳ ಏಕತೆ ಬಗ್ಗೆ ಒತ್ತಿ ಹೇಳಿದ್ದರು. ಹಿಂದೂ-ಮುಸ್ಲಿಂ ಧ್ರುವೀಕರಣದ ಕಿಡಿ ಹಾರಿಸುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮಹಾರಾಷ್ಟ್ರದಲ್ಲಿ 11 ರ್ಯಾಲಿಗಳಲ್ಲಿ ಉಗ್ರ ಭಾಷಣಗಳನ್ನು ಮಾಡಿದ್ದರು. ‘ಬಟೋಗೆ ತೊ ಕಟೋಗೆ’ (ಒಗ್ಗಟ್ಟು ಇಲ್ಲದಿದ್ದರೆ ನಮ್ಮನ್ನು ಮುಗಿಸುತ್ತಾರೆ) ನಿರೂಪಣೆಯ ಮೂಲಕ ಮತ ಧ್ರುವೀಕರಣದ ಕಿಡಿ ಹೊತ್ತಿಸಿದ್ದರು. ಬಿಜೆಪಿಯ ಉಳಿದ ನಾಯಕರು ಇದೇ ಧಾಟಿಯಲ್ಲಿ ಮಾತನಾಡಿದ್ದರು. ಈ ಮಾತುಗಳು ಮೈತ್ರಿಕೂಟಕ್ಕೆ ಅಚ್ಚರಿಯ ಫಸಲನ್ನು ತಂದುಕೊಟ್ಟಿವೆ. ಉತ್ತರ ಪ್ರದೇಶ ವಿಧಾನಸಭೆಯ ಉಪಚುನಾವಣೆಯಲ್ಲಿ ಪಕ್ಷವನ್ನು ಏಳು ಸ್ಥಾನಗಳಲ್ಲಿ ಗೆಲ್ಲಿಸುವ ಮೂಲಕ ಯೋಗಿ ಅವರು ದೊಡ್ಡ ತೂಗುಗತ್ತಿಯಿಂದಲೂ ಪಾರಾಗಿದ್ದಾರೆ. ತಮ್ಮ ತವರು ರಾಜ್ಯದಲ್ಲಿ ಬಿಜೆಪಿ ಗೆಲುವಿಗೆ ಯೋಗಿ ಬಹಳ ಶ್ರಮಪಟ್ಟಿದ್ದರು. ಕೊನೆಗೂ ಅದು ಫಲಿಸಿದೆ.
ಮಹಾರಾಷ್ಟ್ರದಲ್ಲಿ ಸುಮಾರು ಶೇ 28ರಷ್ಟಿರುವ ಮರಾಠ ಮತಗಳು, ಶೇ 52ರಷ್ಟಿರುವ ಹಿಂದುಳಿದ ವರ್ಗಗಳ ಮತಗಳು ಹಾಗೂ ಶೇ 15ರಷ್ಟಿರುವ ದಲಿತ ಮತಗಳ ಮೇಲೆ ಕಣ್ಣಿಟ್ಟು ಹೆಣೆದ ಜಾತಿ ಸಮೀಕರಣವೂ ಮೈತ್ರಿಕೂಟಕ್ಕೆ ಭಾರಿ ಲಾಭ ತಂದುಕೊಟ್ಟಿದೆ. ಆರ್ಎಸ್ಎಸ್ನ ಸಹಾಯಹಸ್ತ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ. ಆರ್ಎಸ್ಎಸ್ ಕಾರ್ಯಕರ್ತರು ರಾಜ್ಯದಲ್ಲಿ 1.25 ಲಕ್ಷದಷ್ಟು ಸಣ್ಣ ಸಣ್ಣ ಸಭೆಗಳನ್ನು ನಡೆಸಿ ಮನೆ ಹಾಗೂ ಜನರ ಮನಗಳನ್ನು ಮುಟ್ಟಿದರು. ಹಿಂದೂ ಮತಗಳ ಕ್ರೋಡೀಕರಣಕ್ಕೆ ಸದ್ದಿಲ್ಲದೆ ಕೆಲಸ ಮಾಡಿದರು.
ಬಿಜೆಪಿ ನಾಯಕರ ‘ಸಂವಿಧಾನ ಬದಲು’ ಹೇಳಿಕೆಗಳ ವಿರುದ್ಧ ಅಭಿಯಾನ ಹಾಗೂ ಜಾತಿ ಜನಗಣತಿಯಂತಹ ಮಂತ್ರದಂಡಗಳನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯಲ್ಲಿ ನೂರರ ಗಡಿಗೆ ತಲುಪಿದ್ದ ಕಾಂಗ್ರೆಸ್ ಪಕ್ಷವು ಮತ್ತೆ ಸೋತು ಸುಣ್ಣವಾಗಿದೆ. ಗೆಲ್ಲುವ ಭರಪೂರ ಅವಕಾಶ ಇರುವ ರಾಜ್ಯಗಳಲ್ಲಿ ಕೈ ಪಾಳಯ ಸೋಲುತ್ತಿರುವುದು ಇದೇ ಮೊದಲಲ್ಲ. ಮಧ್ಯ ಪ್ರದೇಶ, ಛತ್ತೀಸಗಢ ಹಾಗೂ ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷವು ಅವಕಾಶಗಳನ್ನು ಕೈಚೆಲ್ಲಿತ್ತು. ಬಿಜೆಪಿಯೊಂದಿಗೆ ನೇರ ಸ್ಪರ್ಧೆ ಅಥವಾ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಾಲುದಾರರಾಗಿರುವ ರಾಜ್ಯಗಳಲ್ಲಿ ಪಕ್ಷ ಮತ್ತೊಮ್ಮೆ ತನ್ನ ವೈಫಲ್ಯವನ್ನು ಬಟಾಬಯಲು ಮಾಡಿದೆ. ನಾಯಕತ್ವ, ಸಂಘಟನಾ ಸಾಮರ್ಥ್ಯ, ರಾಜಕೀಯ ಜಾಣ್ಮೆ, ರಣತಂತ್ರ ಹಾಗೂ ಗೆಲುವಿನ ಹಸಿವಿನ ಅಗ್ನಿಪರೀಕ್ಷೆಯಲ್ಲಿ ಪಕ್ಷ ಪುನಃ ಎಡವಿದೆ. ಅವಕಾಶಗಳನ್ನು ಕೈಚೆಲ್ಲುವ ತನ್ನ ಹಳೆಯ ಚಾಳಿಯನ್ನು ಪುನರಾವರ್ತಿಸಿದೆ. ಗತವೈಭವದ ಸ್ವಪ್ರತಿಷ್ಠೆಯನ್ನು ಬಿಟ್ಟುಕೊಟ್ಟು ಯಶಸ್ವಿ ಮೈತ್ರಿಕೂಟಗಳನ್ನು ಕಟ್ಟದಿದ್ದರೆ ಪಕ್ಷಕ್ಕೆ ಇನ್ನಷ್ಟು ಸೋಲು ಕಟ್ಟಿಟ್ಟ ಬುತ್ತಿ ಎಂಬುದನ್ನು ಈ ಚುನಾವಣೆ ಮತ್ತೊಮ್ಮೆ ಸಾರಿದೆ. ಇದೀಗ ಮಹಾರಾಷ್ಟ್ರ ಚುನಾವಣೆ ಬಿಜೆಪಿಗೆ ಹೊಸ ಸಂದೇಶವನ್ನು ರವಾನಿಸಿದೆ. ಯಾವುದೇ ಕಾರಣಕ್ಕೂ ಆರ್ ಎಸ್ ಎಸ್ ಅನ್ನು ದೂರ ಮಾಡಿದರೆ ಬಿಜೆಪಿಗೆ ಉಳಿಗಾಲ ಇಲ್ಲ ಎನ್ನುವುದನ್ನು ಈ ಚುನಾವಣೆ ನಿರೂಪಿಸಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆ ವೇಳೆ ಬಿಜೆಪಿ ಹಾಗೂ ಆರ್ ಎಸ್ ಎಸ್ ಜೊತೆಗೂಡಿ ಚುನಾವಣೆ ರಣತಂತ್ರ ರೂಪಿಸುವುದರಲ್ಲಿ ಯಾವ ಸಂದೇಹವು ಇಲ್ಲ.
ಒಟ್ಟಾರೆ ದೇಶದ ಎರಡನೇ ಅತಿ ದೊಡ್ಡ ರಾಜ್ಯವಾಗಿರುವ ಮಹಾರಾಷ್ಟ್ರ ಚುನಾವಣೆ ಗೆಲುವು ಬಿಜೆಪಿಗೆ ಬಹುದೊಡ್ಡ ದಿಗ್ವಿಜಯ ಎಂದೇ ಬಣ್ಣಿಸಲಾಗುತ್ತಿದೆ.