ಬೆಳಗಾವಿ: ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಚಂದಗಢ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಿವಾಜಿ ಪಾಟೀಲ ಅವರ ವಿಜಯೋತ್ಸವದ ವೇಳೆ ಅವಘಡ ಸಂಭವಿಸಿದೆ.

ಮೆರವಣಿಗೆಯಲ್ಲಿದ್ದ ಕೆಲ ಮಹಿಳೆಯರಿಗೂ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಂದಗಢ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಸ್ವತಂತ್ರ ಅಭ್ಯರ್ಥಿ ಶಿವಾಜಿ ಪಾಟೀಲ ಅವರು ಶನಿವಾರ (ನವೆಂಬರ್ 23) ರಾತ್ರಿ ವಿಜಯೋತ್ಸವದ ಸಂದರ್ಭದಲ್ಲಿ ವಾಹನದ ಮೂಲಕ ಗುಲಾಲು ಸುರಿಯಲಾಗಿದೆ. ಆಗ ದಿಢೀರನೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯಲ್ಲಿ ಹಲವು ನಾಗರಿಕರು ಮತ್ತು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಚಂದಗಢದ ಮಹಗಾಂವ್‌ನಲ್ಲಿ
ಈ ಘಟನೆ ನಡೆದಿದ್ದು, ಮಹಿಳೆಯರು ಶಿವಾಜಿ ಪಾಟೀಲರಿಗೆ ‘ಆರತಿ’ ಬೆಳಗುತ್ತಿದ್ದಾಗ, ಕ್ರೇನ್‌ನಿಂದ ದೊಡ್ಡ ಪ್ರಮಾಣದ ‘ಗುಲಾಲ್’ ಸುರಿಯಲಾಗಿದೆ. ‘ಆರತಿ’ ಪ್ಲೇಟ್‌ಗಳ ಮೇಲೆ ಬಿದ್ದು ಬೆಂಕಿ ಹೊತ್ತಿಕೊಂಡಿತು. ಜೊತೆಗೆ ಪಟಾಕಿ ಸಿಡಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಸಂದೇಹವೂ ಇದೆ. ಶಿವಾಜಿ ಪಾಟೀಲರ ಜೊತೆಗೆ ಕೆಲವು ಮಹಿಳೆಯರಿಗೆ ಸುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದರು.

ಶಿವಾಜಿ ಪಾಟೀಲ ಅವರು ಪಶ್ಚಿಮ ಮಹಾರಾಷ್ಟ್ರದ ಚಂದಗಢದಲ್ಲಿ ಎನ್‌ಸಿಪಿಯ ರಾಜೇಶ್ ಪಾಟೀಲ ಅವರನ್ನು 24,134 ಮತಗಳಿಂದ ಸೋಲಿಸಿ ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಭರ್ಜರಿ ವಿಜಯೋತ್ಸವ ಆಚರಿಸಲಾಗುತ್ತಿತ್ತು.