ಹೆಬ್ರಿ : ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟ ಕಾಲೇಜು ಮೈದಾನದಲ್ಲಿ ನಡೆಯಿತು . ಉದ್ಘಾಟಕರಾಗಿ ಆಗಮಿಸಿದ, ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಶಿರೂರು ಶ್ರೀಧರ ಶೆಟ್ಟಿ ಅವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ , ಕ್ರೀಡೆ ಕಲ್ಪವೃಕ್ಷವಿದ್ದಂತೆ . ಕಲ್ಪವೃಕ್ಷದ ಗರಿಯಿಂದ ಹಿಡಿದು ಚಿಪ್ಪಿನವರೆಗೆ ಎಲ್ಲವೂ ಉಪಯುಕ್ತ. ಹಾಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೇಹದ ಸರ್ವ ಅಂಗಾಂಗಗಳಿಗೂ ವ್ಯಾಯಾಮ ದೊರೆತು ದೇಹ ಮತ್ತು ಮನಸ್ಸು ಆರೋಗ್ಯಪೂರ್ಣವಾಗುತ್ತದೆ. ಅಮೃತ ಭಾರತಿ ಕ್ರೀಡೆಗೆ ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್ ಮಾತನಾಡಿ, ಶಿಕ್ಷಣ ಮತ್ತು ಕ್ರೀಡೆ ಇವೆರಡು ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯಕ. ಆದ್ದರಿಂದ ಅಮೃತ ಭಾರತಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ತುಂಬಾ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ . ಮುಂದೆಯೂ ಕೂಡ ಇದೇ ರೀತಿಯ ಪ್ರೋತ್ಸಾಹ ನೀಡುತ್ತೇವೆ ಎಂದರು.

ಅಮೃತ ಭಾರತಿ ಟ್ರಸ್ಟ್ ನ ಸದಸ್ಯ ಭಾಸ್ಕರ ಜೋಯಿಸ್ ಧ್ವಜಾರೋಹಣ ನೆರವೇರಿಸಿದರು. ಟ್ರಸ್ಟಿ ಬಾಲಕೃಷ್ಣ ಮಲ್ಯ ಹಾಸ್ಟೆಲ್ ಕಮಿಟಿ ಸದಸ್ಯ ರಾಮಕೃಷ್ಣ ಆಚಾರ್ಯ ಕಾಲೇಜು ಪ್ರಾಂಶುಪಾಲ ಅಮರೇಶ್ ಹೆಗ್ಡೆ ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು ಬೋಧಕ ಹಾಗೂ ಬೋಧಕೇತರ ವೃಂದ , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.