ಕುಂದಾಪುರ : ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ-1 ಚಲನಚಿತ್ರದ ಶೂಟಿಂಗಿಗೆ ತೆರಳುತ್ತಿದ್ದ ನೃತ್ಯ ಕಲಾವಿದರಿದ್ದ ಮಿನಿ ಬಸ್ ಭಾನುವಾರ ರಾತ್ರಿ ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸುಮಾರು 25 ಜೂನಿಯರ್ ನೃತ್ಯಗಾರರು ಕಾಂತಾರ ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಿ ಮಿನಿ ಬಸ್ ನಲ್ಲಿ ತೆರಳುತ್ತಿದ್ದಾಗ ಸ್ಕೂಟಿ ಅಡ್ಡ ಬಂದ ಪರಿಣಾಮ ಅಪಘಾತವಾಗುವುದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಮಿನಿ ಬಸ್ ಪಲ್ಟಿಯಾಗಿದೆ. ಮುದೂರಿನಲ್ಲಿ ಚಿತ್ರೀಕರಣ ಮುಗಿಸಿ ಕೊಲ್ಲೂರಿಗೆ ಹೋಗುತ್ತಿದ್ದಾಗ ಹಾಲ್ಕಲ್ ನ ಆನೆಝರಿ ಎಂಬಲ್ಲಿ ಈ ಅಪಘಾತ ನಡೆದಿದೆ.

ಗಾಯಾಳುಗಳನ್ನು ಜಡ್ಕಲ್ ಹಾಗೂ ಕುಂದಾಪುರ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.

ಕಾಂತಾರ-1 ಚಲನಚಿತ್ರ ಕುಂದಾಪುರ ಸೇರಿದಂತೆ ಕರಾವಳಿಯ ರಮಣೀಯ ಸ್ಥಳಗಳಲ್ಲಿ ಚಿತ್ರಿಕರಣವಾಗುತ್ತಿದೆ. ಇತ್ತೀಚಿಗಷ್ಟೇ ಚಲನಚಿತ್ರ ಬಿಡುಗಡೆಯ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ಮುಂದಿನ ವರ್ಷದ ಅಕ್ಟೋಬರ್ 2 ರಂದು ಈ ಚಿತ್ರ ರಿಲೀಸ್ ಆಗಲಿದ್ದು ಭರದಿಂದ ಚಿತ್ರೀಕರಣ ನಡೆಯುತ್ತಿದೆ.
ಜೂನಿಯರ್ ನೃತ್ಯ ಕಲಾವಿದರು ಹಾಡಿನ ಚಿತ್ರೀಕರಣಕ್ಕೆ ಬೆಂಗಳೂರಿನಿಂದ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಬಸ್ಸಿನಲ್ಲಿ ಜೂನಿಯರ್ ಕಲಾವಿದರು ಇದ್ದು ಈ ಪೈಕಿ ಆರು ಜನರಿಗೆ ಗಾಯವಾಗಿದೆ ಎಂದು ಗೊತ್ತಾಗಿದೆ.