ಬೆಳಗಾವಿ : ಪೊಲೀಸರಿಗೆ ಆಧುನಿಕ ತಂತ್ರಜ್ಞಾನಗಳು ಅಪರಾಧ ಪ್ರಕರಣ ಪತ್ತೆಹಚ್ಚಲು ನೆರವಾಗುತ್ತಿವೆ. ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸರು ಇದೀಗ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿ ಊರೂರು ಅಲೆದಾಡುತ್ತಿದ್ದ ಬಾಲಕನ ಮೂಲ ಊರನ್ನು ಪತ್ತೆ ಹಚ್ಚಿ ಅವನ ಪೋಷಕರಿಗೆ ಒಪ್ಪಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಛತ್ತೀಸಗಢದ ಪಲಾರಿ ಜಿಲ್ಲೆಯ ದಾಮ್ಮಿ ಗ್ರಾಮದ ತನ್ನ ಹೆತ್ತವರಿಂದ ಕ್ಷುಲ್ಲಕ ಕಾರಣಕ್ಕಾಗಿ ದೂರವಾಗಿ ದಾರಿಯಲ್ಲಿ ಸಿಕ್ಕ, ಸಿಕ್ಕ ರೈಲನ್ನೇರಿ ಖಾನಾಪುರಕ್ಕೆ ಬಂದಿಳಿದು ಅಲೆಯುತ್ತಿದ್ದ 10 ವರ್ಷದ ಬಾಲಕನನ್ನು ಖಾನಾಪುರ ಪೊಲೀಸರು ರಕ್ಷಣೆ ಮಾಡಿ ಹೆತ್ತವರ ಮಡಿಲು ಸೇರಿಸಿದ್ದಾರೆ.
ಆಧುನಿಕ ತಂತ್ರಜ್ಞಾನದ ನೆರವಿನಿಂದ ಬಾಲಕನ ಹೆತ್ತವರನ್ನು ಸಂಪರ್ಕಿಸಿ ಅವರಿಗೆ ಬಾಲಕನನ್ನು ಸುರಕ್ಷಿತವಾಗಿ ಒಪ್ಪಿಸಿ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ರಾತ್ರಿ ಪೊಲೀಸ್ ಸಹಾಯವಾಣಿ 112
ಸಂಖ್ಯೆಗೆ ಕರೆ ಮಾಡಿದ ನಾಗರಿಕರೊಬ್ಬರು ಅಪರಿಚಿತ ಬಾಲಕನೊಬ್ಬ ಏಕಾಂಗಿಯಾಗಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೊರಟಿರುವ ಮಾಹಿತಿಯನ್ನು ಖಾನಾಪುರ ಪೊಲೀಸರಿಗೆ ನೀಡಿದ್ದರು. ಈ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿದ ಪೊಲೀಸರು ಆತನನ್ನು ಖಾನಾಪುರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದರು. ಪೊಲೀಸರು ಕೇಳಿದ ಪ್ರಶ್ನೆಗಳು ಬಾಲಕನಿಗೆ ಅರ್ಥವಾಗಲಿಲ್ಲ. ಬಾಲಕನ ಮಾತುಗಳು ಪೊಲೀಸರಿಗೆ ತಿಳಿಯಲಿಲ್ಲ. ಆದರೆ, ಹಲವು ಸಮಯದ ತನಿಖೆ ಬಳಿಕ ಆತನ ಹೆಸರು ವಿಕ್ರಮ ಮತ್ತು ಆತನ ಊರು ದಾಮ್ಮಿ ಎಂದಷ್ಟೇ ಮಾಹಿತಿ ಸಿಕ್ಕಿತ್ತು.ಬಾಲಕನ ಭಾಷೆ ಅರಿಯದೇ ಸಂವಹನ ಸಮಸ್ಯೆ ಎದುರಿಸುತ್ತಿದ್ದ ಪೊಲೀಸರು ಕೊನೆಗೆ ಆತನಿಗೆ ಗೂಗಲ್ ಮ್ಯಾಪ್ ಮೂಲಕ ದಾಮ್ಮಿ ಎಂಬ ಹೆಸರಿನ ವಿವಿಧ ಊರುಗಳನ್ನು ತೋರಿಸಿದಾಗ ಛತ್ತೀಸಗಡ ರಾಜ್ಯದಲ್ಲಿರುವ ಊರೇ ನನ್ನೂರು ಎಂದು ಗುರುತು ಹಿಡಿಯುತ್ತಾನೆ. ಮ್ಯಾಪ್ನಲ್ಲಿ ಆತನ ಊರಿನ ಬೀದಿಗಳನ್ನು ಪರಿಚಯಿಸಿದಾಗ ಆತನ ತಂದೆಯ ಪರಿಚಯದ ಪಂಚರ್ ಅಂಗಡಿ ಒಂದನ್ನು ಗುರುತಿಸುತ್ತಾನೆ. ಆ ಅಂಗಡಿಯ ನಾಮಫಲಕದಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಪೊಲೀಸರು ಬಾಲಕನ ಜೊತೆ ಅಂಗಡಿಯವನನ್ನು ಆತನ ಭಾಷೆಯಲ್ಲಿ ಮಾತನಾಡಿಸುತ್ತಾರೆ. ಅಂಗಡಿಯವನಿಂದ ಬಾಲಕನ ತಂದೆಯ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗುತ್ತಾರೆ.
ತನ್ನ ಮಗ ಕರ್ನಾಟಕದ ಖಾನಾಪುರ ಪೊಲೀಸ್ ಠಾಣೆಯಲ್ಲಿರುವ ವಿಷಯವನ್ನು ಪೊಲೀಸರಿಂದ ಅರಿತ ಬಾಲಕನ ತಂದೆ ಕನ್ಹಯ್ಯಾ ಚವಾಣ ಸೋಮವಾರ ಛತ್ತೀಸಗಢದಿಂದ ಖಾನಾಪುರ ಠಾಣೆಗೆ ಬಂದು ಮಗನನ್ನು ಪೊಲೀಸರಿಂದ ಪಡೆದು ತಮ್ಮೂರಿಗೆ ಕರೆದುಕೊಂಡು ಹೋಗಿದ್ದಾನೆ. ತಂದೆ-ಮಗನ ಮಿಲನಕ್ಕೆ ಖಾನಾಪುರ ಠಾಣೆಯ ಪಿಐ ಮಂಜುನಾಥ ನಾಯ್ಕ, ಸಿಬ್ಬಂದಿ ಹಾಗೂ ಆತನ ಪೋಷಕರು ಸಾಕ್ಷಿಯಾದರು.