ಸುಬ್ರಹ್ಮಣ್ಯ: ರಾಜ್ಯದ ಅತ್ಯಂತ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇದೀಗ ಚಂಪಾಷಷ್ಠಿಯ ಸಂಭ್ರಮ. ಇದರ ಪ್ರಯುಕ್ತ ದೇವಸ್ಥಾನದಲ್ಲಿ ಸಹಸ್ರಾರು ಭಕ್ತರು ಆಗಮಿಸಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ದೇವರ ದರ್ಶನ ಪಡೆಯುತ್ತಾರೆ. ಹೀಗಾಗಿ ದೇವಸ್ಥಾನದಲ್ಲಿ ಪ್ರತಿದಿನ ನಡೆಯುತ್ತಿರುವ ಕೆಲ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಕಾರ್ತಿಕ ಬಹುಳ ದ್ವಾದಶಿಯಾದ ನ.27ರಂದು ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕೊಪ್ಪರಿಗೆ ಏರುವುದರೊಂದಿಗೆ ಸಂಭ್ರಮದ ಕುಕ್ಕೆ ಜಾತ್ರೋತ್ಸವ ಆರಂಭವಾಗಲಿದೆ. ಎಲ್ಲ ಕ್ಷೇತ್ರಗಳಲ್ಲಿ ಕೊಡಿ ಏರುವುದರ ಮೂಲಕ ಜಾತ್ರೆ ಆರಂಭವಾದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊಪ್ಪರಿಗೆ ಏರುವ ಮೂಲಕ ಜಾತ್ರೆಗೆ ಚಾಲನೆ ಸಿಗುತ್ತದೆ.

ಬುಧವಾರ ಬೆಳಗ್ಗೆ 7 ರಿಂದ 9 ಗಂಟೆ ಒಳಗಿನ ಶುಭಮುಹೂರ್ತದಲ್ಲಿ ರಾಮ- ಲಕ್ಷ್ಮಣ ಎಂಬ ಜೊಡಿ ಕೊಪ್ಪರಿಗೆ ಏರುವುದರೊಂದಿಗೆ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

ರಾಮ- ಲಕ್ಷ್ಮಣ ಎಂಬ ಎರಡು ದೊಡ್ಡ ಕೊಪ್ಪರಿಗೆಗಳನ್ನು ಏರಿಸಲಾಗುತ್ತದೆ. ಅಕ್ಷಯ ಪಾತ್ರೆ ಎಂದೇ ಕರೆಯುವ ಈ ಕೊಪ್ಪರಿಗೆಗಳಿಗೆ ಪೂಜೆಗಳು ನೆರವೇರುತ್ತದೆ. ಇದು ಶ್ರೀಕ್ಷೇತ್ರದ ಅನ್ನದಾನದ ಸಂಕೇತವೂ ಹೌದು ಎಂಬುದಾಗಿ ನಂಬಲಾಗಿದೆ.

ಕೊಪ್ಪರಿಗೆ ಅಂದರೆ ದೊಡ್ಡದಾದ ಅನ್ನದ ಪಾತ್ರೆ (ದೊಡ್ಡ ಕಟಾರ). ದೇವಳದ ಒಳಾಂಗಣದಲ್ಲಿರುವ ದೊಡ್ಡದಾದ ಎರಡು ಒಲೆಯ ಮೇಲೆ ದೊಡ್ಡ ದೊಡ್ಡ ಎರಡು ಅನ್ನದ ಕೊಪ್ಪರಿಗೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುಮೂಹುರ್ತದಲ್ಲಿ ಏರಿಸಲಾಗುತ್ತದೆ.

ಭಜನೋತ್ಸವ: ವಾರ್ಷಿಕ ಚಂಪಾಷಷ್ಠಿ ಆರಂಭದ ದಿನವಾದ ಬುಧವಾರ

ಅಖಂಡ ಭಜನೋತ್ಸವ ನೆರವೇರಲಿದೆ. ಮುಂಜಾನೆ ಕುಕ್ಕೆ ಸುಬ್ರಹ್ಮಣ್ಯ ದೇವಳದ ಧರ್ಮಸಮ್ಮೇಳನ ಮಂಟಪದಲ್ಲಿ ಪ್ರಾತಃಕಾಲ 6 ಗಂಟೆಯಿಂದ ನಿರಂತರವಾಗಿ ಗುರುವಾರ ಮುಂಜಾನೆ 6 ಗಂಟೆಯವರೆಗೆ ನೆರವೇರಲಿದೆ. ಈ ಅಖಂಡ ಭಜನೋತ್ಸವದಲ್ಲಿ 24 ವಿವಿಧ ಭಜನಾ ತಂಡಗಳು ಭಾಗವಹಿಸಲಿವೆ.

 

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವವು ನ. 27ರಿಂದ ಡಿ. 12ರವರೆಗೆ ನೆರವೇರಲಿದೆ. ನ. 25 ರಿಂದ ಡಿ. 12ರವರೆಗೆ ಸರ್ಪ ಸಂಸ್ಕಾರ ಸೇವೆ ನಡೆಯುವುದಿಲ್ಲ. ಇತರ ಸೇವೆಗಳು ಎಂದಿನಂತೆ ನಡೆಯಲಿವೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.

ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವು ಸೇವೆಗಳು ನೆರವೇರುವುದಿಲ್ಲ.
ಲಕ್ಷದೀಪೋತ್ಸವ (ನ.30), ಚೌತಿ (ಡಿ.5), ಪಂಚಮಿ (ಡಿ.6) ದಿನ ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ (ಡಿ.7)ಯಂದು ಮಧ್ಯಾಹ್ನ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ನೆರವೇರುವುದಿಲ್ಲ. ಲಕ್ಷದೀಪೋತ್ಸವ (ನ.30), ಚೌತಿ (ಡಿ.5), ಪಂಚಮಿ (ಡಿ.6), ಚಂಪಾಷಷ್ಠಿ (ಡಿ.7) ಮತ್ತು ಕೊಪ್ಪರಿಗೆ ಇಳಿಯುವ ಮಹಾಸಂಪ್ರೋಕ್ಷಣೆಯ ದಿನ (ಡಿ.12)ದಂದು ಪಂಚಾಮೃತ ಮಹಾಭಿಷೇಕ ಸೇವೆ ನಡೆಯುವುದಿಲ್ಲ. ನ.27ರಿಂದ ಡಿ.12ರವರೆಗೆ ಸಂಜೆಯ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ.

ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ನ.26ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಕಾರ್ಯ ಇರುವುದರಿಂದ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಭಕ್ತರಿಗೆ ದೇವರ ದರ್ಶನ, ಸೇವೆ ನೆರವೇರಿಸಲು ಅವಕಾಶ ಇರುವುದಿಲ್ಲ. 2 ಗಂಟೆಯ ನಂತರ ಅವಕಾಶ ನೀಡಲಾಗುವುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.