ಕಲಬುರಗಿ: ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ(ಜಿಮ್ಸ್) ಆವರಣದ ತಾಯಿ ಮತ್ತು ಮಕ್ಕಳ ಚಿಕಿತ್ಸಾ ವಿಭಾಗದಿಂದ ಅಪಹರಣಗೊಂಡಿದ್ದ ನವಜಾತ ಗಂಡು ಶಿಶುವನ್ನು ಬುಧವಾರ ಬೆಳಿಗ್ಗೆ ಸುರಕ್ಷಿತವಾಗಿ ತಾಯಿ ಮಡಿಲು ಸೇರಿದೆ. ಇದರಿಂದ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ.

ಶುಶೂಷಕಿಯರ (ನರ್ಸ್) ಸೋಗಿನಲ್ಲಿ ಬಂದಿದ್ದ ಇಬ್ಬರು ಮಹಿಳೆಯರು, ನವಜಾತ ಗಂಡು ಶಿಶುವನ್ನು ಸೋಮವಾರ ಮಧ್ಯಾಹ್ನ ಅಪಹರಿಸಿದ್ದರು. ಈ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಶಿಶು ಪತ್ತೆಗೆ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದರು. ತ್ವರಿತಗತಿಯಲ್ಲಿ ತನಿಖೆ ನಡೆಸಿದ ಪೊಲೀಸರು, ಶಿಶುವನ್ನು ಪತ್ತೆ ಹಚ್ಚಿ ತಾಯಿಗೆ ಒಪ್ಪಿಸಿದ್ದಾರೆ.

ಶಿಶುವನ್ನು ಅಪಹರಿಸಿದ ಆರೋಪದಡಿ ಎಂಎಸ್‌ಕೆ ಮಿಲ್‌ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಎಂಬುವವರನ್ನು ಬಂಧಿಸಲಾಯಿತು.

ಶಿಶುವನ್ನು ಅಪಹರಿಸಿದ ಆರೋಪದಡಿ ಎಂಎಸ್‌ಕೆ ಮಿಲ್‌ ಬಡಾವಣೆಯಲ್ಲಿ ಉಮೇರಾ, ನಸರೀನ್ ಹಾಗೂ ಫಾತಿಮಾ ಎಂಬುವವರನ್ನು ಬಂಧಿಸಲಾಗಿದೆ. ಶಿಶುವನ್ನು ಅಪಹರಿಸಿದ ಬಳಿಕ ಖೈರುನ್ ಎಂಬ ಮಹಿಳೆಗೆ ₹50 ಸಾವಿರಕ್ಕೆ ಮಾರಾಟ ಮಾಡಿದ್ದರು. ಶಿಶು ಕಾಣೆಯಾದ ಸುದ್ದಿ ಮಾಧ್ಯಮಗಳಲ್ಲಿ ನೋಡಿದ್ದ ಅಲ್ಲಿನ ಸ್ಥಳೀಯರು, ಖೈರುನ್ ಮನೆಯಲ್ಲಿ ಹಸುಳೆಯನ್ನು ನೋಡಿ ಅನುಮಾನಗೊಂಡರು. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ಕಮಿಷನರ್‌ ಶರಣಪ್ಪ ಎಸ್.ಡಿ. ಅವರು ಹಸುಳೆಯನ್ನು ಚಿತ್ತಾಪುರ ತಾಲ್ಲೂಕಿನ ರಾವೂರ ಗ್ರಾಮದ ರಾಮಕೃಷ್ಣ ಸಗರ ಹಾಗೂ ಕಸ್ತೂರಿ ದಂಪತಿಗೆ ಒಪ್ಪಿಸಿದರು.