ಬೆಳಗಾವಿ : ಭಾಷೆ ಉಳಿಯಬೇಕಾದರೆ ಭಾಷೆ ಹೆಚ್ಚುಹೆಚ್ಚು ಬಳಸಬೇಕು, ಕನ್ನಡದ ಕುರಿತಾದ ಚಟುವಟಿಕೆಗಳು ನಿರಂತರ ನಡೆಯಬೇಕು ಆಗ ಕನ್ನಡವು ಹುಲುಸಾಗಿರಲು ಸಾಧ್ಯ ಎಂದು ನಾಡಿನ ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಅಭಿಪ್ರಾಯಪಟ್ಟರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶ, ಸಮಾಜ, ಭಾಷೆ, ಸಂಸ್ಕೃತಿಯನ್ನು ಎಂದೂ ಮರೆಯಬೇಡಿ. ಅವು ನಮ್ಮ ಬದುಕಿನ ಅವಿಭಾಜ್ಯ ಅಂಗಗಳು. ಅವುಗಳೊಂದಿಗೆ ನಮ್ಮ ಅಸ್ತಿತ್ವ. ಭಾಷೆಯೊಂದಿಗೆ ನಮ್ಮ ಗುರುತು, ಭಾಷೆಯೊಂದಿಗೆ ನಮ್ಮ ಪೂರ್ವಜರ ಶ್ರೀಮಂತಿಕೆಯಿದೆ.
ನಾವು ಎಷ್ಟೇ ಎತ್ತರಕ್ಕೆ ಏರಿದರೂ ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ಸಮಾಜ, ಆಚಾರ ವಿಚಾರಗಳನ್ನು ಮರೆಯಬಾರದು. ಏಕೆಂದರೆ ನಮ್ಮ ಬೇರುಗಳು ಅದರಲ್ಲಿ ಇವೆ. ಬೇರನ್ನು ಬೇರ್ಪಡಿಸಿದರೆ ಬದುಕಿಗೆ ಅರ್ಥವಿಲ್ಲ ಎಂದು ಹೇಳಿದರು.

ನಮ್ಮ ನಮ್ಮ ವಿದ್ಯೆಯಲ್ಲಿ, ಜ್ಞಾನದಲ್ಲಿ ನಮ್ಮ ಬದುಕು ಅಡಗಿದೆ. ಅದನ್ನು ಗುರುತಿಸಿ ಹೊರತೆಗೆದು ಬದುಕನ್ನು ಕಟ್ಟಿಕೊಳ್ಳುವ ಜಾಣ್ಮೆ ನಮ್ಮಲ್ಲಿ ಇರಬೇಕು.
ನಮ್ಮೆಲ್ಲರಲ್ಲಿಯೂ ಶಕ್ತಿಯಿದೆ. ಅದನ್ನು ಸಾಂದರ್ಭಿಕವಾಗಿ ಬಳಸಿಕೊಳ್ಳದೆ ಸಮರ್ಥವಾಗಿ ಬಳಸಿಕೊಳ್ಳಬೇಕು. ತಂದೆ ತಾಯಿಗಳ ಹಂಬಲ ತಮ್ಮ ಮಕ್ಕಳು ನಮ್ಮನ್ನು ಕಾಪಾಡುವುದು ಮತ್ತು ನಮ್ಮನ್ನು ಬದುಕಿಸುವುದಕ್ಕಲ್ಲ. ಅವರು ಜೀವಂತವಾಗಿ, ಜೀವನೋತ್ಸಾಹದಿಂದ ಸಮಾಜದಲ್ಲಿ ಬದುಕಿ ಸಾಧಿಸಬೇಕೆಂಬುದು ಅವರ ಬಯಕೆ. ಆ ಬಯಕೆ ತಕ್ಕಂತೆ ಮಕ್ಕಳು ಬದುಕಬೇಕು. ಆಗ ಬದುಕು ಸಾರ್ಥಕ. ಆ ಸುಂದರವಾದ ಬದುಕಿನ ಬೆಳಕಿನಲ್ಲಿ ತಂದೆ ತಾಯಿ ಆನಂದವನ್ನು ಕಾಣುತ್ತಾರೆ.
ಮಕ್ಕಳ ಪ್ರೀತಿ, ಪ್ರೇಮ, ಹುಚ್ಚಾಟದಲ್ಲಿ ಬದುಕು ತೇಲಿ ಹೋಗಬಾರದು. ಮಕ್ಕಳಿಂದ ತಂದೆ ತಾಯಿ ಕಣ್ಣಿನಲ್ಲಿ ಪನ್ನೀರ ಬರಬೇಕೇ ವಿನಃ ಕಣ್ಣೀರು ಬರಬಾರದು ಇದು ಪ್ರತಿಯೊಬ್ಬ ವಿದ್ಯಾರ್ಥಿಯೂ ಅರಿತುಕೊಳ್ಳಬೇಕು ಎಂದರು.

ಬೇಲೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಧ್ಯಾಪಕಿ ನಾಗಶ್ರೀ ತ್ಯಾಗರಾಜ ಮಾತನಾಡಿ,
ನಾವು ಸರಿಯಾದ ಮಾರ್ಗದರ್ಶನ ಮತ್ತು ಸನ್ಮಾರ್ಗದಲ್ಲಿ ಸಾಗಿ, ಸತ್ಯ, ಪರಿಶ್ರಮ, ಶ್ರದ್ಧೆ, ಹೋರಾಟ, ಸಮರ್ಪಣೆಯೊಂದಿಗೆ ಬದುಕು ಸಾಗಿಸಿದಾಗ ನಮ್ಮ ಜೀವನ ದಂತಕಥೆಯಾಗುತ್ತದೆ. ಆದರೆ ಅದರ ವೈರುಧ್ಯ ದಿಕ್ಕಿನಲ್ಲಿ ಸಾಗಿದಾಗ ಬದುಕು ದುರಂತಕಥೆಯಾಗುತ್ತದೆ. ನಮ್ಮ ಬದುಕು ಬಾಹ್ಯಜಗತ್ತಿಗಿಂತ ಆತ್ಮಸಾಕ್ಷಿಯ ಕರೆಗೆ ಅನುಗುಣವಾಗಿ ನಡೆಯಬೇಕು. ಮಕ್ಕಳಲ್ಲಿ ಗುರುಹಿರಿಯರಿಗೆ ಗೌರವಿಸುವ ಸಂಸ್ಕೃತಿ ಸದಾ ಜಾಗೃತವಾಗಿರಬೇಕು. ಜೀವನದಲ್ಲಿ ಏನೇ ಬಂದರೂ ಸ್ವೀಕರಿಸುವ ಮನೋಭಾವವಿರಲಿ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಚವಿ ಕುಲಪತಿ ಪ್ರೊ. ಸಿ ಎಂ ತ್ಯಾಗರಾಜ ಅವರು ಗಡಿಭಾಗದಲ್ಲಿ ಕನ್ನಡದ ಕಂಪು ಸದಾ ಅನುರಣಿಸಲು ನವೆಂಬರ್ ತಿಂಗಳ ಪೂರ್ತಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಪರಿಚಯಿಸುವ, ಮೆಲುಕು ಹಾಕುವ ವಿನೂತನ ಕಾರ್ಯಕ್ರಮ ವಿಶ್ವವಿದ್ಯಾಲಯ ಹಮ್ಮಿಕೊಂಡಿದೆ. ಪ್ರತಿವಾರ ಒಂದೊಂದು ಕ್ಷೇತ್ರದ ಮಹನೀಯರನ್ನು ಆಹ್ವಾನಿಸಿ ಅವರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಉಣಬಡಿಸುತ್ತಿದ್ದೇವೆ.
ನಮ್ಮ ಭಾಷೆ, ಸಂಸ್ಕೃತಿಗೆ ನಮ್ಮ ಹೃದಯದಲ್ಲಿ ಶಾಶ್ವತ ಸ್ಥಾನವಿರಲಿ. ನಮ್ಮ ಹಿರಿಯರು ಕೊಟ್ಟ ಈ ಅಮೂಲ್ಯ ಸಂಪತ್ತು, ಪರಂಪರೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ನಮ್ಮೆಲ್ಲರ ಆಸೆ, ನಮ್ಮ ವಿದ್ಯಾರ್ಥಿಗಳ ಬದುಕು ಎತ್ತರದಲ್ಲಿರಬೇಕು. ಅವರ ಬದುಕು ಆದರ್ಶಮಯವಾಗಬೇಕು. ಜ್ಞಾನದ ಉಪಾಸನೆಗೆ ಬದುಕನ್ನೇ ಬದಲಾಯಿಸುವ ಶಕ್ತಿಯಿದೆ. ವಿದ್ಯಾರ್ಥಿಗಳು ಅಂಕಗಳ ಹಿಂದೆ ಹೋಗದೆ ಜ್ಞಾನದ ಹಿಂದೆ ಹೋಗಬೇಕು. ಹಿರೇಮಗಳೂರು ಕಣ್ಣನ್ ಅಂಥ ಮಹನೀಯರು ಕೊಡುವ ಬೆಳಕಿನಲ್ಲಿ ಮತ್ತೊಂದು ಸಮಾಜ ಕಟ್ಟಲು ಸಾಧ್ಯವಾಗುತ್ತದೆ. ಅವರ ಜ್ಞಾನ ದರ್ಶನ ನಮ್ಮನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತದೆ. ಸಾಮಾನ್ಯ ಕುಟುಂಬದ ಮಕ್ಕಳು ಅಸಾಮಾನ್ಯವಾಗಿ ಬೆಳೆಯಲು ಖಂಡಿತ ಸಾಧ್ಯವಿದೆ. ಅಂಥ ಅಸಂಖ್ಯಾತ ಉದಾಹರಣೆಗಳಿವೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ. ಜಿ. ಹೆಗಡೆ ಸ್ವಾಗತಿಸಿದರು.
ರಾಚವಿಯ ಕನ್ನಡ ರಾಜ್ಯೋತ್ಸವದ ಸರಣಿ ಕಾರ್ಯಕ್ರಮ ಸಮಿತಿಯ ಅಧ್ಯಕ್ಷ ಪ್ರೊ. ಎಂ ಸಿ. ಎರಿಸ್ವಾಮಿ ವಂದಿಸಿದರು. ವಿದ್ಯಾರ್ಥಿನಿ ಶಾಂಭವಿ ಥೋರ್ಲಿ ನಿರೂಪಿಸಿದರು. ವಿಜಯಲಕ್ಷ್ಮೀ ಹಡಪದ ಪರಿಚಯಿಸಿದರು. ಐಶ್ವರ್ಯ ಮುಗಳಿ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.