ಬೆಳ್ತಂಗಡಿ: ಕಾರ್ಯಕ್ರಮಕ್ಕೆಂದು ಬಂದು ಊಟದ ಬಳಿಕ ನದಿಗೆ ಸ್ನಾನಕ್ಕೆ ಹೋದ ಮೂವರು ಯುವಕರು ನೀರುಪಾಲಾದ ಘಟನೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ಬುಧವಾರ ಸಂಜೆ ನಡೆದಿದೆ.
ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಕಾರ್ಯಕ್ರಮದ ಹಿನ್ನೆಲೆ ಬಂದಿದ್ದ ಮೂಡುಬಿದಿರೆ ತಾಲೂಕಿನ ಎಡಪದವು ನಿವಾಸಿ ಲಾರೆನ್ಸ್(20), ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್(19), ಬಂಟ್ವಾಳ ಗ್ರಾಮದ ವಗ್ಗದ ಜೈಸನ್(19) ಎಂಬವರು ನ.27 ರಂದು ಊಟ ಮೂಗಿಸಿ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ಬಳಿ ಸ್ನಾನಕ್ಕೆ ತೆರಳಿದ್ದರು. ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ನೀರುಪಾಲಾಗಿದ್ದಾರೆ. ಮೂವರ ಮೃತದೇಹವನ್ನು ನೀರಿನಿಂದ ಹೊರ ತೆಗೆಯಲಾಗಿದ್ದು, ವೇಣೂರು ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತಪಟ್ಟ ಮೂವರು ಮಂಗಳೂರು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ.