ಬೆಳಗಾವಿ : ಸುಕ್ಷೇತ್ರ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ರೂ. 100 ಕೋಟಿ ಅನುದಾನವನ್ನು ಮಂಜೂರು ಮಾಡಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.

ಈ ಅನುದಾನ ಕೇಂದ್ರ ಪ್ರವಾಸೋದ್ಯಮ ಇಲಾಖೆ “Approval of capital expenditure under part -3 ( Development of lconic tourist centres of global scale ) of the scheme of special assistance to States for capital investment -2024-25 ರ ಯೋಜನೆಯಡಿ ಮಂಜೂರು ಮಾಡಿದ್ದು, ಕರ್ನಾಟಕ ರಾಜ್ಯದಲ್ಲಿ ಆಯ್ಕೆಯಾದ ಎರಡು ದೇವಸ್ಥಾನಗಳಲ್ಲಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನವೂ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತಾಪಿತ ಯೋಜನೆಯ ಅನುಮೋದನೆಯ ಕುರಿತು ಹಿಂದಿನ ತಿಂಗಳಷ್ಟೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ ಜಗದೀಶ ಶೆಟ್ಟರ್, ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಮಹತ್ವತೆಯ ಕುರಿತು ಹಾಗೂ ಇಲ್ಲಿ ಬರುವ ಭಕ್ತಾದಿಗಳ ಅನುಕೂಲಕ್ಕೆ ಮೂಲಭೂತ ಸೌಕರ್ಯದ ಅವಶ್ಯಕತೆಯ ಬಗ್ಗೆ ತಿಳಿಸಿ, ಯೋಜನೆಯ ಒಪ್ಪಿಗೆಗಾಗಿ ವಿನಂತಿಸಿದ್ದರು. ಬೇಡಿಕೆಗೆ ಸ್ಪಂದಿಸಿ ಅದರಂತೆ ಒಪ್ಪಿಗೆ ನೀಡಿರುವುದಕ್ಕೆ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಈ ಯೋಜನೆಯ ಅನುದಾನದಿಂದ ಪ್ರಸ್ತಾಪಿತ ದೇವಸ್ಥಾನದಲ್ಲಿ ಎಲ್ಲ ಮೂಲಭೂತ ಸೌಕರ್ಯಗಳು ನಿರ್ಮಾಣವಾಗಲಿದ್ದು ಇದರಿಂದ ಭಕ್ತಾದಿಗಳಿಗೆ ಖಂಡಿತವಾಗಿಯೂ ಹೆಚ್ಚಿನ ಅನುಕೂಲತೆ ಆಗಲಿದೆ ಎಂದು ಅವರು ಪ್ರಸ್ತಾಪಿಸಿದ್ದಾರೆ.