‌ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆಗೆ ಸರ್ಕಾರ ವಿಶೇಷ ಕಾಳಜಿ ವಹಿಸಿದ್ದು; ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ತಿಳಿಸಿದ್ದಾರೆ.

ನಗರದ ಜವಾಹರ ಬಾಲ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಕ್ಕಳ ದಿನಾಚರಣೆ- 2024 ಹಾಗೂ ಮಕ್ಕಳಿಗೆ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದ ನಂತರ ಸಚಿವರು ಮಾತನಾಡಿದರು.

ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರದಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯ ಮೂಲಕ ಮಕ್ಕಳಿಗಾಗಿಯೇ ಹತ್ತು ಹಲವು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಈಗಾಗಲೇ ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಮಾಂಟೆಸ್ಸರಿಗಳನ್ನಾಗಿ ಮೇಲ್ದರ್ಜೇರಿಸಲಾಗಿದೆ ಎಂದು ತಿಳಿಸಿದರು.

ಮಕ್ಕಳು ದೇಶದ ಶಕ್ತಿ- ಭವಿಷ್ಯ:
ಮಕ್ಕಳು ಎಂದರೇ ಒಂದು ರೀತಿ ಚಂಚಲ. ಮಕ್ಕಳೆಂದರೆ ಎಲ್ಲರಿಗೂ ಪ್ರೀತಿ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್‌ ಜವಾಹರ ಲಾಲ ನೆಹರು ಮಕ್ಕಳ ಮೇಲೆ ವಿಶೇಷವಾದ ಪ್ರೀತಿ, ಕಾಳಜಿ ಹೊಂದಿದ್ದರು. ಏಕೆಂದರೆ, ಇಂದಿನ ಮಕ್ಕಳು ನಾಡಿನ, ದೇಶದ ಶಕ್ತಿ ಮತ್ತು ಭವಿಷ್ಯ ಎಂದು ಭಾವಿಸಿದ್ದರು ಎಂದು ಸಚಿವರು ಹೇಳಿದರು.
ಭಾರತ 75 ವರ್ಷಗಳ ಹಿಂದೆ ಹೇಗಿತ್ತು, ಜನರ ಪರಿಸ್ಥಿತಿ ಹೇಗಿತ್ತು ಅಂದಿನ ಶಿಕ್ಷಣ ಹೇಗಿತ್ತು ಎನ್ನುವುದನ್ನು ಊಹಿಸಲು ಕೂಡ ಆಗದು. ಅತ್ಯಂತ ಬಡತನದ ಪರಿಸ್ಥಿತಿ ಇತ್ತು. ಆಗ ದೇಶದ ಜನಸಂಖ್ಯೆ ಕೇವಲ 35 ಕೋಟಿ. ಆದರೆ, ಈಗ ದೇಶದ 135 ಕೋಟಿಗಿಂತಲೂ ಹೆಚ್ಚಿದೆ. ಇಷ್ಟೊಂದು ಜನಸಂಖ್ಯೆ ಇದ್ದರೂ ಭಾರತ ಈಗ ವಿಶ್ವದ ಹಿರಿಯಣ್ಣನಾಗುವ ಎಲ್ಲ ಲಕ್ಷಣಗಳು ನಮ್ಮ ದೇಶಕ್ಕಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಅಂದಿನ ಮಕ್ಕಳೇ ಹಿರಿಯ ನಾಗರಿಕರಾಗಿ ದೇಶವನ್ನು ಈ ಸ್ಥಿತಿಗೆ ತಂದಿದ್ದಾರೆ ಎಂದರು.

ದೇಶದ 75 ವರ್ಷಗಳ ಪರಿಸ್ಥಿತಿ ಊಹಿಸಲಾಗದು;
ದೇಶದ 75 ವರ್ಷಗಳ ಹಿಂದಿನ ಜನರು ಬಡತನದಲ್ಲಿ ಹುಟ್ಟಿ, ಕರೆಂಟ್‌ ಇಲ್ಲದ ಸಂದರ್ಭದಲ್ಲಿ ಓದಿ ಮೇರು ವ್ಯಕ್ತಿಗಳಾಗಿ ನಮ್ಮೆಗೆಲ್ಲ ಆದರ್ಶರಾಗಿದ್ದಾರೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, ಅದು ಡಾ. ಬಾಬಾ ಸಾಹೇಬ ಅಂಬೇಡ್ಕರ್‌ ರವರು. ಎಂತಹ ಪರಿಸ್ಥಿತಿಯಲ್ಲಿ ಎಷ್ಟು ದೊಡ್ಡವರಾಗಿ ಬೆಳೆದರು; ದೇಶಕ್ಕೆ ಸಂವಿಧಾನವನ್ನು ಕೊಟ್ಟರು. ಸ್ವತಂತ್ರ ಭಾರತದ ಪ್ರಥಮ ಕಾನೂನು ಸಚಿವರಾದರು. ಆಗಿನ ಮಕ್ಕಳು ಬಹಳ ಕಷ್ಟುಪಟ್ಟು ಭಾರತವನ್ನು ಕಟ್ಟಿ, ಇಂದು ವಿಶ್ವದಲ್ಲೇ ನಂಬರ್‌ ಒನ್‌ ಆಗಲು ಶ್ರಮಿಸಿದ್ದಾರೆ. ಅವರು ಅನುಭವಿಸಿದ ಕಷ್ಟ ಇಂದಿನ ಮಕ್ಕಳಿಲ್ಲ. ಆದರೆ, ಇಂದಿನ ಮಕ್ಕಳು ವಿಶ್ವಮಟ್ಟದಲ್ಲಿ ಪ್ರಜ್ವಲಿಸಬೇಕು ಎಂದು ಸಚಿವರು ಆಶಿಸಿದರು.

ʼಮಾತೃಲಕ್ಷ್ಮಿʼ ಬಿಡುಗಡೆ:
ನಂತರ ಸಚಿವರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ವತಿಯಿಂದ ಹೊರತಂದ ಇಲಾಖೆಯ ಯೋಜನೆಯ ಮತ್ತು ಕಾರ್ಯಕ್ರಮಗಳ ಮಾಹಿತಿ ಕೈಪಿಡಿ- 2024 ʼಮಾತೃಲಕ್ಷ್ಮಿʼ ಯನ್ನು ಬಿಡುಗಡೆ ಮಾಡಿದರು.

ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎನ್. ಎಚ್. ಕೋನರೆಡ್ಡಿ, ಸಮಿತಿಯ ಸದಸ್ಯ ಮತ್ತು ಶಾಸಕ ಕೊತ್ತೂರು ಮಂಜುನಾಥ್, ಮಂಜುಳಾ ಅರವಿಂದ ಲಿಂಬಾವಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಬಾಲಭವನದ ಅಧ್ಯಕ್ಷ ಬಿ.ಆರ್. ನಾಯ್ಡು, ಧಾರವಾಡ ಭಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗನಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್‌, ಇಲಾಖಾ ನಿರ್ದೇಶಕ ಸಿದ್ದೇಶ್ವರ, ಜಂಟಿ ನಿರ್ದೇಶಕ ಬಿ.ಎಚ್. ನಿಶ್ಚಲ್ ಮತ್ತಿತರರು ಉಪಸ್ಥಿತರಿದ್ದರು.

ಪ್ರದರ್ಶನ ಮಳಿಗೆಗೆ ಭೇಟಿ:
ಇದಕ್ಕೂ ಮುನ್ನ ಸಚಿವರು ಮಕ್ಕಳ ದಿನಾಚರಣೆ ಅಂಗವಾಗಿ ಬಾಲಭವನದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ವತಿಯಿಂದ ಏರ್ಪಡಿಸಿದ್ದ ವಸ್ತು ಪ್ರದರ್ಶನ ಮಳಿಗೆಗಳಿಗೆ ಚಾಲನೆ ನೀಡಿದರು.
ಪೂರ್ವ ಶಿಕ್ಷಣ ಮತ್ತು ಪೂರಕ ಪೌಷ್ಠಿಕ ಆಹಾರ ಮಳಿಗೆ, ವಿಕಲಚೇತನರ ಸಪ್ತಾಹ ನಿಮಿತ್ತ ಜಾಗೃತಿ ಮಳಿಗೆ ಹಾಗೂ ಬೆಂಗಳೂರ ಉತ್ತರ ತಾಲ್ಲೂಕು ಮತ್ತು ಯಲಹಂಕ ತಾಲ್ಲೂಕಿನ ಗೋದಾವರಿ ಸ್ತ್ರೀಶಕ್ತಿ ಸ್ವಸಹಾಯ ಸಂಘ ಮತ್ತು ಅನುಗ್ರಹ ಸ್ತ್ರೀಶಕ್ತಿ ಸಂಘ ತೆರೆದಿದ್ದ ವಸ್ತುಪ್ರದರ್ಶನ ಮಳಿಗೆಗಳಿಗೆ ಭೇಟಿ ನೀಡಿ ಸಚಿವರು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಮಾಹಿತಿ ನೀಡಿದರು.

ಪುಷ್ಪ ಪ್ರದರ್ಶನಕ್ಕೆ ಚಾಲನೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲ ಭವನ, ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನ ಮತ್ತು ಬಾಲ ಭವನ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ವಿಷಯಾಧಾರಿತ ಪುಷ್ಪ ಪ್ರದರ್ಶನವನ್ನು ಮಕ್ಕಳೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಉದ್ಘಾಟಿಸಿದರು.

ಇದೇ ವೇಳೆ ಹೂವಿನಿಂದ ತಯಾರಿಸಲ್ಪಟ್ಟ ಪುಪ್ಪ ಕ್ಷಿಪಣಿಗೂ ಸಚಿವರು ಚಾಲನೆ ನೀಡಿದರು.

 

ವಾದ್ಯರಂಗ ಮಂಟಪದಲ್ಲಿ ನಾಟ್ಯ ತರಂಗ ಪುನಾರಂಭ :

ತೋಟಗಾರಿಕಾ ಇಲಾಖೆ ವತಿಯಿಂದ ಬೆಂಗಳೂರಿನ ಕಬ್ಬನ್ ಉದ್ಯಾನವನದ ವಾದ್ಯರಂಗ ಮಂಟಪದಲ್ಲಿ ಪ್ರತಿ ಭಾನುವಾರ ಬೆಳಿಗ್ಗೆ ನಾಟ್ಯ ತರಂಗ- ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಆದರೆ. ಇಂದು ನಾಟ್ಯ ತರಂಗ ಕಾರ್ಯಕ್ರಮಕ್ಕೆ ಸಚಿವೆ ಲಕ್ಷಿ ಹೆಬ್ಬಾಳಕರ್‌ ಚಾಲನೆ ನೀಡಿದರು.

ಇದೇ ವೇಳೆ ಬೆಂಗಳೂರಿನ ನೃತ್ಯ ಕಲಾವಿದರು ಪ್ರಸ್ತುತಪಡಿಸಿದ ನೃತ್ಯರೂಪಕವನ್ನು ಸಚಿವರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳ ದಿನಾಚರಣೆಯಲ್ಲಿ ರಾಜ್ಯ ಪ್ರಶಸ್ತಿ ಪ್ರದಾನ

ಬೆಂಗಳೂರು: ಮಕ್ಕಳ ದಿನಾಚರಣೆ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೊಡಮಾಡುವ 2024ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ, ವಿಶೇಷ ಸಾಧನೆ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಹಾಗೂ ಸಾಧಕ ವ್ಯಕ್ತಿಗಳಿಗೆ ಸಚಿವೆ ಲಕ್ಷೀ ಹೆಬ್ಬಾಳಕರ್‌ ಪ್ರಶಸ್ತಿ ಪ್ರದಾನ ಮಾಡಿದರು.

ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ:
ಧೈರ್ಯ, ಸಾಹಸ ಪ್ರದರ್ಶಿಸಿ, ಸಮಯ ಪ್ರಜ್ಞೆಯಿಂದ ಇತರ ಪ್ರಾಣವನ್ನು ಅಪಾಯದಿಂದ ರಕ್ಷಿಸಿದಂತಹ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಈ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆ ಹೊಸ ತಾಲ್ಲೂಕಿನ ಆನೆಕೆರೆ ಬಾಳೂರಿನ 2ನೇ ತರಗತಿ ವಿದ್ಯಾರ್ಥಿ ಆರ್.‌ ಮಣಿಕಂಠ, ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆರೋಡಿ ಗ್ರಾಮದ ಎಲ್‌. ನಿಶಾಂತ್‌ ಹಾಗೂ ಎ.ಎನ್.‌ ಅಶ್ವಿನ್‌, ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೊಳಿದ ವೈಭವಿ, ಉಡುಪಿ ಜಿಲ್ಲೆ ಸಾಲಿಗ್ರಾಮದ ಬಿ. ಧೀರಜ್‌ ಐತಾಳ, ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಹನಮಾಪುರದ ಮಹಮ್ಮದ್‌ ಸಮೀರ ಹಾಗೂ ಬೆಳಗಾವಿ ನಡಗಾವಿಯ 9ನೇ ವಿದ್ಯಾರ್ಥಿನಿ ಸ್ಫೂರ್ತಿ ಭಾಜನರಾಗಿದ್ದಾರೆ.

ವಿಶೇಷ ಸಾಧನೆ ಪ್ರಶಸ್ತಿ:
ಬೆಂಗಳೂರು ನಗರ ಜಿಲ್ಲೆ ಉತ್ತರಹಳ್ಳಿಯ ವಿ. ಆರುಣಿ ವಿಶೇಷ ಸಾಧನೆ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಈ ವಿದ್ಯಾರ್ಥಿನಿ ಪ್ರತಿಭಾವಂತ ಕಲಾವಿದೆ ಹಾಗೂ ಕ್ರೀಡಾಪಟು ಆಗಿ ವಿಶೇಷ ಸಾಧನೆ ಜೊತೆಗೆ ಶೈಕ್ಷಣಿಕವಾಗಿಯೂ ವಿಶೇಷ ಸಾಧನೆ ಮಾಡಿದ್ಧಾರೆ.

ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳ ರಾಜ್ಯ ಪ್ರಶಸ್ತಿ:
ತುಮಕೂರು ಜಿಲ್ಲೆ ಕುಣಿಗಲ್‌ ತಾಲ್ಲೂಕಿನ ವಾಣಿಗೆರೆ ಗ್ರಾಮದ ಸಂತ ಗ್ರಿಗೋರಿಯಸ್‌ ದಯಾ ಭವನ, ಧಾರವಾಡದ ಶಾರದ ಕಾಲೋನಿಯಲ್ಲಿರುವ ಹೊಂಬೆಳಕು ಪ್ರತಿಷ್ಠಾನ, ಕೊಪ್ಪಳದ ಅಕ್ಕಮಹಾದೇವಿ ಮಹಿಳಾ ಮಂಡಳಿ ಹಾಗೂ ಕೋಲಾರ ಜಯನಗರದ ಕರ್ನಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೌಕರರ ಸಂಘವು ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳ ರಾಜ್ಯ ಪ್ರಶಸ್ತಿಗೆ ಭಾಜನವಾಗಿವೆ.

ವ್ಯಕ್ತಿಗಳ ವಿಭಾಗದ ರಾಜ್ಯ ಪ್ರಶಸ್ತಿ :
ಶಿವಮೊಗ್ಗ ಜಿಲ್ಲೆಯ ಆಲ್ಕೋಳದ ನಂದಿನಿ ಬಡಾವಣೆಯ ಎಚ್‌.ಪಿ. ಸುದರ್ಶನ್‌, ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕು ಹಳಿಯಾಳ ರಸ್ತೆಯ ಸುನೀಲ ಮ ಕಮ್ಮಾರ್‌, ಬೀದರ್‌ ಜಿಲ್ಲೆ ಚಿಟಗುಪ್ಪ ತಾಲ್ಲೂಕಿನ ಕೊಡಂನಲ್‌ ನ ಸಂಗಮೇಶ್‌ ಹಾಗೂ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕು ಶಿರೂರಿನ ಗವಿಸಿದ್ದಯ್ಯ ಜ ಹಳ್ಳಿಕೇರಿ ಮಠ ಅವರು ವ್ಯಕ್ತಿಗಳ ವಿಭಾಗದ ರಾಜ್ಯ ಪ್ರಶಸ್ತಿಗೆ ಅರ್ಹರಾಗಿದ್ದಾರೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೆಲಸಕ್ಕೆ ಗಣ್ಯರ ಶ್ಲಾಘನೆ

ಬೆಂಗಳೂರು:
ಮಕ್ಕಳ ಭವಿಷ್ಯವನ್ನು ಮತ್ತಷ್ಟು ಉಜ್ವಲಗೊಳಿಸುವ ಜವಾಬ್ದಾರಿಯು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲಿದೆ; ಅದನ್ನು ಇಲಾಖಾ ಸಚಿವೆ ಲಕ್ಷ್ಮೀ ಹೆಬ್ಭಾಳಕರ್‌ ಅವರು ಅತ್ಯಂತ ಸಮರ್ಥವಾಗಿ ಯಶಸ್ವಿಗೊಳಿಸಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎನ್. ಎಚ್. ಕೋನರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಜವಾಹರ ಬಾಲ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಕ್ಕಳ ದಿನಾಚರಣೆ-2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇದೊಂದು ಬಹಳ ಪ್ರಮುಖವಾದಂತಹ ಖಾತೆ. ಅತಿ ಹೆಚ್ಚು ಬಜೆಟ್‌ ಕೊಟ್ಟಿರುವ ಖಾತೆಯೂ ಇದಾಗಿದೆ. ನಾವೆಲ್ಲರೂ ಈ ಸಚಿವರು ಹೇಳಿದಂತೆಯೇ ಕೇಳಬೇಕು; ಇದು ಅನಿವಾರ್ಯ ಕೂಡ. ಅತಿ ಹೆಚ್ಚು ದುಡ್ಡು ಕೊಡುವುದಕ್ಕೆ ಲಕ್ಷ್ಮೀಯೇ ಇವರಾಗಿದ್ದಾರೆ. ಸಚಿವರ ಹೆಸರಲ್ಲೇ ಲಕ್ಷ್ಮೀ ಇದೆ. ಸಚಿವರಾಗಿ ಸಹೋದರಿ ಲಕ್ಷ್ಮೀ ಹೆಬ್ಭಾಳಕರ್‌ ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.

ಸಿಎಂ, ಡಿಸಿಎಂ ಜೋಡೆತ್ತು:
ರಾಜ್ಯದ ಒಳಿತಿಗಾಗಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯವರು ಜೋಡೆತ್ತುಗಳಾಗಿ ದುಡಿಯುತ್ತಿದ್ದಾರೆ. ಮೊನ್ನೆ ನಡೆದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಳೂ ಜಯಗಳಿಸುವ ಮೂಲಕ ರಾಜ್ಯದ ಜನರಲ್ಲಿ ಮತ್ತಷ್ಟು ವಿಶ್ವಾಸ ಗಳಿಸಿದ್ದಾರೆ. ಬಡವರಿಗಾಗಿ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಮೂಲಕ ಬಡ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುತ್ತಿದ್ದಾರೆ. ಉಚಿತವಾಗಿ ಬಸ್‌, ಕರೆಂಟ್‌ ನೀಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳೆಂದರೆ ದೊಡ್ಡ ಆಸ್ತಿ; ಮಕ್ಕಳ ಮನಸ್ಸಿನಲ್ಲಿ ಸ್ವಲ್ಪವೂ ದ್ವೇಷ, ಅಸೂಯೆ, ಕಪಟತನ ಯಾವುದೂ ಇರುವುದಿಲ್ಲ. ಆ ಮುಗ್ಧತೆಯನ್ನು ನೋಡುವುದೇ ಒಂದು ಚೆಂದ. ಬೆಂಗಳೂರಿನವರು ಬೇರೆ ಜಗತ್ತೇ ನೋಡುವುದಿಲ್ಲ. ಮೊಬೈಲ್‌, ಟಿವಿ ಅಷ್ಟೇ. ನಅಪಾರ್ಟ್‌ ಮೆಂಟ್‌ ಗಳನ್ನು ಬಿಟ್ಟು ಕೆಳಗೆ ಇಳಿಯುವುದಿಲ್ಲ. ಆದರೆ, ಹೊರಗೆ ಬಂದು ಇಂತಹ ಮಕ್ಕಳ ಕಾರ್ಯಕ್ರಮಗಳನ್ನು ನೋಡುವುದೇ ಒಂದು ರೀತಿ ಸಂಭ್ರಮ. ಇಂತಹ ಕಾರ್ಯಕ್ರಮವನ್ನು ಆಯೋಜಿಸಿರುವ ಸಚಿವರಿಗೆ ಧನ್ಯವಾದ ಹೇಳಬೇಕಾಗಿದೆ ಎಂದು ಕೋನರೆಡ್ಡಿ ಹೇಳಿದರು.

ಮಕ್ಕಳು ದೇಶದ ಆಸ್ತಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಮಿತಿ ಸದಸ್ಯರು ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಮಕ್ಕಳು ದೇಶದ ಆಸ್ತಿ. ನಾಳಿನ ಭಾರತವನ್ನು ಇಂದಿನ ಮಕ್ಕಳು ರೂಪಿಸಬೇಕಿದೆ. ನಾವು ಇಂದು ಯಾವ ರೀತಿ ಅವರನ್ನು ಮುಂದೆ ತರುತ್ತೇವೋ ಅದೇ ರೀತಿ ನಾಳಿನ ಭಾರತದ ಭವಿಷ್ಯ ರೂಪುಗೊಳ್ಳುತ್ತದೆ. ಅಂಗನವಾಡಿ ಕೇಂದ್ರಗಳು ಸರ್ಕಾರಿ ಮಾಂಟೆಸ್ಸರಿಗಳಾಗಿ ಪರಿವರ್ತನೆ ಆಗುತ್ತಿರುವುದು ಒಳ್ಳೆಯ ಬೆಳೆವಣಿಗೆ. ಕೋಲಾರ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳು ಸೇರಿದಂತೆ ಅತ್ಯುತ್ತಮ ಕಾರ್ಯಕ್ರಮಗಳನ್ನು ಮಾಡಿರುವುದಾಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಮಿತಿ ಸದಸ್ಯೆ ಹಾಗೂ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಿ ಲಕ್ಷ್ಮೀ ಹೆಬ್ಬಾಳಕರ್‌ ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಮಕ್ಕಳ ಮತ್ತು ಮಹಿಳೆಯರಿಗಾಗಿ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಚಿವರಲ್ಲಿ ಅವರು ಮನವಿ ಮಾಡಿದರು.

ಮಕ್ಕಳಲ್ಲಿ ಸಾಮರಸ್ಯ ಬೆಳೆಸೋಣ:
ಶಾಸಕ ರಿಜ್ವಾನ್ ಹರ್ಷದ್‌ ಮಾತನಾಡಿ, ಮಕ್ಕಳು ಎಂದರೆ ದೇಶದ ಭವಿಷ್ಯ. ಮಕ್ಕಳಿಗೆ ಯಾವ ಮೌಲ್ಯಗಳನ್ನು ಅಳವಡಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಇಂದಿನ ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳ ಬಗ್ಗೆ ಗಮನಹರಿಸಿದರೆ ನಾವು ಮಕ್ಕಳಿಗೆ ಒಳ್ಳೆಯ ಸಮಾಜವನ್ನು ಬಿಟ್ಟುಕೊಡುತ್ತಿದ್ದೇವೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಮಕ್ಕಳಿಗೆ ಪ್ರೀತಿ, ವಿಶ್ವಾಸ ತುಂಬಬೇಕು. ಇದು ಸಾಧ್ಯವಾಗದಿದ್ದರೆ ಮುಂದೆ ದೊಡ್ಡ ಅನಾಹುತವೇ ಆಗಬಹುದು ಎಂದು ಅವರು ಎಚ್ಚರಿಸಿದರು.

ಇತ್ತೀಚೆಗೆ ಪ್ರತಿನಿತ್ಯ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೆ, ಬರೀ ಜಾತಿ, ಧರ್ಮ, ಕೋಮು ಈ ವಿಷಯಗಳೇ ಹೆಚ್ಚು ಚರ್ಚಿತವಾಗುತ್ತಿವೆ. ಇವು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಬಲ್ಲವು ಎನ್ನುವುದನ್ನು ಪ್ರತಿಯೊಬ್ಬ ಪೋಷಕರು ಮನಗಾಣಬೇಕು. ಭಾರತದ ಹೆಸರು ಇಡೀ ಪ್ರಪಂಚದಲ್ಲೇ ಬಲಿಷ್ಠವಾಗಿ ಮಾಡಬೇಕಾದರೆ ಮಕ್ಕಳಲ್ಲಿ ಸಾಮರಸ್ಯದ ಭಾವನೆಗಳನ್ನು ಹುದುಗಿಸಬೇಕಿದೆ ಎಂದು ಹೇಳಿದರು.

ಪರಿಣಾಮಕಾರಿ ಕಾರ್ಯಕ್ರಮಗಳು :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ ಅಧ್ಯಕ್ಷ ಪದ್ಮಾವತಿ, ಬಾಲಭವನದ ಅಧ್ಯಕ್ಷ ಬಿ. ಆರ್. ನಾಯ್ಡು, ಧಾರವಾಡ ಭಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಮಕ್ಕಳ ವಿಕಸನಕ್ಕೆ ಬೇಕಾದ ಕಾರ್ಯಕ್ರಮಗಳನ್ನು ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ. ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಶಾಸಕ ಉದಯ್‌ ಬಿ ಗರುಡಚಾರ್‌, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗನಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಸಿದ್ದೇಶ್ವರ, ಜಂಟಿ ನಿರ್ದೇಶಕ ಬಿ.ಎಚ್. ನಿಶ್ಚಲ್ ಮತ್ತಿತರರು ಉಪಸ್ಥಿತರಿದ್ದರು.