ನೆಲಮಂಗಲ: ವರ್ಷದ ಹಿಂದೆ ನಿಧನರಾದ ಮೇರು ನಟಿ ಎಂ.ಲೀಲಾವತಿ ಅವರ ಹೆಸರಿನಲ್ಲಿ ₹ 1 ಕೋಟಿ ವೆಚ್ಚದಲ್ಲಿ ಕಲಾಮಾತೆಯ ಮಂದಿರ ‘ಲೀಲಾವತಿ ದೇಗುಲ’ವನ್ನು ಅವರ ಪುತ್ರ ವಿನೋದ್‌ರಾಜ್ ನಿರ್ಮಿಸಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.

ಲೀಲಾವತಿ ದೇಗುಲ ಡಿ.5ರಂದು ಲೋಕಾರ್ಪಣೆಗೊಳ್ಳಲಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಭಿಮಾನಿಗಳು, ಚಿತ್ರನಟರು ಕಲಾವಿದರು ಭಾಗವಹಿಸಲಿದ್ದಾರೆ.
ಲೀಲಾವತಿಯವರು ಅಗಲಿದ ದಿನವಾದ ಡಿ.8ರಂದು ವರ್ಷದ ಕಾರ್ಯವು ನಡೆಯಲಿದೆ.

ನೆಲಮಂಗಲ ತಾಲ್ಲೂಕಿನ ಸೋಲದೇವನಹಳ್ಳಿಯಲ್ಲಿ ಒಂದು ಎಕರೆ ಪ್ರದೇಶದಲ್ಲಿ ಲೀಲಾವತಿಯವರ ಅಪರೂಪದ ಚಿತ್ರ ಸಂಪುಟಗಳ ಕಲಾತ್ಮಕವಾದ ಭವ್ಯ ಮಂದಿರ (ಸಮಾಧಿ) ನಿರ್ಮಾಣಗೊಂಡಿದೆ. ‘ಒಳ ಆವರಣದ ಸುತ್ತಲೂ ಅಪರೂಪದ 62 ಚಿತ್ರಪಟಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿ ಅಮ್ಮನ ಆಸೆಯಂತೆ ಚಿಕ್ಕ ರಂಗಮಂದಿರ ನಿರ್ಮಿಸಲಾಗಿದೆ. ಸಣ್ಣ ಸಣ್ಣ ರಂಗ ಪ್ರದರ್ಶನಗಳು, ಸಭೆ ಸಮಾರಂಭಕ್ಕೆ ಅವಕಾಶ
ಕಲ್ಪಿಸಲಾಗಿದೆ ಎಂದು ಲೀಲಾವತಿ ಅವರ ಪುತ್ರ, ನಟ ವಿನೋದ್‌ರಾಜ್ ಮಾಹಿತಿ ನೀಡಿದರು.

ನೆಲಮಂಗಲ ಪಟ್ಟಣದಿಂದ ಸುಮಾರು 8 ಕಿ.ಮೀ. ದೂರದಲ್ಲಿ ಪ್ರಕೃತಿ ಮಡಿಲಲ್ಲಿ ಮಂದಿರವಿರುವುದರಿಂದ ನಿತ್ಯ ಮಂದಿರ ವೀಕ್ಷಣೆಗೆ ಬರುವವರಿಗಾಗಿ ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಮಂದಿರ ತೆರೆದಿರುತ್ತದೆ. ಸುಸಜ್ಜಿತ ಪಾಕಶಾಲೆ, ಭೋಜನಾಲಯವಿದೆ. ಅಭಿಮಾನದಿಂದ ಅಮ್ಮನ ಮಡಿಲಲ್ಲಿ ಒಂದೆರಡು ದಿನ ಕಳೆಯಬೇಕೆನ್ನುವವರಿಗೆ ವಸತಿ ವ್ಯವಸ್ಥೆಗಾಗಿ ಸುಸಜ್ಜಿತ ಎರಡು ಕೊಠಡಿಗಳನ್ನು ಹಾಗೂ ಉದ್ಯಾನವನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

ತಮಿಳುನಾಡಿನ ಪುದುಪ್ಯಾಕಂ ಗ್ರಾಮದಲ್ಲಿಯೂ ₹ 30 ಲಕ್ಷ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುತ್ತಿದ್ದೇವೆ. ಅಮ್ಮನ ಋಣ ಸಂದಾಯಕ್ಕೆ ನನಗೆ ಸಿಕ್ಕ ಅವಕಾಶವಿದು ಎನ್ನುತ್ತಾರೆ ವಿನೋದ್.

ತುಳು, ತೆಲುಗು, ತಮಿಳು, ಮಲೆಯಾಳಿ, ಕನ್ನಡ ಭಾಷಾ ಚತುರೆ ಲೀಲಾವತಿ ಅವರು ದಕ್ಷಿಣ ಭಾರತದ ಶ್ರೇಷ್ಠ ನಟರಾದ ಡಾ.ರಾಜ್‌ಕುಮಾರ್, ಎನ್‌ಟಿಆ‌ರ್, ಎಂಜಿಆ‌ರ್, ಶಿವಾಜಿಗಣೇಶನ್ ಅವರೊಂದಿಗೆ ಅಭಿನಯಿಸಿದ್ದರು. ಯಕ್ಷಗಾನದಲ್ಲಿ ಪಾರಂಗತರು, ಸಂಗೀತ, ಸಾಕು ಪ್ರಾಣಿ ಪ್ರಿಯರು. ಅದಮ್ಯ ಜೀವನ ಪ್ರೀತಿಯ ಲೀಲಮ್ಮರಿಗೆ ಕೃಷಿ ಎಂದರೆ ಬಲು ಪ್ರೀತಿ. ವಿಶೇಷ ಭತ್ತದ ತಳಿಗಳ ಪರಿಷ್ಕರಣೆಯನ್ನು ನಡೆಸಿದ ಅಮ್ಮನಿಗೆ ಪಶು ಸಂಗೋಪನೆ, ಗ್ರಾಮೀಣ ಪ್ರಕೃತಿ ಮಡಿಲ ಬದುಕು ಆಪ್ಯಾಯಮಾನವಾದದ್ದು. ಅವರ ಆಕಾಂಕ್ಷೆಯಂತೆ ಸೋಲದೇವನಹಳ್ಳಿಯಲ್ಲಿ ಜನ ಹಾಗೂ ಜಾನುವಾರು ಆಸ್ಪತ್ರೆಗಳನ್ನು ನಿರ್ಮಿಸಿ ಸಾರ್ವಜನಿಕ ಸೇವೆಗೆ ಸಮರ್ಪಿಸಲಾಗಿದೆ. ಬಡ ಕಲಾವಿದರಿಗೆ
ಮಾಸಾಶನದ ರೀತಿಯಲ್ಲಿ ಪ್ರತಿ ತಿಂಗಳು ಸಹಾಯಧನ ಕಳಿಸಲಾಗುತ್ತಿದೆ ಎಂದು ವಿನೋದ್ ರಾಜ್ ವಿವರ ನೀಡಿದರು.