ಢಾಕಾ : ಬಾಂಗ್ಲಾದೇಶವು ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) ನ ಕನಿಷ್ಠ 54 ಸದಸ್ಯರನ್ನು ಭಾರತಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದೆ ಮತ್ತು ಬೆನಾಪೋಲ್ ಗಡಿ ಚೆಕ್ಪಾಯಿಂಟ್ನಿಂದ ಅವರನ್ನು ಹಿಂದಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ವಲಸೆ ಪೊಲೀಸರು “ಅನುಮಾನಾಸ್ಪದ ಪ್ರಯಾಣ” ಎಂದು ಉಲ್ಲೇಖಿಸಿ, ಮಾನ್ಯವಾದ ದಾಖಲೆಗಳನ್ನು ಹೊಂದಿದ್ದರೂ ಅವರನ್ನು ಭಾರತಕ್ಕೆ ಪ್ರವೇಶಿದಂತೆ ನಿರ್ಬಂಧಿಸಿ ಹಿಂದಕ್ಕೆ ಕಳುಹಿಸಿದ್ದಾರೆ ಎಂದು ವರದಿ ತಿಳಿಸಿದೆ.
ಗಡಿ ದಾಟಲು ಬಂದ ಒಟ್ಟು ಹಿಂದೂಗಳ ಸಂಖ್ಯೆ 70 ಕ್ಕಿಂತ ಹೆಚ್ಚಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಬಾಂಗ್ಲಾದೇಶದ ಅಧಿಕಾರಿಗಳು ಇಸ್ಕಾನ್ ಸದಸ್ಯರಾಗಿರುವ ಇತರ ನಾಲ್ಕು ಸನ್ಯಾಸಿಗಳನ್ನು ಈ ಹಿಂದೆ ಬಂಧಿಸಿದ್ದರು. “ನಾವು ಭಾರತದಲ್ಲಿ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲು ಹೋಗುತ್ತಿದ್ದೆವು, ಆದರೆ ಸರ್ಕಾರದ ಅನುಮತಿ ಇಲ್ಲದ ಕಾರಣ ವಲಸೆ ಅಧಿಕಾರಿಗಳು ನಮ್ಮನ್ನು ತಡೆದರು ಎಂದು ಇಸ್ಕಾನ್ ಸದಸ್ಯರಲ್ಲಿ ಒಬ್ಬರಾದ ಸೌರಭ್ ತಪಂದರ್ ಚೆಲಿ ಹೇಳಿರುವುದನ್ನು ಸ್ಥಳೀಯ ಸುದ್ದಿವಾಹಿನಿಗಳು ಉಲ್ಲೇಖಿಸಿವೆ.
ಬೆನಪೋಲ್ ಇಮಿಗ್ರೇಷನ್ ಚೆಕ್ಪೋಸ್ಟ್ ಅಧಿಕಾರಿ (OC) ಇಮ್ತಿಯಾಜ್ ಅಹ್ಸಾನುಲ್ ಕ್ವಾಡರ್ ಭುಯಾನ್ ಅವರು ಡೈಲಿ ಸ್ಟಾರ್ನೊಂದಿಗೆ ಮಾತನಾಡಿ “ಉನ್ನತ ಅಧಿಕಾರಿಗಳ” ಆದೇಶದ ನಂತರ ಇಸ್ಕಾನ್ ಸದಸ್ಯರನ್ನು ಹಿಂದಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. “ನಾವು ವಿಶೇಷ ಪೊಲೀಸ್ ವಿಭಾಗವನ್ನು ಸಂಪರ್ಕಿಸಿದ್ದೇವೆ ಮತ್ತು ಅವರಿಗೆ ಅನುಮತಿ ನೀಡದಂತೆ ಉನ್ನತ ಅಧಿಕಾರಿಗಳಿಂದ ಸೂಚನೆಗಳು ಬಂದಿವೆ” ಎಂದು ಭುಯಾನ್ ಹೇಳಿದ್ದಾರೆ.
ಮಾನ್ಯವಾದ ಪಾಸ್ಪೋರ್ಟ್ಗಳು ಮತ್ತು ವೀಸಾಗಳನ್ನು ಹೊಂದಿದ್ದರೂ ಸರ್ಕಾರಿ ಅಧಿಕಾರಿಗಳು ಬೆನಾಪೋಲ್-ಪೆಟ್ರಾಪೋಲ್ ಕ್ರಾಸಿಂಗ್ ಮೂಲಕ ಹೀಗುವ ತಮ್ಮನ್ನು ದಿಢೀರ್ ಆಗಿ ತಡೆದಿದ್ದಕ್ಕೆ ಸ್ಪಷ್ಟ ಕಾರಣಗಳನ್ನು ನೀಡಿಲ್ಲ ಎಂದು ಇಸ್ಕಾನ್ ಸದಸ್ಯರು ಹೇಳಿದ್ದಾರೆ.ಭಾರತದ ಕಡೆಯಲ್ಲಿರುವ ಪೆಟ್ರಾಪೋಲ್ನಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ಅನ್ನು ಜುಲೈ 2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಜಂಟಿಯಾಗಿ ಉದ್ಘಾಟಿಸಿದರು.
ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾದ ನಂತರ ಬಾಂಗ್ಲಾದೇಶದ ಅಲ್ಪಸಂಖ್ಯಾತರು, ವಿಶೇಷವಾಗಿ ಹಿಂದೂಗಳು ಇಸ್ಲಾಮಿಸ್ಟ್ ಗುಂಪುಗಳಿಂದ ತೀವ್ರ ದಾಳಿಗಳನ್ನು ಎದುರಿಸುತ್ತಿದ್ದಾರೆ. ಈ ವಾರದ ಆರಂಭದಲ್ಲಿ, ಬಾಂಗ್ಲಾದೇಶ ಸಮ್ಮಿಲಿತ್ ಸನಾತನ ಜಾಗರಣ ಜೋತೆಯ ವಕ್ತಾರ ಮತ್ತು ಬಾಂಗ್ಲಾದೇಶದ ಇಸ್ಕಾನ್ ಸದಸ್ಯ ಚಿನ್ಮಯ ಕೃಷ್ಣ ದಾಸ್ ಅವರನ್ನು ಬಂಧಿಸಿ ಜಾಮೀನು ನಿರಾಕರಿಸಿದ ಪ್ರಕರಣವನ್ನು ಭಾರತವು ಹೈಲೈಟ್ ಮಾಡಿತು.
ಭಾರತದಲ್ಲಿ, ವಿಶೇಷವಾಗಿ ಬಂಗಾಳಿ ಮಾತನಾಡುವ ಕೋಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಇತರ ನಗರಗಳಲ್ಲಿ ಪ್ರತಿಭಟನಾ ರ್ಯಾಲಿಗಳನ್ನು ನಡೆಸಲಾಯಿತು. ಈ ವಾರದ ಆರಂಭದಲ್ಲಿ ಅಗರ್ತಲಾದಲ್ಲಿ ಬಾಂಗ್ಲಾದೇಶದ ಸಹಾಯಕ ಹೈಕಮಿಷನ್ ಹೊರಗೆ ಪ್ರತಿಭಟನೆಗಳು ನಡೆದವು.
ಜಮಾತ್-ಎ-ಇಸ್ಲಾಮಿಯೊಂದಿಗೆ ಸಂಪರ್ಕ ಹೊಂದಿರುವ ಹಿಂಸಾತ್ಮಕ ಇಸ್ಲಾಮಿಸ್ಟ್ ಗುಂಪು ಹೆಫಾಜಾತ್-ಎ-ಇಸ್ಲಾಂ ನೇತೃತ್ವದಲ್ಲಿ ಇಸ್ಕಾನ್ ಅನ್ನು ನಿಷೇಧಿಸುವಂತೆ ಒತ್ತಾಯಿಸಿ ಬೀದಿ ಪ್ರತಿಭಟನೆಗೆ ಕರೆ ನೀಡಲಾಗಿದೆ.