ಕಡಬ: ವಿನೂತನ ಕಾರ್ಯಕ್ರಮಗಳ ಮೂಲಕ ಜನಮನ್ನಣೆ ಗಳಿಸಿರುವ ಶಿಕ್ಷಕರೊಬ್ಬರು ಹೃದಯಘಾತಕ್ಕೆ ಬಲಿಯಾಗಿದ್ದಾರೆ.
ಅಲಂಕಾರು ಗ್ರಾಮದ ಬಾಕಿಲ ನಿವಾಸಿ, ಗೋಳಿತಟ್ಟು ಶಾಂತಿನಗರ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಪ್ರದೀಪ್ ಬಾಕಿಲ(42) ಹೃದಯಾಘಾತದಿಂದ ಡಿ.5 ರ ಗುರುವಾರ ನಿಧನರಾಗಿದ್ದಾರೆ.
ಮೃತರು ಇತ್ತೀಚೆಗಷ್ಟೇ ಶ್ರೀರಾಮಕುಂಜೇಶ್ವರ ವಿದ್ಯಾಲಯದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮೃತರು
ಶಿಕ್ಷಕಿ ಹೇಮಲತಾ ಬಾಕಿಲ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.ಪ್ರದೀಪ ಅವರು ಜೆಸಿಐ ಪೂರ್ವ ವಲಯ ಉಪಾಧ್ಯಕ್ಷರಾಗಿ ಸತತ 25 ಗಂಟೆ ತರಬೇತಿ ನೀಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಭಾಜನರಾಗಿದ್ದರು. ಡಿಸೆಂಬರ್ 4ರಂದು ಶಾಂತಿನಗರ ಶಾಲೆಯಲ್ಲಿ ಸ್ಕೂಲ್ ಡೇ ಕಾರ್ಯಕ್ರಮವಿತ್ತು. ಕಾರ್ಯಕ್ರಮ ಮುಗಿದ ನಂತರ ಮನೆಗೆ ಬಂದು ಅಂಗಳದಲ್ಲಿ ಫೋನಿನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಡಿ.5 ರಂದು ಮನೆ ಅಂಗಳದಲ್ಲಿ ಮೃತ ದೇಹ ಪತ್ತೆಯಾಗಿದ್ದು ಹೃದಯಘಾತದಿಂದ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ.
ಅವರು ಕುಟುಂಬಸ್ಥರು, ಅಪಾರ ಶಿಷ್ಯರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಪ್ರದೀಪ್ ಬಾಕಿಲ ಅವರು ಜೇಸಿಐ ಆಲಂಕಾರು ಇದರ ಪೂರ್ವಾಧ್ಯಕ್ಷರಾಗಿದ್ದರು. ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ತರಬೇತುದಾರರಾಗಿರುವ ಇವರು ತಾವು ಸೇವೆ ಸಲ್ಲಿಸುತ್ತಿರುವ ಶಾಂತಿನಗರ ಸರಕಾರಿ ಶಾಲೆಯಲ್ಲಿ ಹಲವು ವಿನೂತನ ಕಾರ್ಯಕ್ರಮಗಳ ಮೂಲಕ ಶಿಕ್ಷಣ ನೀಡುತ್ತಿದ್ದರು.ಉತ್ತಮ ನಿರೂಪಕರಾಗಿ ಗುರುತಿಸಿಕೊಂಡಿದ್ದರು.
ರಾಜ್ಯದಾದ್ಯಂತ ಸುಮಾರು 200ಕ್ಕಿಂತಲೂ ಹೆಚ್ಚು ತರಬೇತಿಗಳನ್ನೂ ನೀಡಿದ ಹೆಗ್ಗಳಿಕೆ ಇವರದು. ಇವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.