ಹಾಸನ : ನಮ್ಮ ಸರ್ಕಾರದ ಐದು ಗ್ಯಾರಂಟಿಗಳನ್ನು ಪಡೆದಿರುವುದಕ್ಕೆ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ಪರಮ ಜನದ್ರೋಹಿಗಳು. ಯಾವುದೇ ಕಾರಣಕ್ಕೂ ನಾವು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಹಾಸನದಲ್ಲಿ ನಡೆದ ಬೃಹತ್ ಜನಕಲ್ಯಾಣೋತ್ಸವ ಸಮಾವೇಶವದಲ್ಲಿ ಮಾತನಾಡಿದರು.
ಡಾ.ರಾಜ್ ಅವರು ಅಭಿಮಾನಿ ದೇವರು ಎಂದು ಹೇಳುತ್ತಿದ್ದರು. ನಮಗೆ ಮತದಾರರ ಬಂಧುಗಳೇ ದೇವರು. ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಆಶೀರ್ವದಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು.
ಹಾಸನದ ಮಹಾನ್ ನಾಯಕರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣದಲ್ಲಿ , ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗನನ್ನು ಈಗ್ಗಾಂವಿಯಲ್ಲಿ ಜನ ಸೋಲಿಸಿ ನಮಗೆ ಆಶೀರ್ವದಿಸಿದ್ದಾರೆ ಎಂದರು.
ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಆಗುವಷ್ಟು ಬಹುಮತ ಈ ರಾಜ್ಯದ ಜನರೆ ಯಾವತ್ತೂ ಕೊಟ್ಟಿಲ್ಲ. ಒಮ್ಮೆ ಕಾಂಗ್ರೆಸ್ ಬೆಂಬಲದಲ್ಲಿ ಮತ್ತೊಮ್ಮೆ ಬಿಜೆಪಿ ಬೆಂಬಲದಲ್ಲಿ ಮುಖ್ಯಮಂತ್ರಿ ಆದರು. ಬಳಿಕ ಎರಡೂ ಪಕ್ಷಗಳಿಗೆ ವಂಚಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಸುಭದ್ರ ಸರ್ಕಾರ ಕೊಟ್ಟಿದೆ. ಮಾತ್ರವಲ್ಲ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. 2013 ರಲ್ಲಿ ಕೊಟ್ಟ ಮಾತಿನಂತೆ ಹಲವಾರು ಭಾಗ್ಯಗಳನ್ನು ಜಾರಿ ಮಾಡಿದೆವು. ಈ ಬಾರಿ ಐದಕ್ಕೆ ಐದೂ ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನೂ ಈಡೇರಿಸುತ್ತಿದ್ದೇವೆ ಎಂದು ಒಂದೊಂದಾಗಿ ವಿವರಿಸಿದರು.
ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಪ್ರಧಾನಿ ಮೋದಿ ಅವರ ಸರ್ಕಾರ ನಾವು ದುಡ್ಡು ಕೊಡ್ತೀವಿ ಅಂದರೂ ಅಕ್ಕಿ ಕೊಡಲಿಲ್ಲ. ಇಂಥಾ ಜನದ್ರೋಹಿ ಸರ್ಕಾರ ಬಿಜೆಪಿಯದ್ದು ಎಂದರು.
ನಾವು ಐದು ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ. ಈ ಐದು ಗ್ಯಾರಂಟಿಗಳನ್ನು ಪಡೆಯುತ್ತಿರುವ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ದೊಡ್ಡ ಜನದ್ರೋಹಿಗಳು ಎಂದರು.
ಕೇಂದ್ರದಲ್ಲಿ ಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ಮೇಕೆದಾಟು ವಿಚಾರದಲ್ಲಿ ಮೌನ ಆಗಿರುವುದು ಏಕೆ? ಬೆಂಗಳೂತಿನ ಜನತೆಗೆ ನೀರು ಬೇಕಾಗಿದೆ. ಕೊಡಿಸಲಿ ಎಂದು ಸವಾಲು ಹಾಕಿದರು.
ಮಾಜಿ ಪ್ರಧಾನಿ ದೇವೇಗೌಡರು ನನಗಿಂತ 15 ವರ್ಷ ಹಿರಿಯರು. ಅವರು ಅಷ್ಟೆ ಘನತೆಯಿಂದ ಮಾತಾಡಬೇಕಿತ್ತು. ಯಾವತ್ತೂ ಗರ್ವ ತೋರಿಸದ ನನಗೆ, “ಸಿದ್ದರಾಮಯ್ಯ ಅವರ ಗರ್ವಭಂಗ ಮಾಡ್ತೀನಿ” ಎಂದರು. ಇದನ್ನು ನೀವು ಒಪ್ಪಿಕೊಳ್ಳುತ್ತೀರಾ, ಸಹಿಸುತ್ತೀರಾ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜನತೆ ಯಾವುದೇ ಕಾರಣಕ್ಕೂ ಸಹಿಸಲ್ಲ ಎಂದು ಕೂಗಿದರು.
ಹಾಸನದ ಹೆಣ್ಣು ಮಕ್ಕಳು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ರಾಜ್ಯದ ರೈತರ ಪಾಲಿನ ಸಾಲದಲ್ಲಿ ಶೇ58 ರಷ್ಟನ್ನು ಕಡಿತಗೊಳಿಸಿದೆ. ಇದರಿಂದ ಹಾಸನದ ರೈತರು ಮತ್ತು ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಮಗ ಎಂದುಕೊಂಡಿರುವ ಕುಮಾರಸ್ವಾಮಿಯವರು ಏಕೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ. ನಬಾರ್ಡ್ ನಿಂದ ಆಗಿರುವ ಅನ್ಯಾಯವನ್ನು ಕುಮಾರಸ್ವಾಮಿ ಅವರು ಏಕೆ ಸರಿಪಡಿಸುತ್ತಿಲ್ಲ? ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ 11 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯಕ್ಕೆ ಕೊಡಿಸಲು ಬಿಜೆಪಿ-ಜೆಡಿಎಸ್ ಏಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ, ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಕುಮಾರಸ್ವಾಮಿ ಅವರಿಗೆ ಮತ್ತು ಬಿಜೆಪಿ ಸಂಸದರಿಗೆ ಮುಖ್ಯಮಂತ್ರಿಗಳು ಸವಾಲು ಹಾಕಿದರು.
ದೇವೇಗೌಡರು ರಾಜಕೀಯವಾಗಿ ಒಕ್ಕಲಿಗ ನಾಯಕರನ್ನು ನಿರಂತರವಾಗಿ ಮುಗಿಸುತ್ತಿದ್ದಾರೆ. ಬಚ್ಚೇಗೌಡರು, ವೈ.ಕೆ.ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ದೇವೇಗೌಡರು ರಾಜಕೀಯವಾಗಿ ಮುಗಿಸಿದರು. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರು ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಒಕ್ಕಲಿಗ ನಾಯಕ ಕೃಷ್ಣಪ್ಪ ಅವರ ಮಾತು ನಿಜವಾಗಿದೆ ಎಂದರು.
ನಾನು ಮತ್ತು ಜಾಲಪ್ಪ ಒಟ್ಟಾಗಿ ರಾಮಕೃಷ್ಣಹೆಗಡೆಯವರ ಬದಲಿಗೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೆವು. ಆಮೇಲೆ ನನ್ನನ್ನೇ ಪಕ್ಷದಿಂದ ಉಚ್ಚಾಟಿಸಿದರು ಎಂದು ಹಂತ ಹಂತವಾಗಿ ವಿವರಿಸಿದರು.
ಕಾಂಗ್ರೆಸ್ ಸರ್ಕಾರ ಮಾತ್ರ ಸುಭದ್ರ ಸರ್ಕಾರ ಕೊಡಲು ಸಾಧ್ಯ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿಗಳಿಸಲಿದೆ. ಇದು ಶತಸಿದ್ದ ಎಂದು ಭರವಸೆ ವ್ಯಕ್ತಪಡಿಸಿದರು.
ಹಾಸನದಲ್ಲಿ ಈ ಮಟ್ಟದ ದೊಡ್ಡ ಜನ ಕಲ್ಯಾಣ ಕಾಂಗ್ರೆಸ್ ಸಮಾವೇಶ ಹಿಂದೆಂದೂ ಆಗಿರಲಿಲ್ಲ. ಇದರಲ್ಲಿ ಸ್ವಾಭಿಮಾನಿ ಒಕ್ಕೂಟಗಳು, ಕಾಂಗ್ರೆಸ್ಸೇತರ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಶ್ರಮಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಉಪಚುನಾವಣೆಯಲ್ಲಿ ಸೋತ ಬಿಜೆಪಿಯವರು ರಾಜಕೀಯ ನಾಟಕ ಪ್ರಾರಂಭಿಸಿದ್ದಾರೆ- ಮುಖ್ಯಮಂತ್ರಿ ಸಿದ್ದರಾಮಯ್ಯ:
ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಸೋಲುಂಡಿರುವ ಬಿಜೆಪಿಯವರು ‘ವಕ್ಫ್ ಹೋರಾಟ’ ಎಂಬ ರಾಜಕೀಯ ನಾಟಕ ಪ್ರಾರಂಭಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಬಿಜೆಪಿಯವರ ವಕ್ಫ್ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ರಾಜಕೀಯಕ್ಕಾಗಿ ಹೋರಾಟ ಕೈಗೊಂಡಿದ್ದಾರೆ. 2014ರಲ್ಲಿ ಬಿಜೆಪಿಯವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿಗಳನ್ನು ತೆರವುಗೊಳಿಸಿ ಕೊಡುವ ಭರವಸೆಯನ್ನು ನೀಡಿ, ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ,ಅತಿಕ್ರಮಣ ಮಾಡಿಕೊಂಡಿರುವವರಿಗೆ ನೋಟೀಸುಗಳನ್ನೂ ನೀಡಿದ್ದರು. ಬಿಜೆಪಿಯವರು ರಾಜಕೀಯ ಇಬ್ಬಂದಿತನವನ್ನು ಇಬ್ಬದಿನೀತಿಯನ್ನು ಪಾಲಿಸುತ್ತಿದ್ದಾರೆ ಎಂದರು.
ಇಂದು ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆಯನ್ನು ಜನವರಿ 25 ಕ್ಕೆ ನಿಗದಿಗೊಂಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಕಾನೂನು ತಜ್ಞರೊಂದಿಗೆ ಮಾಹಿತಿ ಪಡೆದು ಚರ್ಚಿಸುತ್ತೇನೆ ಎಂದರು.
ಸಿದ್ದರಾಮಯ್ಯ ಅವರ ಬೆನ್ನಿಗೆ ಬಂಡೆಯಂತೆ ಇಂದೂ ಇದ್ದೇನೆ, ನಾಳೆಯೂ ಇರುತ್ತೇನೆ, ಸಾಯುವವರೆಗೂ ಇರುತ್ತೇನೆ: ಡಿಸಿಎಂ ಡಿ.ಕೆ. ಶಿವಕುಮಾರ್
ಹಾಸನ: “ಈ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಬಂಡೆಯಂತೆ ನಿಲ್ಲುವುದಾಗಿ ಮೈಸೂರಿನಲ್ಲಿ ಹೇಳಿದ್ದೇನೆ. ಈಗಲೂ ಇದ್ದೇನೆ, ನಾಳೆಯೂ ಇರುತ್ತೇನೆ. ಸಾಯುವವರೆಗೂ ಇರುತ್ತೇನೆ. ಇದು ಈ ಕನಕಪುರದ ಬಂಡೆಯ ಇತಿಹಾಸ. ನಾನು ಎಲ್ಲಿ ಕೆಲಸ ಮಾಡುತ್ತೇನೋ ಅಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವುದು ನನ್ನ ಕರ್ತವ್ಯ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಹಾಸನದಲ್ಲಿ ನಡೆದ ಜನಕಲ್ಯಾಣ ಸಮಾವೇಶದಲ್ಲಿ ಶಿವಕುಮಾರ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷದ ಜನಪರ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು:
“ಮೊದಲು ಹಾಸನಾಂಬೆ ತಾಯಿಯ ಪಾದಗಳಿಗೆ ಸಾಷ್ಟಾಂಗ ನಮನಗಳು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗಗಳು ಅದಿಕಾರಕ್ಕೆ ಬಂದಂತೆ. 25 ವರ್ಷಗಳ ನಂತರ ಹಾಸನದ ಮಹಾಜನತೆ ಕಾಂಗ್ರೆಸಿಗನನ್ನು ಆರಿಸಿ ಸಂಸತ್ತಿಗೆ ಕಳಿಸಿದ್ದೀರಿ. ಈ ಭಾಗದ ಧ್ವನಿಯಾಗಲು, ನೊಂದ ತಾಯಂದಿರಿಗೆ ರಕ್ಷಣೆ ನೀಡಲು ಶ್ರೇಯಸ್ ಪಟೇಲ್ ಅವರನ್ನು ಆಯ್ಕೆ ಮಾಡಿರುವುದಕ್ಕೆ ನಿಮಗೆ ನಮನಗಳು.
ಸರ್ಕಾರದ ಶಕ್ತಿ ನೂರೆಂಟು, ಐದು ಗ್ಯಾರಂಟಿಗಳು ಪರ್ಮನೆಂಟು, 2028ರಲ್ಲಿ ನಾವೇ ಅಧಿಕಾರಕ್ಕೆ ಬರುವುದು ಹಂಡ್ರೆಡ್ ಪೆರ್ಸೆಂಟ್. ಇದನ್ನು ಬದಲಾವಣೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ಸುಳ್ಳಿನ ಸರಮಾಲೆಗಳಿಗೆ ಸಂಡೂರು, ಶಿಗ್ಗಾವಿ, ಚನ್ನಪಟ್ಟಣದಲ್ಲಿ ಜನ ಉತ್ತರ ನೀಡಿದ್ದಾರೆ.
ಕಮಲ ಕೆರೆಯಲ್ಲಿದ್ದರೆ ಚೆಂದ, ತೆಲೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದ ಕಾರಣ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಜನರಿಗೆ ಆರ್ಥಿಕ ಶಕ್ತಿ ತುಂಬಲಾಗಿದೆ.
ರಾಮನಗರದಲ್ಲಿ ನಾಲ್ಕಕ್ಕೆ ನಾಲ್ಕು, ಮಂಡ್ಯದಲ್ಲಿ ಆರು, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರಿನಲ್ಲಿ ನಾವು ಹೆಚ್ಚು ಕ್ಷೇತ್ರ ಗೆದ್ದಿದ್ದು, ಮುಂದೆ ಹಾಸನದಲ್ಲೂ ಹೆಚ್ಚು ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೀವಿ ಎಂಬ ಆತ್ಮವಿಶ್ವಾಸವಿದೆ. ಇದಕ್ಕೆ ನೀವು ಸಹಕಾರ ನೀಡಬೇಕು.
ಹಾಸನದ ಇತಿಹಾಸ ನೋಡಿದರೆ ನೋವಾಗುತ್ತದೆ. ಅನೇಕ ರಾಜಕಾರಣಿಗಳು, ಕುಟುಂಬಗಳ ಕಣ್ಣಲ್ಲಿ ನೀರು ತರಿಸಿದ್ದಾರೆ. ಹಾಸನಾಂಬೆ ತಾಯಿ ಆ ಕಣ್ಣೀರು ಒರೆಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ತಾಯಂದಿರ ಸ್ವಾಭಿಮಾನ ಕಾಪಾಡಲು ನಾವು ಈ ಸಮಾವೇಶ ಹಮ್ಮಿಕೊಂಡಿದ್ದೇವೆ. ಇದು ಹಾಸನದ ದೊಡ್ಡ ಇತಿಹಾಸ.
ಗೌಡರ ತವರಲ್ಲಿ ಈ ಸಮಾವೇಶ ಎಂದು ಮಾಧ್ಯಮಗಳು ಬರೆದಿವೆ. ನಿಜ, ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಮಾನ್ಯ ಶ್ರೀ ದೇವೇಗೌಡರು ದೇಶದ ಪ್ರಧಾನಮಂತ್ರಿಯಾದರು. ಬಿಜೆಪಿಯವರ ಬೆಂಬಲದೊಂದಿಗೆ ಕುಮಾರಸ್ವಾಮಿ 20 ತಿಂಗಳು ಸಿಎಂ ಆದರು. ಮತ್ತೆ ಕಾಂಗ್ರೆಸ್ ಬೆಂಬಲದೊಂದಿಗೆ 14 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಈ ಉಪಚುನಾವಣೆಯಲ್ಲಿ ನಾವು ಜನರ ಮುಂದೆ ನಾವು ಕೆಲವು ಪ್ರಶ್ನೆಗಳನ್ನು ಇಟ್ಟೆವು.
ಕಾಂಗ್ರೆಸ್ ಸರ್ಕಾರಗಳ ಅವಧಿಯಲ್ಲಿ ಉಳುವವನಿಗೆ ಭೂಮಿ, 20 ಅಂಶಗಳ ಕಾರ್ಯಕ್ರಮ, ಅಂಗನವಾಡಿ, ಪಿಂಚಣಿ ಯೋಜನೆ, ತಂತ್ರಜ್ಞಾನ ಕ್ರಾಂತಿ, ಅನ್ನಭಾಗ್ಯ, ಆಹಾರ ಭದ್ರತಾ ಕಾಯ್ದೆ, ಶೈಕ್ಷಣಿಕ ಹಕ್ಕು, ಉದ್ಯೋಗ ಖಾತ್ರಿ, ಕ್ಷೀರ ಭಾಗ್ಯ, ಕೃಷಿ ಭಾಗ್ಯ, ಸ್ತ್ರೀಶಕ್ತಿ ಸಂಘ, ಬಿಸಿಯೂಟ, ಐಟಿ ಬಿಟಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಯಿತು. ಈಗ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ.
ಚುನಾವಣೆ ಸಮಯದಲ್ಲಿ ಚನ್ನಪಟ್ಟಣಕ್ಕೆ ಬಂದು ಕಣ್ಣೀರು ಹಾಕುವ ಕುಮಾರಸ್ವಾಮಿ ಅವರೇ ನಿಮ್ಮ ಸಾಕ್ಷಿ ಗುಡ್ಡೆ ಏನು? ಹಾಸನದಲ್ಲಿ ದೇವೇಗೌಡರ ಕುಟುಂಬದ ಸಾಕ್ಷಿ ಗುಡ್ಡೆ ಏನು? ನಾನು ನಿಮ್ಮ ಕುಟುಂಬದ ಮಾಜಿ ಸಂಸದರ ಸಾಕ್ಷಿ ಗುಡ್ಡೆ ಬಗ್ಗೆ ಮಾತನಾಡುವುದಿಲ್ಲ. ಅದರ ಬಗ್ಗೆ ಮಾತನಾಡಲು ನನಗೆ ಅಸಹ್ಯವಾಗುತ್ತದೆ.
ನಾವು ಬದುಕಿನ ಮೇಲೆ ರಾಜಕೀಯ ಮಾಡುತ್ತೇವೆ. ಭಾವನೆ, ಧರ್ಮಗಳ ಮೇಲೆ ರಾಜಕೀಯ ಮಾಡುವುದಿಲ್ಲ. ನಮ್ಮ ಅಧಿಕಾರ ನಶ್ವರ. ಆದರೆ ಕಾಂಗ್ರೆಸ್ ಪಕ್ಷದ ಸಾಧನೆ ಅಜರಾಮರ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಈಶ್ವರ. ಇದು ಜನರ ಕಲ್ಯಾಣ ಹಾಗೂ ಗ್ಯಾರಂಟಿ ಗೆಲುವಿನ ಸಮಾವೇಶ.
ನಿಮ್ಮ ಕುತಂತ್ರಗಳು ಯಶಸ್ವಿಯಾಗಲಿಲ್ಲ ಎಂದು ಬಿಜೆಪಿ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಕುತಂತ್ರಕ್ಕೆ ಜನರು ಈಗಾಗಲೇ ಉತ್ತರ ಕೊಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಸಂಡೂರು, ಕಿತ್ತೂರು ಕರ್ನಾಟಕದ ಶಿಗ್ಗಾಂವಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಪುತ್ರನನ್ನು ಜನ ಸೋಲಿಸಿದ್ದಾರೆ. ಹಳೇ ಮೈಸೂರು ಭಾಗದ ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಮಂತ್ರಿಯ ಮೊಮ್ಮಗ, ಮಾಜಿ ಮುಖ್ಯಮಂತ್ರಿಯ ಮಗನನ್ನು ಜನ ಒಪ್ಪಿಲ್ಲ. ನಿಮ್ಮನ್ನು ಜನ ಮತ್ತೆ ಒಪ್ಪಲು ಸಾಧ್ಯವಿಲ್ಲ.
ಕುಮಾರಸ್ವಾಮಿ, ದೇವೇಗೌಡರು ಉಪಚುನಾವಣೆ ಸಮಯದಲ್ಲಿ ಈ ಸರ್ಕಾರವನ್ನು ಆರು ತಿಂಗಳಲ್ಲಿ ಕಿತ್ತೊಗೆಯುತ್ತೇವೆ ಎಂದು ಹೇಳಿದರು. ದೇವೇಗೌಡರೇ ಕಿತ್ತುಹಾಕಲು ನಮ್ಮ ಸರ್ಕಾರ ಹಾಸನದಲ್ಲಿ ಬೆಳೆಯುವ ಆಲೂಗಡ್ಡೆ ಗಿಡವಲ್ಲ. 138 ಶಾಸಕರ ಜನಬೆಂಬಲವಿರುವ ಸರ್ಕಾರ ಇದು. ಇದನ್ನು ಕಿತ್ತುಹಾಕಲು ನಿಮ್ಮ ಹಣೆಯಲ್ಲಿ ಬರೆದಿಲ್ಲ. 2028ಕ್ಕೆ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ.
ಇಲ್ಲಿರುವ ಜನ ರೈತರ ಮಕ್ಕಳು. ಬಿಜೆಪಿ ಅವಧಿಯಲ್ಲಿ ನಮ್ಮ ಹೆಮ್ಮೆಯ ನಂದಿನಿಯನ್ನು ಅಮುಲ್
ಜತೆ ವಿಲೀನ ಮಾಡಲು ಮುಂದಾಗಿದ್ದರು. ಈಗ ಅದೇ ನಂದಿನಿ ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದಕ್ಕೆ ನಂದಿನಿ ತುಪ್ಪ ಪೂರೈಕೆಯಾಗುತ್ತಿದೆ. ಇದು ರಾಜ್ಯದ ಹಾಲು ಉತ್ಪಾದಕ ರೈತರಿಗೆ ಕೊಟ್ಟಿರುವ ಶಕ್ತಿ.ನಾವು ಕೇವಲ ರಾಜಕಾರಣ ಮಾಡಲು ಮಾತ್ರ ಬಂದಿಲ್ಲ. ನಿಮ್ಮ ಬದುಕಿನಲ್ಲಿ ಪಾಲುದಾರರಾಗಲು ಬಂದಿದ್ದೇವೆ. ನಮ್ಮ ಪಕ್ಷದಲ್ಲಿದೆ ಒಗ್ಗಟ್ಟು, ಬಿಜೆಪಿಯಲ್ಲಿದೆ ಬಿಕ್ಕಟ್ಟು, ನಾವು ವಚನಪಾಲಕರು, ನೀವು ವಚನಭ್ರಷ್ಟರು. ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದರೆ ಮಾತ್ರ ದೇಶವನ್ನು ರಕ್ಷಣೆ ಮಾಡಲು ಸಾಧ್ಯ. ಕಳೆದ ಉಪ ಚುನಾವಣೆಯಲ್ಲಿ ಜನ ಇಂಡಿಯಾ ಒಕ್ಕೂಟಕ್ಕೆ 243 ಕ್ಷೇತ್ರಗಳನ್ನು ನೀಡಿ ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ಸೂಚನೆ ನೀಡಿದ್ದಾರೆ.
ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ. ಪ್ರತಿಯೊಬ್ಬರ ಜನರ ಬದುಕಿನಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ಪರಿಣಾಮ ಬೀರಿವೆ. ನಮ್ಮ ಮಾದರಿಯನ್ನು ಬಿಜೆಪಿಯು ಬೇರೆ ಬೇರೆ ರಾಜ್ಯಗಳಲ್ಲಿ ನಕಲು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಯಾವುದೇ ಕಾರ್ಯಕ್ರಮ ಕೊಟ್ಟರೂ ಅದನ್ನು ನಾವು ಉಳಿಸಿಕೊಂಡು ಬರುತ್ತಿದ್ದೇವೆ. ಇಂದಿರಾ ಗಾಂಧಿ ಅವರ ಕಾಲದಿಂದ ಮನಮೋಹನ್ ಸಿಂಗ್ ಅವರ ಕಾಲದವರೆಗೂ ನಾವು ಶಾಸನಬದ್ಧ ಕಾರ್ಯಕ್ರಮ ನೀಡುತ್ತಾ ಬಂದಿದೆ.
ಅಂಬೇಡ್ಕರ್ ಅವರು ನಮ್ಮ ದೊಡ್ಡ ಶಕ್ತಿ. ದೇಶದಲ್ಲಿ ಅತಿ ಹೆಚ್ಚು ಪ್ರತಿಮೆ ಇರುವುದು ಅಂಬೇಡ್ಕರ್ ಅವರದ್ದು ಮಾತ್ರ. ಕಾಂಗ್ರೆಸ್ ಸರ್ಕಾರದಲ್ಲಿ ಅವರು ಕೊಟ್ಟ ಸಂವಿಧಾನವನ್ನು ನಾವೆಲ್ಲರೂ ಸೇರಿ ಉಳಿಸಬೇಕು. ಈ ಜಿಲ್ಲೆಯ ಜನರ ಸ್ವಾಭಿಮಾನ ರಕ್ಷಣೆ ಮಾಡಿ, ಜನಕಲ್ಯಾಣ ಯಾತ್ರೆ ಆರಂಭಿಸಿದ್ದೇವೆ.
ನನ್ನ ಗುರುಗಳು ನನಗೆ ಒಂದು ಮಾತು ಹೇಳಿಕೊಟ್ಟಿದ್ದಾರೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ನೆಲೆಸಲಿ ಎಂದು ಹೇಳಿದ್ದಾರೆ. ನಾವು ಬಡವರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಅದೇ ರೀತಿ ಸಂಪುಟ ಸಚಿವರೆಲ್ಲರೂ ಸೇರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಈ ರಾಜ್ಯದ ಸೇವೆ ಮಾಡಿ ನಿಮ್ಮ ಋಣ ತೀರಿಸುತ್ತೇವೆ.
ನೀವು ಮುಂದಿನ ಚುನಾವಣೆಯಲ್ಲಿ ಈ ಜಿಲ್ಲೆಯ ಜನ ಕೇವಲ ಸಂಸದರು ಹಾಗೂ ಶಿವಲಿಂಗೇಗೌಡರನ್ನು ಮಾತ್ರ ಗೆಲ್ಲಿಸುವುದಲ್ಲ. ಇಲ್ಲಿರುವ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಬೇಕು.”