ಮೂಡಲಗಿ: ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾಭಿಯಾನ್ (ಪಿಎಂ ಕುಸುಮ್) ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ ಇದುವರೆಗೆ ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಒಟ್ಟು 84.89 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ಖಾತೆ ರಾಜ್ಯ ಸಚಿವ ಶ್ರೀಪಾದ ಯೆಸ್ಸೋ ನಾಯಕ್ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ನವದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ಥಾನ್ ಮಹಾ ಅಭಿಯಾನದ ಅನುಷ್ಠಾನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ರೈತರಿಗೆ ಇಂಧನ ಮತ್ತು ನೀರಿನ ಭದ್ರತೆಯನ್ನು ಒದಗಿಸುವುದು, ಅವರ ಆದಾಯವನ್ನು ಹೆಚ್ಚಿಸುವುದು, ಕೃಷಿ ವಲಯವನ್ನು ಅಭಿವೃದ್ದಿ ಮಾಡುವುದು ಮತ್ತು ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆ ಪ್ರಾರಂಭಿಸಲಾಗಿದೆ. ಘಟಕ ಬಿ ಯೋಜನೆಯಡಿ 41,360 ವೈಯಕ್ತಿಕ ಪಂಪಗಳು ಹಾಗೂ ಘಟಕ ಸಿ ಯೋಜನೆಯಡಿ ಗ್ರಿಡ್-ಸಂಪರ್ಕಿತ 7,66,588 ಪಂಪಗಳನ್ನು ಸೌರಶಕ್ತಿಕರಣಕ್ಕಾಗಿ ಮಂಜೂರು ಮಾಡಲಾಗಿದೆ ಎಂದರು.

  • ಕರ್ನಾಟಕ ರಾಜ್ಯದಲ್ಲಿ ಒಟ್ಟು 205.74 ಜಿ.ಡಬ್ಲ್ಯೂ ನವೀಕರಿಸಬಹುದಾದ ಶಕ್ತಿಯ ಸಾಮರ್ಥ್ಯವನ್ನು ಅಂದಾಜಿಸಲಾಗಿದೆ. ಇದರಲ್ಲಿ ಪವನ ಶಕ್ತಿ169.25 ಜಿ.ಡಬ್ಲ್ಯೂ, ಸೌರ ಶಕ್ತಿ 24.7 ಜಿ.ಡಬ್ಲ್ಯೂ, , ಜಲವಿದ್ಯುತ್ 4.41 ಜಿ.ಡಬ್ಲ್ಯೂ, ದೊಡ್ಡದು, 3.73 ಜಿ.ಡಬ್ಲ್ಯೂ ಸಣ್ಣ ಜಲವಿದ್ಯುತ್, ಜೈವಿಕ-ವಿದ್ಯುತ್ 3.55 ಜಿ.ಡಬ್ಲ್ಯೂ ಒಳಗೊಂಡಿದೆ ಎಂದು ಸಚಿವರು ಉತ್ತರಿಸಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.