ಮಂಗಳೂರು: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ 30 ನೇ ವರ್ಷದ ‘ಆಳ್ವಾಸ್‌ ವಿರಾಸತ್- ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ’ ಡಿ.10 ರಿಂದ 15 ರ ವರೆಗೆ ಜರುಗಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದರು.

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸಾಂಸ್ಕೃತಿಕ ವೈಭವದ ಜೊತೆಗೆ ವಿವಿಧ ಮೇಳಗಳು ನಡೆಯಲಿವೆ. ಕಲಿಕೆ ಹಾಗೂ ಜೀವನೋಲ್ಲಾಸದ ಸೆಲೆಯಾಗಿ ಈ ಉತ್ಸವ ಮೂಡಿಬರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

10ರಂದು ಸಂಜೆ 5.30ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು. ಉಡುಪಿಯ ಜಿ.ಶಂಕ‌ರ್ ಫ್ಯಾಮಿಲಿ ಟ್ರಸ್ಟ್ ಅಧ್ಯಕ್ಷ ಜಿ. ಶಂಕ‌ರ್ ಅಧ್ಯಕ್ಷತೆ ವಹಿಸುವರು. ಸಂಜೆ 6.35ರಿಂದ ರಾತ್ರಿ 8.30ರ ವರೆಗೆ 100ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳಿಂದ 3ಸಾವಿರಕ್ಕೂ ಹೆಚ್ಚು ಕಲಾವಿದರನ್ನು ಒಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.

ರಾತ್ರಿ 8.30ರಿಂದ 9.30ರ ವರೆಗೆ ವೇದಘೋಷ, ಭಜನೆ, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ಆಳ್ವಾಸ್‌ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ನಡೆಯಲಿದೆ ಎಂದರು.

11ರಂದು ಸಂಜೆ 5.45ಕ್ಕೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ₹1 ಲಕ್ಷ ನಗದು ಬಹುಮಾನ ಒಳಗೊಂಡ ‘ಆಳ್ವಾಸ್‌ ವಿರಾಸತ್ 2024’ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಪ್ರದಾನ ಮಾಡುವರು. ನಂತರ ಪಂ.ವೆಂಕಟೇಶ್ ಕುಮಾರ್ ಅವರು ಹಿಂದೂಸ್ಥಾನಿ ಗಾಯನ ನಡೆಸಿಕೊಡವರು. ನಂತರ ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ, 12ರಂದು ಗುಜರಾತ್ ಒಸ್ಮಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ, 13ರಂದು ನೀಲಾದ್ರಿ ಕುಮಾರ್ ಮತ್ತು ತಂಡದಿಂದ ‘ಸೌಂಡ್‌ ಆಫ್ ಇಂಡಿಯಾ’, ಕೋಲ್ಕತ್ತಾದ ಆಶೀಮ್ ಬಂಧು ಭಟ್ಟಾಚಾರ್ಜಿ ಸಂಯೋಜನೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ಸಂಗಮದ ತ್ರಿಪರ್ಣ ಪ್ರಸ್ತುತಗೊಳ್ಳಲಿದೆ. 14ರಂದು ಚೆನ್ನೈನ ಸ್ಟೇಕೇಟೋದ 25 ಕಲಾವಿದರಿಂದ ‘ಸಂಗೀತ ರಸದೌತಣ’ ಹಾಗೂ ರಾತ್ರಿ 9ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಆ ಗಮನ ನಡೆಯಲಿದೆ. ನಿತ್ಯವೂ ಸ್ಥಳೀಯ ಕಲಾವಿದರು, ಆಳ್ವಾಸ್‌ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಇರಲಿವೆ ಎಂದು ಮಾಹಿತಿ ನೀಡಿದರು.

15ರಂದು ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. ಆದರೆ, ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತದೆ ಎಂದು ಹೇಳಿದರು.

ಕೈಮಗ್ಗ ಸೀರೆಗಳ ಉತ್ಸವ: ಭಾರತದ 30 ಪ್ರದೇಶವಾರು ಹಾಗೂ ಜಿಐ ಟ್ಯಾಗ್ ಹೊಂದಿರುವ ಕೈಮಗ್ಗ ಸೀರೆಗಳ ಹಾಗೂ ಬಟ್ಟೆಗಳ ಉತ್ಸವ ವಿರಾಸತ್‌ನ ಮಹಾಮೇಳಗಳಲ್ಲಿ ಈ ವರ್ಷದ ಪ್ರಮುಖ ಆಕರ್ಷಣೆಯಾಗಿದೆ. ಭಾರತೀಯ ಪರಂಪರೆಯನ್ನು ಬಿಂಬಿಸುವ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ನೇಕಾರರಿಂದ ಗ್ರಾಹಕಕರಿಗೆ ನೇರ ಮರಾಟ ನಡೆಯಲಿದೆ. ಭಾರತದಾದ್ಯಂತ ತಯಾರಾದ ವೈವಿಧ್ಯಮಯ ಕರಕುಶಲ ವಸ್ತುಗಳು, ಆಯಾರಾಜ್ಯಗಳ ಕರಕುಶಲಕರ್ಮಿಗಳಿಂದ ನೇರ ಮಾರಾಟ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕೃಷಿ ಮೇಳ: ಕೃಷಿ ಕ್ಷೇತ್ರದ ಕುರಿತು ಯುವಜನತೆಯಲ್ಲಿ ಭರವಸೆಯ ಹೊಂಗಿರಣವನ್ನು ಮೂಡಿಸುವ ನಿಟ್ಟಿನಲ್ಲಿ ರೈತರು ಹಾಗೂ ಕೃಷಿ ಸಂಸ್ಕೃತಿ ಪ್ರೋತ್ಸಾಹಿಸಲು ‘ಕೃಷಿ ಮೇಳ’ವನ್ನು ಆಯೋಜಿಸಲಾಗಿದೆ. ಕೃಷಿಯಲ್ಲಿ ಬೀಜದಿಂದ ಮಾರುಕಟ್ಟೆ ವರೆಗಿನ ಎಲ್ಲ ಘಟ್ಟಗಳ ಸಮಗ್ರ ಚಿತ್ರಣವನ್ನು ಈ ಮೇಳ ನೀಡಲಿದೆ. ‘ರೈತರ ಸಂತೆ’ ಈ ಬಾರಿಯ ಆಕರ್ಷಣೆಯಾಗಿದೆ. ಕೃಷಿ ಮೇಳದಲ್ಲಿ ಒಟ್ಟಾರೆ 600 ಮಳಿಗೆ ಇರಲಿವೆ ಎಂದರು.

ಆಳ್ವಾಸ್ ಶಿಕ್ಷಣ ಸಂಸ್ಥೆಯ 150 ಎಕರೆ ಪ್ರದೇಶವನ್ನು ವಿಶಿಷ್ಟವಾಗಿ ಅಲಂಕರಿಸಲಾಗಿದೆ. ಸಂಸ್ಥೆಯಲ್ಲಿ 22 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಅವರ ಪಾಲಕರು ಹಾಗೂ ಸಾರ್ವಜನಿಕರು ಸೇರಿ ನಿತ್ಯ 1 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಬಯಲು ರಂಗ ಮಂದರಿದಲ್ಲಿ 40 ಸಾವಿರ ಆಸನ ವ್ಯವಸ್ಥೆ ಇರಲಿದೆ.

ಸೌಟ್ಸ್-ಗೈಡ್ಸ್ ಉತ್ಸವ

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಸೌಟ್ಸ್
ಮತ್ತು ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿ
ಶಿಬಿರ ಆಯೋಜಿಸಿದೆ. ರಾಜ್ಯದ 1600 ವಿದ್ಯಾರ್ಥಿಗಳು ಐದು ದಿನಗಳ ಈ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆಯಿಂದ ಸಂಜೆ ವರೆಗೆ ಶಿಬಿರ ನಡೆಯಲಿದ್ದು, ಸಂಜೆಯ ನಂತರ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ಈ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಡಾ.ಮೋಹನ್‌ ಆಳ್ವ ತಿಳಿಸಿದರು.

ಭಾಗವಹಿಸುವ ಶಿಬಿರಾರ್ಥಿಗಳು ಡಿ.9ರಂದು ಸಂಜೆ 5ರ ಗಂಟೆಯ ಒಳಗಾಗಿ ಸೌಟ್ಸ್-ಗೈಡ್ಸ್ ಕನ್ನಡ ಭವನ, ಸ್ವರಾಜ್ಯ ಮೈದಾನ, ಮೂಡುಬಿದಿರೆ ಇಲ್ಲಿ ನೋಂದಾವಣೆ ಮಾಡಿಕೊಳ್ಳಬಹುದಾಗಿದೆ ಎಂದರು.

ಆಳ್ವಾಸ್‌ ಪತ್ರಿಕೋದ್ಯಮ ಕಾಲೇಜಿನ ಮುಖ್ಯಸ್ಥ ಪ್ರಸಾದ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿದ್ದರು.