ನವದೆಹಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕರೊಬ್ಬರ ಪುತ್ರಿಯೊಂದಿಗೆ ತಮ್ಮ ಮಗನ ವಿವಾಹವನ್ನು ಏರ್ಪಡಿಸಿದ ಕಾರಣಕ್ಕೆ ಹಿರಿಯ ನಾಯಕರೊಬ್ಬರನ್ನು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರು ಪಕ್ಷ಼ದಿಂದ ಉಚ್ಚಾಟಿಸಿದ್ದಾರೆ ಎಂದು ವರದಿಯಾಗಿದೆ.

ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಹಿರಿಯ ನಾಯಕ ಸುರೇಂದ್ರ ಸಾಗರ ಅವರನ್ನು ವಿಲಕ್ಷಣ ಕ್ರಮದಲ್ಲಿ ಉಚ್ಚಾಟಿಸಿದ್ದಾರೆ.

 

ಸುರೇಂದ್ರ ಸಾಗರ ಅವರ ಪುತ್ರ ಅಂಕುರ ಅವರು ಎಸ್ಪಿ ಶಾಸಕ ತ್ರಿಭುವನ ದತ್ ಅವರ ಪುತ್ರಿ ಕುಸುಮಾ ದತ್ ಅವರನ್ನು ವಿವಾಹವಾದರು. ಬಿಎಸ್‌ಪಿಯ ಬರೇಲಿ ವಿಭಾಗದ ಪ್ರಮುಖರಾಗಿರುವ ಸುರೇಂದ್ರ ಸಾಗರ ಐದು ಬಾರಿ ರಾಂಪುರದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕ್ಯಾಬಿನೆಟ್ ಸಚಿವರಿಗೆ ಸಮಾನವಾದ ಸ್ಥಾನವನ್ನು ಅಲಂಕರಿಸಿದ್ದಾರೆ. ಬಿಎಸ್ಪಿಯ ಮಾಜಿ ಶಾಸಕ ತ್ರಿಭುವನ ದತ್ ಅವರು ಈಗ ಅಂಬೇಡ್ಕರ್ ನಗರದ ಆಲಾಪುರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ದತ್ ಅವರ ನಿವಾಸಕ್ಕೆ ಭೇಟಿ ನೀಡಿದ ನಂತರ ಮದುವೆ ಗಮನ ಸೆಳೆದಿತ್ತು.

ಆದಾಗ್ಯೂ, ಸಾಗರ ಅವರ ಉಚ್ಚಾಟನೆಗೆ “ಪಕ್ಷ ವಿರೋಧಿ ಚಟುವಟಿಕೆಗಳು ಮತ್ತು ಅಶಿಸ್ತು ಕಾರಣ” ಎಂದು ಬಿಎಸ್‌ಪಿ ಪಕ್ಷವು ಹೇಳಿದೆ. ಪಕ್ಷದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಸುರೇಂದ್ರ ಸಾಗರ ಅವರು, ನಾನು ಯಾವುದೇ ಅಶಿಸ್ತು ತೋರಿಲ್ಲ. ನನ್ನ ಮಗ ಅಂಕುರನನ್ನು ಎಸ್‌ಪಿ ಶಾಸಕ ತ್ರಿಭುವನ ದತ್ ಅವರ ಮಗಳ ಜೊತೆ ಮದುವೆ ಮಾಡಿ ಕೊಟ್ಟಿದ್ದೇನೆ ಅಷ್ಟೆ ಎಂದು ತಿಳಿಸಿದರು. ನವೆಂಬರ್ 27 ರಂದು ಮದುವೆ ಮತ್ತು ಡಿಸೆಂಬರ್ 3 ರಂದು ಆರತಕ್ಷತೆ ಇತ್ತು. ಇತರ ಪಕ್ಷದ ನಾಯಕರೊಂದಿಗೆ ಮಾಯಾವತಿಯವರನ್ನೂ ಆಹ್ವಾನಿಸಿದ್ದೇನೆ ಎಂದು ಸಾಗರ ಹೇಳಿದ್ದಾರೆ.

ಡಿಸೆಂಬರ್ 2 ರಂದು ಪಕ್ಷದ ಸಂಯೋಜಕರು ಪಕ್ಷದ ಮುಖ್ಯಸ್ಥರನ್ನು ಭೇಟಿಯಾಗಿ ತಮ್ಮ ಮಗನ ಮದುವೆಯ ಬಗ್ಗೆ ಚರ್ಚಿಸಿದ್ದಾರೆ ಎಂದು ಅವರು ಬಹಿರಂಗಪಡಿಸಿದರು. ಸಭೆಯಲ್ಲಿ ಮಾಯಾವತಿ ಸಲಹೆಗಾರರು ಬಿಎಸ್‌ಪಿ ನಾಯಕರು ಎಸ್‌ಪಿ ನಾಯಕರೊಬ್ಬರ ಕಾರ್ಯಕ್ರಮಕ್ಕೆ ಹಾಜರಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು ಎಂದು ಸಾಗರ್ ಹೇಳಿದ್ದಾರೆ. ಸುರೇಂದ್ರ ಸಾಗರ ಬಿಎಸ್‌ಪಿಯಲ್ಲಿ ಮಹತ್ವದ ವ್ಯಕ್ತಿಯಾಗಿದ್ದಾರೆ, ವರ್ಷಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರು 1995 ರಿಂದ ಬಿಎಸ್ಪಿಯಲ್ಲಿ ಇದ್ದಾರೆ.
ನವೆಂಬರ್‌ನಲ್ಲಿ ಮಾಯಾವತಿ ಎಸ್‌ಪಿ ನಾಯಕರೊಬ್ಬರೊಂದಿಗಿನ ವಿವಾಹದಲ್ಲಿ ಭಾಗವಹಿಸಿದ್ದಕ್ಕಾಗಿ ಮೂವರು ನಾಯಕರನ್ನು ವಜಾಗೊಳಿಸಿದ್ದರು.