ಉಡುಪಿ/ಮಂಗಳೂರು: ನಾಡಿನಾದ್ಯಂತ ಇರುವ ನಾಗಾಲಯಗಳು, ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಶುಕ್ರವಾರ ಪಂಚಮೀ ಉತ್ಸವ, ತೀರ್ಥಸ್ನಾನ ನಡೆದಿದ್ದು, ಶನಿವಾರ ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ ನಡೆಯಲಿದೆ.
ನಾಗತನು, ಕಲಶಾಭಿಷೇಕ, ಆಶ್ಲೇಷಾ ಬಲಿ, ಪಾರಾಯಣ, ಮಹಾಪೂಜೆ, ಅನ್ನಸಂತರ್ಪಣೆಗಳು ನಡೆಯಲಿವೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಶುದ್ಧ ಷಷ್ಠಿಯ ದಿನ ಡಿ. 7ರ ಪ್ರಾತಃಕಾಲ ಕುಕ್ಕೆ ಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೋಹಣರಾಗಲಿದ್ದಾರೆ. ಚಿಕ್ಕ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾಗಲಿದ್ದಾರೆ.

ಅನಂತರ ಸುವರ್ಣ ವೃಷ್ಠಿಯಾಗಿ, ಚಿಕ್ಕ ರಥೋತ್ಸವ ನೆರವೇರಲಿದೆ. ಆ ಬಳಿಕ ಚಂಪಾಷಷ್ಠಿ ಮಹಾರಥೋತ್ಸವ ಜರಗಿದ ಅನಂತರ ಷಷ್ಠಿ ಕಟ್ಟೆಯಲ್ಲಿ ಮತ್ತು ಒಳಾಂಗಣದ ಕಟ್ಟೆಯಲ್ಲಿ ದೇವರಿಗೆ ಪೂಜೆ ನಡೆಯಲಿದೆ. ಬಳಿಕ ಮುಖ್ಯ ಅರ್ಚಕರು ಭಕ್ತರಿಗೆ ಮೂಲಮೃತ್ತಿಕಾ ಪ್ರಸಾದ ವಿತರಿಸಲಿದ್ದಾರೆ.
ಬೆತ್ತ ಶ್ರೀ ದೇಗುಲಕ್ಕೆ
ಈ ಹಿಂದೆ ಬೆತ್ತವನ್ನು ಭಕ್ತರು ತುಂಡು ಮಾಡಿ ತಮ್ಮ ಮನೆಗಳಿಗೆ ಪೈಪೋಟಿ ನಡೆಸಿ ಕೊಂಡೊಯ್ಯುತ್ತಿದ್ದರು. ಇದೀಗ ಬ್ರಹ್ಮ ರಥ ಎಳೆಯಲು ಉಪಯೋಗಿಸಿದ ಎಲ್ಲ ಬೆತ್ತವನ್ನು ಶ್ರೀ ದೇಗುಲವೇ ಉಪಯೋಗಿಸಲಿದೆ. ಬ್ರಹ್ಮರಥ ಎಳೆದ ಬೆತ್ತವು ಅಪೂರ್ವವಾದ ಸ್ಥಾನವನ್ನು ಪಡೆದಿದ್ದು ದೇಗುಲದಲ್ಲಿ ನಡೆಯುವ ಸೇವೆಗಳಿಗೆ ಕೊಡುವ ಮಹಾಪ್ರಸಾದದಲ್ಲಿ ಬೆತ್ತದ ತುಂಡನ್ನು ನೀಡಲಾಗುತ್ತಿದೆ.
ಪಂಚಮಿ ದಿನ: 255 ಭಕ್ತರಿಂದ ಎಡೆಸ್ನಾನ ಸೇವೆ
ಸ್ಕಂದ ಪಂಚಮಿಯ ದಿನವಾದ ಶುಕ್ರವಾರ ಕುಕ್ಕೆಯಲ್ಲಿ 255 ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು. ಗೋವು ಸೇವಿಸಿದ ಎಲೆಯ ಮೇಲೆ ಭಕ್ತರು ಉರುಳು ಸೇವೆ ನಡೆಸುವ ಮೂಲಕ ಭಕ್ತರು ಸ್ವಯಂಪ್ರೇರಿತರಾಗಿ ಎಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. 150 ಪುರುಷರು, 103 ಮಹಿಳೆಯರು, 3 ಮಕ್ಕಳು ಸೇವೆ ಸಲ್ಲಿಸಿದರು.

ದೇವರ ಮಧ್ಯಾಹ್ನದ ಮಹಾಪೂಜೆ ಬಳಿಕ ದೇಗುಲದ ಹೊರಾಂಗಣದ ಸುತ್ತಲೂ 432 ಬಾಳೆ ಎಲೆಗಳನ್ನು ಹಾಕಿ ಅದರ ಮೇಲೆ ದೇವರ ನೈವೇಧ್ಯಗಳನ್ನು ಬಡಿಸಲಾಯಿತು. ಬಳಿಕ ದೇಗುಲದ ಗೋವುಗಳು ಆ ಎಲೆಗಳಲ್ಲಿದ್ದ ಅನ್ನಪ್ರಸಾದವನ್ನು ತಿಂದವು. ದರ್ಪಣತೀರ್ಥ ನದಿಯಲ್ಲಿ ಸ್ನಾನ ಮಾಡಿ ನಿಂತಿದ್ದ ಎಲ್ಲ ವಯೋಮಾನದ ಭಕ್ತರು ಉರುಳು ಸೇವೆ ಕೈಗೊಂಡರು.

ಸ್ಕಂದ ಪಂಚಮಿ: ವಿಶೇಷ ಪಾಲಕಿ ಉತ್ಸವ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಪ್ರಯುಕ್ತ ಶುಕ್ರವಾರ ಶ್ರೀ ದೇವರ ವಿಶೇಷ ಪಾಲಿ ಉತ್ಸವ ನೆರವೇರಿತು.
ಸಹಸ್ರಾರು ಭಕ್ತರು ಶ್ರೀ ದೇವರ ಉತ್ಸವವನ್ನು ವೀಕ್ಷಿಸಿದರು. ರಾತ್ರಿ ಮಹಾಪೂಜೆಯ ಬಳಿಕ ಹೊರಾಂಗಣ ಉತ್ಸವ ಆರಂಭವಾಯಿತು. ವಿಶೇಷ ಹೂವಿನ ಅಲಂಕಾರದೊಂದಿಗೆ ರಾರಾಜಿಸುತ್ತಿದ್ದ ಪಾಲಕಿಯಲ್ಲಿ ಶ್ರೀ ದೇವರ ಉತ್ಸವ ನೆರವೇರಿತು. ಆ ಬಳಿಕ ಶ್ರೀ ದೇವರ ದೀಪಾರಾಧನೆಯುಕ್ತ ಬಂಡಿ ರಥೋತ್ಸವ ಹೊರಾಂಗಣದಲ್ಲಿ ನೆರವೇರಿತು. ಸಂಗೀತ, ಮಂಗಳವಾದ್ಯ, ಸ್ಯಾಕ್ಸೊಫೋನ್, ಬ್ಯಾಂಡ್‌ಗಳ ಸುಮಧುರ ಸುತ್ತುಗಳ ಉತ್ಸವದ ಅನಂತರ ಪಂಚಮಿ ರಥೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ದೇಗುಲದ ಆಡಳಿತಾಧಿಕಾರಿ ಜುಬಿನ್‌ ಮೊಹಾಪಾತ್ರಾ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜ್‌, ಸೇರಿದಂತೆ ದೇಗುಲದ ಸಿಬಂದಿ, ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.