ಚೇರ್ಕಾಡಿ ದೊಡ್ಡಮನೆಯವರ ಕುಟುಂಬದ ನಾಗಬನದ ನಾಗಬ್ರಹ್ಮದೇವರ ಆರಾಧನೆಯಾಗಿ ಪ್ರತಿ ವರುಷವು ಆರಾಧಿಸಿ ಕೊಂಡು ಬರುವ ಕಂಬುಲವು ಅಂದರೆ ಇಂದಿನ ದಿನದಲ್ಲಿ ಆರಾಧನೆಯನ್ನು ಜನಪದ ಕ್ರೀಡೆ ಎಂದು ಕರೆಯುವ ಕಂಬಳಕ್ಕೆ ಬಹು ಪ್ರಾಚೀನ ಇತಿಹಾಸ ಇದೆ.ಚೇರ್ಕಾಡಿ ದೊಡ್ಡಮನೆ ಜನ್ನದೇವಿಯ ಸಾಂಪ್ರದಾಯಿಕ ಕಂಬಳವು ಡಿ.9ರಂದು ನಡೆಯಲಿದೆ.

ಸುಮಾರು 600 ವರ್ಷ ಇತಿಹಾಸವಿರುವ ಈ ಕಂಬಳವು ಪಟ್ಟದ ಹೆಗ್ಡೆಯವರಾದ ಜಯರಾಮ ಹೆಗ್ಡೆ ಅವರ ನೇತೃತ್ವದಲ್ಲಿ ನಡೆಯಲಿದೆ. ಇದು ಅನಾದಿಕಾಲದ ಜೈನ ಮನೆತನದವರ ಕಂಬಳ. ಸುಮಾರು 10 ಎಕ್ರೆ ವಿಸ್ತೀರ್ಣದ ಕಂಬಳಗದ್ದೆ ಹಾಗೂ ಬಾಕಿಮಾರು ಗದ್ದೆಗಳನ್ನು ಹೊಂದಿದ್ದು, ಮನಸೂರೆಗೊಳ್ಳುವ ಪ್ರಕೃತಿ ಸೌಂದರ್ಯವಿದೆ.
ಊರಿನ ಗುರು ಹಿರಿಯರು ದೊಡ್ಡ ಮನೆಯವರೊಂದಿಗೆ ಕುಲ ಪುರೋಹಿತರಾದ ಕನ್ನಾರು ವೆಂಕಟೇಶ ಮಂಜರು ಪಟ್ಟದ ಹೆಗ್ಡೆಯವರ ತಾರಾನುಕೂಲವನ್ನು ನೋಡಿ ಕಂಬಳದ ದಿನವನ್ನು ನಿಶ್ಚಯಿಸುತ್ತಾರೆ. ತದನಂತರ ಕುಟುಂಬಸ್ಥರೆಲ್ಲರೂ (ದೊಡ್ಡಮನೆ) ಶುದ್ಧಾಚಾರವನ್ನು ಪಾಲಿಸಿಕೊಂಡು ಬರಬೇಕು. ಸೂತಕ ಮೈಲಿಗೆಯವರು ಕಂಬಳ ಗದ್ದೆಗೆ ಇಳಿಯಬಾರದು. ಕಂಬಳದ ದಿನದಂದು ಪಟ್ಟದ ಹೆಗ್ಡೆಯವರು ಜಲದುರ್ಗೆಯ ಪೂಜೆಯನ್ನು ಮುಗಿಸಿ ಬ್ಯಾಂಡು ವಾದ್ಯಗಳೊಂದಿಗೆ ಕಂಬಳ ಗದ್ದೆಗೆ ತೆರಳಿ ಪಟ್ಟದ ಕಟ್ಟೆಯಲ್ಲಿ ಕುಳಿತು ಉಪವಾಸ ವ್ರತದೊಂದಿಗೆ ತೆಂಗಿನಕಾಯಿಯನ್ನು ಗದ್ದೆಗೆ ಎಸೆಯಬೇಕು.
ನೂರಾರು ಕೋಣಗಳ ಓಟದ ಸ್ಪರ್ಧೆಯು ಹಗ್ಗ ಹಿರಿಯ, ಹಗ್ಗ ಕಿರಿಯ ಹಾಗೂ ಹಲಗೆ ವಿಭಾಗದಲ್ಲಿ ನಡೆಯಲಿದೆ. ಪ್ರಸ್ತುತ ಈ ಕಂಬಳವನ್ನು ಚೇರ್ಕಾಡಿ ದೊಡ್ಡಮನೆ ಕುಟುಂಬಸ್ಥರು ಗ್ರಾಮಸ್ಥರ ಸಹಕಾರದಲ್ಲಿ ನಡೆಸುತ್ತಿದ್ದಾರೆ.

ಸಂಪ್ರದಾಯ ಬದ್ದ ಧಾರ್ಮಿಕ ಕಂಬುಲ (ಕಂಬಳ)ದಲ್ಲಿ ದೈವ ದೇವತಾ ಆರಾಧನೆ ಪ್ರಧಾನವಾಗಿರುವುದರಿಂದ ಇಂದಿಗೂ ಸುಸೂತ್ರವಾಗಿ ನಡೆಸುವ ಜವಾಬ್ದಾರಿಯಿಂದ ಸಂಪ್ರದಾಯಬದ್ದವಾಗಿ ಕುಟುಂಬಿಕರು,ಊರ ಪರವೂರ ಗಣ್ಯರು ಹಿರಿಯರು, ಸಹಕಾರದಿಂದ ನಡೆಸಲಾಗುತ್ತದೆ.ಕಂಬುಲವು ಒಂದು ಊರಿನ ಶ್ರೀಮಂತವಾದ ಆರಾಧನ ಪದ್ಧತಿಯು ಹೌದು. ಆರಂತಡೆ ಗುತ್ತು ಬರ್ಕೆ, ಬೂಡು ಅರಮನೆ ಮುಂತಾದ ಪ್ರತಿಷ್ಠಿತ ಮನೆತನದ ಕುರುಹು ಹೌದು.

ಜನಪದ ಕ್ರೀಡೆ ಕಂಬಳ ಹೌದಾದರೂ ಭಕ್ತಿಯ ‌ಪ್ರತೀಕ ಕಂಬುಲ ಅಷ್ಟೇ ಕಾರಣಿಕವು ಹೌದು.

ನಾಗಬ್ರಹ್ಮನ ಕಂಬುಲವು ಇಂದು ಜನರ ಬಾಯಿಯಲ್ಲಿ ಕಂಬಳ ಆಗಿದೆ.
ಕಂಬಳ ಕೇವಲ ಕ್ರೀಡೆ ಹಾಗೂ ಸ್ಪರ್ದೆಗೆ ಮಾತ್ರ ‌ಸೀಮಿತಿ ಆಗದೆ. ಅದರಲ್ಲೂ ಹಲವು ವಿಧಗಳನ್ನು ಇಂದು ಕಾಣ ಬಹುದು. ದೇವರ ಕಂಬಳ, ‌ದೈವ ಕಂಬಳ, ಧೂಳುಕಂಬಳ, ಕ್ರೀಡಾ ಕಂಬಳ , ಸ್ಫರ್ಧೆಯ ಕ್ರೀಡಾ ಕಂಬಳ ಅನ್ನುವ ಹಲವು ವಿಧಾನದ ಕಂಬಳ ಇದೆ. ಇವುಗಳು ಕ್ರೀಡೆಗೆ ಸೀಮಿತ. ಇಲ್ಲಿ ಆರಾಧನೆಗೆ ಪ್ರಾಮುಖ್ಯತೆ ಇರುವುದಿಲ್ಲ.
ರಾಜ್ಯ ಸರಕಾರವು ಇಂತಹ ಕ್ರೀಡಾ ಕಂಬಳಗಳಿಗೆ ಅನುದಾನವನ್ನು ನೀಡುತ್ತಿದೆ. ಆದರೆ ಭಕ್ತಿ ಪ್ರಧಾನವಾಗಿ ಸಂಪ್ರದಾಯ ಬದ್ದವಾಗಿ ಆರಾಧಿಸಿಕೊಂಡು ಬರುವ ನಾಗಬ್ರಹ್ಮ ದೇವರ ಕಂಬುಲಗಳಿಗೆ ಯಾವುದೇ ಅನುದಾನವನ್ನು ನೀಡುತ್ತಿಲ್ಲ. ಗುತ್ತು ಬರ್ಕೆ ಬೂಡು ಆರಂತಡೆಗಳು ಹಿಂದಿನ ಕಾಲದಲ್ಲಿ ಶ್ರೀಮಂತವಾಗಿದ್ದವು. ಈ ಕಂಬುಲವನ್ನು ನಡೆಸಿಕೊಂಡು ಹೋಗಲು ಸಮರ್ಥವಾಗಿದ್ದವು. ಆದರೆ ಇಂದು ಗುತ್ತು ಬರ್ಕೆ ಬೂಡು ಆರಂತಡೆಗಳ ಪರಿಸ್ಥಿತಿ ಅಷ್ಟು ಖರ್ಚು ವೆಚ್ಚವನ್ನು ನೋಡಿ ಕೊಳ್ಳುವ ಪರಿಸ್ಥಿತಿಯಲ್ಲಿಲ್ಲ.
ಹಾಗಾಗಿ ಸರ್ಕಾರ ಮದ್ಯ ಪ್ರವೇಶಿಸಿ, ದೊಡ್ಡ ಮನಸ್ಸು ಮಾಡಿ ಈ ಸಂಪ್ರದಾಯಬದ್ದ ನಾಗ ಬ್ರಹ್ಮರ ಕಂಬುಲಗಳಿಗೂ ಅನುದಾನ ನೀಡಬೇಕು ಎನ್ನುವುದು ಎಲ್ಲರ ಆಶಯ.