ಕಾರವಾರ : ಕೋಲಾರದ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಬೆನ್ನಲ್ಲೇ ಮುರುಡೇಶ್ವರದ ಕಡಲತೀರಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಜಿಲ್ಲಾಡಳಿತ ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿದೆ.

ಈ ಕುರಿತು ಎಸ್​ಪಿ ಎಂ.ನಾರಾಯಣ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾಡಳಿತದ ವತಿಯಿಂದ ಪ್ರವಾಸಕ್ಕೆ ಆಗಮಿಸಿದ್ದ ಉಳಿದ ವಿದ್ಯಾರ್ಥಿಗಳನ್ನು ಕೋಲಾರದ ಮುಳುಬಾಗಿಲಿಗೆ ಸುರಕ್ಷಿತವಾಗಿ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊತ್ತೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಒಟ್ಟು 54 ಮಂದಿ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದರು. ಮಂಗಳವಾರ ಸಂಜೆ ಮುರ್ಡೇಶ್ವರದ ಕಡಲ ತೀರದಲ್ಲಿ ವಿದ್ಯಾರ್ಥಿಗಳು ಆಟವಾಡುತ್ತಿದ್ದರು. ಈ ವೇಳೆ ಏಕಾಏಕಿ 7 ವಿದ್ಯಾರ್ಥಿನಿಯರು ಸಮುದ್ರದ ಅಲೆಗೆ ಕೊಚ್ಚಿ ಹೋಗಿದ್ದರು. ಈ ಪೈಕಿ ಮೂವರು ವಿದ್ಯಾರ್ಥಿನಿಯರನ್ನು ಲೈಫ್ ಗಾರ್ಡ್ಸ್ ಸಿಬ್ಬಂದಿ ರಕ್ಷಿಸಿದ್ದರು. ಇನ್ನುಳಿದ ನಾಲ್ವರು ವಿದ್ಯಾರ್ಥಿನಿಯ ಪೈಕಿ ಒಬ್ಬಾಕೆ ಮೃತದೇಹ ಮಂಗಳವಾರವೇ ಪತ್ತೆಯಾಗಿದ್ದು, ಉಳಿದ ಮೂವರು ವಿದ್ಯಾರ್ಥಿಗಳ ಮೃತದೇಹ ಬುಧವಾರ ಪತ್ತೆಯಾಗಿದೆ.