ನವದೆಹಲಿ : ರೈತರಿಗೆ ಅಡಮಾನ ರಹಿತವಾಗಿ ನೀಡಲಾಗುವ ಕೃಷಿ ಸಾಲದ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ 2 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಇದು ಮುಂಬರುವ ಜನವರಿಂದಲೇ 1ರಿಂದಲೇ ಜಾರಿಗೆ ಬರಲಿದೆ.

ಈ ಮೊದಲು ಅಡಮಾನವಿಲ್ಲದೇ 1.6 ಲಕ್ಷವರೆಗೆ ಸಾಲ ನೀಡಲಾಗುತ್ತಿತ್ತು. ರಿಸರ್ವ್ ಬ್ಯಾಂಕ್‌ ಹೊಸ ನಿರ್ದೇಶನದ ಮೂಲಕ, ರಾಷ್ಟ್ರವ್ಯಾಪಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಪಡೆಯುವ 2 ಲಕ್ಷ ರೂ.ಗಳ ವರೆಗಿನ ಸಾಲಕ್ಕೆ ಅಡಮಾನ ಅಥವಾ ಇತರ ಅಗತ್ಯ ದಾಖಲೆಗಳ ಮಿತಿಯನ್ನು ತೆಗೆದುಹಾಕಲು ಬ್ಯಾಂಕ್‌ಗಳಿಗೆ ಹೇಳುತ್ತದೆ.

ಕೃಷಿಯಲ್ಲಿ ಹೆಚ್ಚುತ್ತಿರುವ ಮೂಲ ಬಂಡವಾಳ, ಬೀಜ ಹಾಗೂ ಗೊಬ್ಬರ ವೆಚ್ಚವನ್ನು ಗಮದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದೆ.

ಇದರಿಂದಾಗಿ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಒಳಗೊಂಡಂತೆ ಶೇ 86ರಷ್ಟು ರೈತರಿಗೆ ನೆರವಾಗಲಿದೆ ಎಂದು ಕೃಷಿ ಸಚಿವಾಲಯ ಹೇಳಿದೆ. ಈ ಹೊಸಮಾರ್ಗ ಸೂಚಿಯನ್ನು ತ್ವರಿತವಾಗಿ ಅಳವಡಿಸುವುದು ಹಾಗು ಹೆಚ್ಚು ರೈತರನ್ನು ತಲುಪುವ ಉದ್ದೇಶದಿಂದ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ. ಫೆಬ್ರವರಿ 2019 ರಲ್ಲಿ, ರಿಸರ್ವ್‌ ಬ್ಯಾಂಕ್ ಮೇಲಾಧಾರ ಮುಕ್ತ ಕೃಷಿ ಸಾಲಗಳ ಮಿತಿಯನ್ನು ಆಗಿನ ₹ 1 ಲಕ್ಷದಿಂದ ₹ 1.6 ಲಕ್ಷಕ್ಕೆ ಹೆಚ್ಚಿಸಿತ್ತು.
ಕೃಷಿ ಆರ್ಥಿಕತೆಯು ಭಾರತದ ಒಟ್ಟು ದೇಶೀಯ ಉತ್ಪನ್ನ ಅಥವಾ ಜಿಡಿಪಿ (GDP)ಯ ಸುಮಾರು 18% ರಷ್ಟಿದೆ ಮತ್ತು ದೇಶದ ಸುಮಾರು ಅರ್ಧದಷ್ಟು ಜನಸಂಖ್ಯೆಯು ಕೃಷಿ-ಮೂಲದ ಆದಾಯವನ್ನು ಅವಲಂಬಿಸಿದೆ.