ಮಂಗಳೂರು: ಕಾನೂನನ್ನು ಪೂರ್ಣಕಾಲಿಕವಾಗಿ ಅಧ್ಯಯನ ನಡೆಸಿ ವೃತ್ತಿಪರ ವಕೀಲರಾಗಿ ಸಮಾಜವನ್ನು ಸುಶಿಕ್ಷಿತವನ್ನಾಗಿಸುವ ಜೊತೆಗೆ ರಾಷ್ಟ್ರವನ್ನು ಪ್ರತಿನಿಧಿಸುವಂತರಾಗಿ ಎಂದು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ರಾಜ್ಯಸಭಾ ಸದಸ್ಯರೂ ಆಗಿರುವ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಅವರು ಮಂಗಳೂರಿನ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಭಾನುವಾರ ಎಸ್‌ಡಿಎಂ ಕಾನೂನು ವಿದ್ಯಾಲಯದ 50 ನೇ ವರ್ಷಾಚರಣೆ ಸಲುವಾಗಿ ಎರಡನೇ ದಿನ ನಡೆದ ಹಳೆ ವಿದ್ಯಾರ್ಥಿಗಳ ಸಮಾವೇಶಕ್ಕೆ ಚಾಲನೆ ನೀಡಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.

ಕಾನೂನು ವ್ಯಾಸಂಗ ಮೂರು ವರ್ಷ ಬದಲು ಐದು ವರ್ಷಗಳ ಕೋರ್ಸ್‌ನಿಂದ ಉತ್ತಮ ಜ್ಞಾನ ಹೊಂದಲು ಸಾಧ್ಯ. ಹುಬ್ಬಳ್ಳಿಯಲ್ಲಿ ಐದು ವರ್ಷ ಅವಧಿಯ ಕಾನೂನು ವ್ಯಾಸಂಗ ಅಷ್ಟಾಗಿ ಯಶಸ್ವಿಯಾಗದಿದ್ದರೂ ಮಂಗಳೂರಿನಲ್ಲಿ ಇದಕ್ಕೆ ಉತ್ತಮ ಸ್ಪಂದನ ದೊರಕುತ್ತಿದೆ. ಕಾನೂನು ಕಲಿಕೆ ಎಂದರೆ, ಬೆಳಗ್ಗೆ ಮತ್ತು ಸಂಜೆ ಮಾತ್ರ ಕಾಲೇಜಿಗೆ ಬಂದು ಹೋಗುವುದು ಅಲ್ಲ. ಅದನ್ನು ಗಂಭೀರವಾಗಿ ತೆಗೆದುಕೊಂಡರೆ ಮಾತ್ರ ಕಾನೂನು ಕಲಿಕೆಯಲ್ಲಿ ಯಶಸ್ಸು ಸಿಗಲು ಸಾಧ್ಯ. ಕಾಲೇಜಿನ ಆಡಳಿತ ಕೂಡ ಈ ವಿಚಾರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದರಿಂದ ಐದು ವರ್ಷದ ಕಾನೂನು ಕೋರ್ಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಬಾಲ್ಯದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಬದಲು ನಾನೊಬ್ಬ ವಕೀಲನಾಗಬೇಕು ಎಂಬ ಬಯಕೆಯನ್ನು ನನ್ನ ಹೆತ್ತವರು ಹೊಂದಿದ್ದರು. ಆದರೆ ಅದನ್ನು ಈಡೇರಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಆದರೆ ಕಾನೂನು ವಿದ್ಯಾಲಯ ತೆರೆದು ಉತ್ಕೃಷ್ಟ ಬೋಧನಾ ವೃಂದವನ್ನು ಅಳವಡಿಸಲಾಗಿದೆ. ಹೀಗಾಗಿ ನಮ್ಮ ಎಸ್ ಡಿಎಂ ಕಾನೂನು ವಿದ್ಯಾಲಯ ಶಿಕ್ಷಣದಲ್ಲಿ ತನ್ನದೇ ಆದ ವಿಶೇಷ ಛಾಪು ಮೂಡಿಸಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ವೃತ್ತಿಪರತೆಯಿಂದ ಎಲ್ಲ ಕಡೆಗಳಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಅಭಿಮಾನ

 

ಉಪನ್ಯಾಸ ನೀಡಿದ ಭಾರತದ ಅಟಾರ್ನಿ ಜನರಲ್ ಡಾ.ಆರ್. ವೆಂಕಟರಮಣಿ, ನ್ಯಾಯ ತೀರ್ಪುಗಳು ವಿವಾದ ರಹಿತವಾಗಿ ಇರಬೇಕು. ಆಗ ಮಾತ್ರ ಅದು ನಿಜವಾದ ನ್ಯಾಯ ತೀರ್ಮಾನ ಎನಿಸುತ್ತದೆ. ಇದಕ್ಕಾಗಿ ನ್ಯಾಯವಾದಿಗಳು ಎಚ್ಚರಿಕೆಯಿಂದ ವಾದ-ಪ್ರತಿವಾದ ಮಂಡಿಸಬೇಕು ಎಂದರು.

 

ಸಾಮಾಜಿಕ ಜಾಲತಾಣಗಳ ಭರಾಟೆಯ ಈ ದಿನಗಳಲ್ಲಿ ಅವುಗಳ ಮೂಲ ಉದ್ದೇಶಗಳು ದಾರಿತಪ್ಪುತ್ತಿವೆ. ತಾಂತ್ರಿಕತೆ ಮುಂದುವರಿದಷ್ಟೂ ತೊಂದರೆಗಳೂ ಕಾಣಿಸಿಕೊಳ್ಳುತ್ತಿವೆ. ಧರ್ಮ ಮತ್ತು ನ್ಯಾಯದ ಮೂಲಸಿದ್ಧಾಂತಗಳು ಪರಸ್ಪರ – ಪೂರಕವಾಗಿರಬೇಕು. ಸಂವಿಧಾನದ ಆಶಯದಂತೆ ಆಡಳಿತ
ಇರಬೇಕಾಗಿದ್ದು, ಧರ್ಮ, ತಂತ್ರಜ್ಞಾನಗಳೂ ಇದರಲ್ಲಿ ಹಾಸುಹೊಕ್ಕಾಗಿರಬೇಕು ಎಂದು ಅವರು ಆಶಿಸಿದರು. ನಮ್ಮ ಭಾಷೆ, ಸಂಸ್ಕೃತಿಗಳು ಸಮಾಜದ ಕೊಡುಗೆಯಾಗಿದ್ದು, ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಸವಾಲಾಗಿ ಪರಿಣಮಿಸಿದೆ ಎಂದರು.

ವಕೀಲರು ಸಂವಿಧಾನದ ರಾಯಭಾರಿಗಳು: ಖಾದ‌ರ್

ಒಂದು ಕಾಲದಲ್ಲಿ ತರಗತಿಯ ಕೊನೆಯ ಬೆಂಚ್‌ನಲ್ಲಿದ್ದ ನಾನು ಈಗ ಕರ್ನಾಟಕ ವಿಧಾನಸಭೆಯ ಸ್ಪೀಕ‌ರ್ ಕುರ್ಚಿಯಲ್ಲಿ ಕುಳಿತುಕೊಳ್ಳುವಂತಾಗಿದೆ. ಇದು ಎಸ್‌ಡಿಎಂ ಕಾನೂನು ಕಾಲೇಜಿನಿಂದ ಬಂದಿರುವ ಶ್ರೇಷ್ಠಕೊಡುಗೆಗಳಲ್ಲಿ ಒಂದಾಗಿದೆ ಎಂದು ನಾನು ನಂಬುತ್ತೇನೆ. ಇದು ನನ್ನ ಸಾಮರ್ಥ್ಯವನ್ನು ಪೋಷಿಸಿದ ಮತ್ತು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ನನ್ನ ಭವಿಷ್ಯವನ್ನು ರೂಪಿಸಿದ ಸ್ಥಳವಾಗಿದೆ ಎಂದು ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಶ್ಲಾಘಿಸಿದರು. ವಕೀಲರೆಂದರೆ ಕೇವಲ ವೃತ್ತಿಯಲ್ಲ, ಅದು ಆಳವಾದ ಸಾಮಾಜಿಕ ಜವಾಬ್ದಾರಿಯಾಗಿದೆ. ವಕೀಲರು ಭಾರತೀಯಸಂವಿಧಾನದ ರಾಯಭಾರಿಗಳು. ವಿಶೇಷವಾಗಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನು ವಕೀಲರು ಹೊಂದಬೇಕು ಎಂದು ಯು.ಟಿ.ಖಾದ‌ರ್ ಸಂದೇಶದಲ್ಲಿ ತಿಳಿಸಿದ್ದಾರೆ.

ಸಾಧಕರಿಗೆ ಸನ್ಮಾನ: ಈ ಸಂದರ್ಭ ಸಾಧಕರಾದ ಡಾ.ಕೆ.
ವೆಂಕಟರಮಣಿ, ನ್ಯಾಯವಾದಿಗಳಾದ ಶಾಹುಲ್ ಹಮೀದ್ ರಹಮಾನ್, ಶೇಖರ್ ದೇವಸ, ಸಾರ್ವಕಾಲಿಕ ಸಾಧಕರಾದ ನಿವೃತ್ತ ನ್ಯಾಯಾಧೀಶರಾದ ಆ್ಯಂಟನಿ ಡೊಮಿನಿಕ್, ಜಸ್ಟೀಸ್ ಜೆ. ಮೈಕೆಲ್ ಡಿ ಕುನ್ನಾ, ನಿವೃತ್ತ ಐಎಎಸ್ ಅಧಿಕಾರಿ ಶ್ಯಾಮ ಭಟ್, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ರಾಜೇಂದ್ರ ಶೆಟ್ಟಿ, ಹಿರಿಯ ನ್ಯಾಯವಾದಿ ಡಾ.ಶಶಿಕಲಾ ಗುರುಪುರ ಇವರನ್ನು ಸನ್ಮಾನಿಸಿ
ಗೌರವಿಸಲಾಯಿತು. ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಸತೀಶ್, ಪುತ್ತೂರು ಬಾರ್ ಅಸೋಸಿಯೇಷನ್‌ ಅಧ್ಯಕ್ಷ ಜಗನ್ನಾಥ ರೈ, ಮೂಡುಬಿದಿರೆ ಬಾರ್ ಅಸೋಸಿಯೇಷನ್‌ ಅಧ್ಯಕ್ಷ ಹರೀಶ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್‌ಚಂದ್ರ, ಹಳೆ ವಿದ್ಯಾರ್ಥಿ ಸಂಘದ ಸಲಹೆಗಾರ ದಿನಕರ ಶೆಟ್ಟಿ ಮತ್ತಿತರರಿದ್ದರು.

ನ್ಯಾಯವಾದಿ ಉದಯ ಪ್ರಕಾಶ್ ಮುಳಿಯ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಡಾ.ದೇವರಾಜ್ ಕೆ. ಪ್ರಾಸ್ತಾವಿಕ ಮಾತನಾಡಿದರು. ಎಸ್‌ಡಿಎಂ ಲಾ ಕಾಲೇಜು ಪ್ರಾಂಶುಪಾಲ ಡಾ.ತಾರನಾಥ್‌ ವಂದಿಸಿದರು.