ಮಂಗಳೂರು : ಮಂಗಳೂರಿನ ಸುರತ್ಕಲ್ ಬಳಿಯ ಶಿಬರೂರು ಕೊಡಮಣಿತ್ತಾಯ ದೈವಸ್ಥಾನವು ಪ್ರಸಿದ್ಧ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ತುಳುನಾಡಿನಲ್ಲಿ ಅದು ‘ತಿಗಲೆ ಇತ್ತಿನಾಯಗ್ ತಿಬಾರ್’ ಎಂಬ ಮಾತು ಈ ಕ್ಷೇತ್ರದ ಮಹತ್ವವನ್ನು ತೋರುತ್ತದೆ, ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ತುಳುನಾಡಿನ ಪ್ರಮುಖ ಪವಿತ್ರ ಸ್ಥಳಗಳಲ್ಲಿ ಶಿಬರೂರು ತನ್ನ ಸ್ಥಾನವನ್ನು ಪಡೆದಿದೆ.

ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದ ಶಿವರಾಯನ ವಾರ್ಷಿಕೋತ್ಸವ ಭಾನುವಾರದಿಂದ ಪ್ರಾರಂಭವಾಗಿದ್ದು ಡಿಸೆಂಬರ್ 22ರ ವರೆಗೆ ನಡೆಯಲಿದೆ.

ಒಂದು ಐತಿಹ್ಯದ ಪ್ರಕಾರ, ದುರ್ಗಾ ಮತ್ತು ಈಶ್ವರ ದೇವರು ಗುಡ್ಡಗಾಡಿನಲ್ಲಿ ತಿರುಗಾಡುತ್ತಿರುವಾಗ, ದುರ್ಗಾದಿಂದ ಅಜ್ಞಾತ ಶಕ್ತಿ ಉತ್ಪನ್ನವಾಯಿತು. ಈ ಶಕ್ತಿಯನ್ನು ಸ್ಥಳೀಯ ಜನರು ಮಂತ್ರವಾದಿಯ ನೆರವಿನಿಂದ ಕುಂಭದಲ್ಲಿ ಬಂಧಿಸಿ, ಮಹಾವೀರ ಗಂಗೆ ಎಂಬ ನದಿಯಲ್ಲಿ ತೇಲಿಸಿದರು. ಕೊನೆಗೆ ಈ ಕುಂಭವು ಪೆರಿಂಜೆಯ ಜೈನ ಕುಟುಂಬದವರಿಗೆ ಸಿಕ್ಕಿತು. ಅವರು ರಾತ್ರಿ ಸಮಯದಲ್ಲಿ ಈ ಕುಂಭವನ್ನು ತೆರೆಯುತ್ತಿದ್ದಾಗ, ದೈವ ಪ್ರತ್ಯಕ್ಷವಾಯಿತು, ಮತ್ತು ಆ ದೈವವು ‘ಕುಂಭಕಂಠಿಣಿ’ ಎಂಬ ಹೆಸರನ್ನು ಪಡೆಯಿತು.

ಕೊಡಮಣಿತ್ತಾಯ ಶಿಬರೂರುಗೆ ಬಂದ ವಿಚಾರ:
ದೈವಭಕ್ತನಾದ ತಿಬಾರ (ಶಿಬರೂರು) ಗುತ್ತಿನ ತಿಮ್ಮತಿ ಕರಿವಾಳ್ ಮತ್ತು ಎಕ್ಕಾರಿನ ದುಗ್ಗಣ್ಣ ಕಾವರು, ಇರುವೈಲ್ ಶ್ರೀ ದುರ್ಗಾಪರಮೇಶ್ವರಿ ದೇವರ ದರ್ಶನ ಪಡೆದ ನಂತರ, ’ಪೊಸದೈವ’ ಕೊಡಮಣಿತ್ತಾಯನಿಗೆ ಹರಕೆ ಸಲ್ಲಿಸಲು ಕೆಳಬರ್ಕೆಗೆ ತೆರಳುತ್ತಾರೆ. ಅಲ್ಲಿ ಹರಕೆಯನ್ನು ಸಲ್ಲಿಸಿ ಗಂಧಪ್ರಸಾದವನ್ನು ಸ್ವೀಕರಿಸಿದ ಬಳಿಕ, ತಮ್ಮ ಊರಿಗೆ ಮರಳುವಾಗ, ದಾರಿಯಲ್ಲಿ ಬಾಯಾರಿಕೆಯಾಗುತ್ತದೆ. ಅವರು ಎತ್ತು ಮತ್ತು ಕೋಳಿಗಳನ್ನು ಸಮೀಪದ ಅಶ್ವತ್ಥ ಮರಕ್ಕೆ ಕಟ್ಟಿ, ನಡ್ಡೋಡಿಗುತ್ತಿಗೆ ಹೋಗಿ ಬಾಯಾರಿಕೆಯನ್ನು ತೀರಿಸುತ್ತಾರೆ. ಮರಳಿ ಬರುವ ವೇಳೆ, ಎತ್ತುಗಳು ಆವೇಶಗೊಂಡು ವಿಚಿತ್ರವಾಗಿ ನಡೆದುಕೊಳ್ಳುತ್ತವೆ. ಅವರು ಇವುಗಳ ಆವೇಶಕ್ಕೆ ಕಾರಣವನ್ನು ತಿಳಿಯಲು ಬಲ್ಯಾಯರಲ್ಲಿ ವಿಚಾರಿಸಾಗ, ಓರಿ ಉಳ್ಳಾಯ ಮತ್ತು ಧರ್ಮದೈವ ಕೊಡಮಣಿತ್ತಾಯಗಳು ಅವರ ಜತೆ ಇವೆ ಎಂದು ತಿಳಿಯುತ್ತಾರೆ. ಬಲ್ಯಾಯರು ಈ ದೈವಗಳನ್ನು ಪ್ರತಿಷ್ಠಾಪಿಸಬೇಕೆಂದು ಸಲಹೆ ನೀಡುತ್ತಾರೆ. ಈದಂತೆ, ದೈವವನ್ನು ದೇರಿಂಜಗಿರಿಯ (ಎಕ್ಕಾರು) ಮಠದಲ್ಲಿ ಪ್ರತಿಷ್ಠಾಪಿಸಿ ಆರಾಧನೆ ನಡೆಯುತ್ತದೆ. ತಿಮ್ಮತಿ ಕರಿವಾಳ್ ತಮಗೆ ಉಡುಗೊರೆ ನೀಡಿದ ಎತ್ತು ಮತ್ತು ಕೋಳಿಗಳನ್ನು ತಮ್ಮ ಊರಿಗೆ ಕರೆದುಕೊಂಡು ಹೋಗಿ, ರಾತ್ರಿ ಮಲಗುವಾಗ ಗೋವುಗಳ ಕಿರುಚಾಟವನ್ನು ಕೇಳುತ್ತಾರೆ. ಅದರಿಂದಾಗಿ, ಅವರು ದೈವದ ವಿಚಾರವನ್ನು ಬಲ್ಯಾಯರಲ್ಲಿ ಕೇಳಿ ತಿಳಿದು, ತಕ್ಷಣ ದೈವಗಳಿಗೆ ಶಿಬರೂರಿನಲ್ಲಿ ದೈವಸ್ಥಾನ ನಿರ್ಮಿಸಲು ತೀರ್ಮಾನಿಸುತ್ತಾರೆ. ಈ ಕಾರ್ಯವನ್ನು ನಡೆಸಲು ಸೂರಿಂಜೆಗುತ್ತಿನ ತ್ಯಾಂಪ ಶೆಟ್ರಿಗೆ ಅವಶ್ಯಕತೆ ಬರುವುದರಿಂದ, ಅವರು ಬಾವಿಯಲ್ಲಿದ್ದ ವಿಷಹೀರುವ ಕಲ್ಲನ್ನು ದೈವದ ಆಶೀರ್ವಾದದಿಂದ ಬಾವಿಗೆ ಹಾಕುತ್ತಾರೆ. ಈ ಮೂಲಕ, ಬಾವಿಯ ನೀರು ಮತ್ತು ದೈವದ ಪ್ರಸಾದವು ವಿಷಕ್ಕೆ ಮದ್ದು ಆಗುತ್ತದೆ ಎಂಬ ನಂಬಿಕೆ ಹರಡುತ್ತದೆ.

ಕೊಡಮಣಿತ್ತಾಯ ‘ವೈದ್ಯನಾಥ’ನಾದದ್ದು:

ಧರ್ಮಾತ್ಮನಾದ ಸೂರಿಂಜೆಗುತ್ತಿನ ತ್ಯಾಂಪ ಶೆಟ್ರು ತನ್ನ ವಿಷವೈದ್ಯದ ಪರಂಪರೆಯನ್ನು ಮುಂದುವರಿಸಲು ಸೂಕ್ತ ಶಿಷ್ಯರಿಲ್ಲ ಎಂದು ಅರಿತು, ತನ್ನ ಗಿಣಿ ಚಿರಾವಿಯಲ್ಲಿದ್ದ ವಿಷ ಹೀರುವ ಕಲ್ಲನ್ನು ದೈವಗಳನ್ನು ನೆನೆಸಿ, “ಇನ್ನು ಮುಂದೆ ಈ ಬಾವಿಯ ನೀರು ಮತ್ತು ದೈವದ ಗಂಧವೇ ವಿಷಕ್ಕೆ ಮದ್ದಾಗಲಿ” ಎಂದು ಸಾಂಕೇತಿಕವಾಗಿ ತಿಬಾರಗುತ್ತಿನ ಬಾವಿಗೆ ಹಾಕುತ್ತಾರೆ. ಶಿಬರೂರಿನ ಈ ಪವಿತ್ರ ತೀರ್ಥ ಬಾವಿಯ ನೀರನ್ನು, ದೈವದ ಗಂಧ ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದರೆ, ವಿಷನಾಶ ಉಂಟಾಗುತ್ತದೆ ಎಂಬ ದೀರ್ಘಕಾಲದ ನಂಬಿಕೆ ಇದೆ. ಇಷ್ಟೇ ಅಲ್ಲದೆ, ಬಾವಿಯ ತೀರ್ಥ ಮತ್ತು ದೈವದ ಗಂಧಪ್ರಸಾದವನ್ನು ಸೇವಿಸುವವರು ನಾಗದೋಷ ನಿವಾರಣೆ, ಚರ್ಮ ರೋಗ ನಿವಾರಣೆ, ಉಬ್ಬಸರೋಗ ನಿವಾರಣೆ, ಮತ್ತು ಸಂತಾನ ಸಂಕಟಗಳಿಂದ ಮುಕ್ತಿ ಪಡೆಯುತ್ತಾರೆ ಎಂದು ಭಕ್ತರಲ್ಲಿ ನಂಬಿಕೆ ಇದೆ. ಈ ಬಾವಿಯ ನೀರು ವಿಷಪೂರ್ಣ ಜಂತುಗಳ ದಾಳಿಯಿಂದ ನರಳುತ್ತಿದ್ದ ಅನೇಕ ಜನರನ್ನು ರಕ್ಷಿಸಿದಂತೆ ಅನೇಕ ಉದಾಹರಣೆಗಳು ಇಂದಿಗೂ ಸುತ್ತಮುತ್ತಲಿನ ಜನರು ನೋಡುವಂತಿವೆ. ಬಾವಿಯ ಪವಿತ್ರ ನೀರನ್ನು ಏತ ವ್ಯವಸ್ಥೆ ಮೂಲಕ ಮೇಲಕ್ಕೆತ್ತಲಾಗುತ್ತದೆ, ಮತ್ತು ಪ್ರತಿವರ್ಷ ನೇಮದ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿ ಈ ತೀರ್ಥವನ್ನು ಸ್ವೀಕರಿಸುತ್ತಾರೆ. ಹಾಗಾಗಿ ಕೊಡಮಣಿತ್ತಾಯ ದೈವಕ್ಕೆ ‘ವೈದ್ಯನಾಥ’ ಎಂಬ ಹೆಸರಿನ ಕೀರ್ತಿ ದೊರೆಯಿತು.

ಕಟೀಲು ಕ್ಷೇತ್ರ ಮತ್ತು ಶಿಬರೂರು ಕ್ಷೇತ್ರದ ಸಂಬಂಧ:
ಶ್ರೀಕ್ಷೇತ್ರ ಕಟೀಲು ಮತ್ತು ಶಿಬರೂರಿನ ಕೊಡಮಣಿತ್ತಾಯ ದೈವಗಳ ಮಧ್ಯೆ ಅನೂಭೂತವಾದ ಸಂಬಂಧವಿದೆ, ಜಾತ್ರೆಯ ಸಂದರ್ಭದಲ್ಲಿ ಕೊಡಮಣಿತ್ತಾಯನ ಭಂಡಾರ ಕಟೀಲು ಕ್ಷೇತ್ರಕ್ಕೆ ಬರುತ್ತದೆ.

ಶಿಬರೂರಿನ ತೀರ್ಥವು ಪವಿತ್ರ ತೀರ್ಥವಾಗಿ ಪ್ರಸಿದ್ಧಿಯಲ್ಲಿದ್ದು, ಈ ತೀರ್ಥದ ನೀರನ್ನು ಸೇವಿಸಿದವರಿಗೆ ವಿಷನಾಶಕ ಶಕ್ತಿ, ನಾಗದೋಷ ಪರಿಹಾರ, ಚರ್ಮರೋಗ ನಿವಾರಣೆ, ಮತ್ತು ಸಂತಾನಪ್ರತಿಬಂಧಕ ದೋಷ ನಿವಾರಣೆ ದೊರೆಯುತ್ತದೆ ಎಂಬ ನಂಬಿಕೆ ಇದೆ. ಶಿಬರೂರಿನಲ್ಲಿ ನಾಗದೋಷ ನಿವಾರಣೆಗಾಗಿ ವಿಶೇಷ ಪ್ರಾರ್ಥನೆಗಳನ್ನು ಮಾಡಲಾಗುತ್ತದೆ, ಮತ್ತು ಇಲ್ಲಿನ ತೀರ್ಥ , ಅದರ ಬಾವಿ ಸುತ್ತ ಮುತ್ತಲಿನ ಪಾವಿತ್ರ್ಯವನ್ನು ಕಾಪಾಡುವುದು ಶಿಬರೂರಿನ ಭಕ್ತರ ಕರ್ತವ್ಯವಾಗಿದೆ.