ಲಕ್ನೋ : ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿಯೊಬ್ಬರು ತನ್ನ ಕಾಣೆಯಾದ ಗಿಳಿ ಬಗ್ಗೆ ಸರಿಯಾದ ಮಾಹಿತಿ ನೀಡಿದವರಿಗೆ ಅಥವಾ ಹಿಡಿದು ತಂದುಕೊಟವಟರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ನವೀನ್ ಪಾಠಕ್ ಅವರು ಗಿಳಿಯೊಂದಿಗೆ ಇರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಡಿಸೆಂಬರ್ 10 ರಂದು ಗಿಳಿ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಹಾಗೂ ನಾಪತ್ತೆಯಾದ ಗಿಳಿ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂಪಾಯಿಗಳ ಬೃಹತ್ ಬಹುಮಾನವನ್ನೂ ಘೋಷಿಸಿದ್ದಾರೆ. ಪಕ್ಷಿ ಪ್ರೇಮಿಯಾಗಿರುವ ನವೀನ್ ಪಾಠಕ್‌ ಅವರು ತಮ್ಮ ಕುಟುಂಬವು ಗಿಳಿ ಕಾಣೆಯಾದ ಕಾರಣ ತೀವ್ರ ನೊಂದಿದ್ದಾರೆ ಎಂದು ಹೇಳಿದ್ದಾರೆ. ಮನೆಯ ಮಕ್ಕಳು ಅದು ಕಾಣೆಯಾದ ನಂತರ ಊಟವನ್ನೇ ಬಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಫೇಸ್‌ಬುಕ್‌ ಪೋಸ್ಟ್ ಪ್ರಕಾರ, ವಿಷ್ಣು ಎಂಬ ಗಿಳಿಯನ್ನು ನವೀನ್ ಸಾಕಿದ್ದರು. ಸುಮಾರು ಎರಡೂವರೆ ವರ್ಷಗಳ ಹಿಂದೆ ನವೀನ್‌ ಅವರಿಗೆ ಕಾರ್ಮಿಕರೊಬ್ಬರು ಕರೆ ಮಾಡಿ ಲಿಂಟಲ್ ಬಳಿ ಹಕ್ಕಿ ಗಾಯಗೊಂಡಿರುವ ಬಗ್ಗೆ ಮಾಹಿತಿ ನೀಡಿದರು. ಅವರು ಅಲ್ಲಿಗೆ ಹೋದಾಗ, ಹಕ್ಕಿ ಮಣ್ಣಿನಿಂದ ಮುಚ್ಚಿಹೋಗಿತ್ತು ಮತ್ತು ಅದನ್ನು ಗಿಣಿ ಎಂದು ಗುರುತಿಸಲು ಸಾಧ್ಯವಾಗದಷ್ಟು ಅದಕ್ಕೆ ಮಣ್ಣು ಮೆತ್ತಿತ್ತು. ನವೀನ್ ಪಕ್ಷಿಯನ್ನು ಮನೆಗೆ ಕರೆತಂದರು, ಅದನ್ನು ಸ್ವಚ್ಛಗೊಳಿಸಿದರು ಮತ್ತು ಅದರ ಗಾಯಗಳಿಗೆ ವೈದ್ಯಕೀಯ ಚಿಕಿತ್ಸೆ ಮಾಡಿದರು.
ಕೆಲವು ದಿನಗಳ ಆರೈಕೆಯ ನಂತರ, ಪಕ್ಷಿ ಚೇತರಿಸಿಕೊಂಡಿತು ಮತ್ತು ಕುಟುಂಬವು ಅದಕ್ಕೆ ವಿಷ್ಣು ಎಂದು ಹೆಸರಿಟ್ಟಿರು. ಕಾಲಾನಂತರದಲ್ಲಿ, ಕುಟುಂಬಕ್ಕೆ ವಿಷ್ಣುವಿನ ಜೊತೆ ಬಲವಾದ ಬಾಂಧವ್ಯ ಬೆಳೆಯಿತು. ಗಿಣಿ ಸಹ ಕುಟುಂಬದವರನ್ನು ತಮ್ಮವರು ಎಂದು ಪರಿಗಣಿಸಿತು.

ವಿಷ್ಣುವನ್ನು ಪಂಜರದಲ್ಲಿ ಇರಿಸುತ್ತಿರಲಿಲ್ಲ. ಎಲ್ಲಿಗೆ ಹೋದರೂ ಅದು ಅವರನ್ನು ಹಿಂಬಾಲಿಸುತ್ತಿತ್ತು ಎಂದು ನವೀನ್ ಹೇಳಿದ್ದಾರೆ. ಗಿಳಿ ಆಗಾಗ್ಗೆ ಹಾರಿಹೋಗುತ್ತಿತ್ತು. ಆದರೆ ಕೆಲಹೊತ್ತಿನ ನಂತರ ವಾಪಸ್‌ ಬರುತ್ತಿತ್ತು. ಆದರೆ, ಆರು ದಿನಗಳ ಹಿಂದೆ ಹಾರಿ ಹೋಗಿದ್ದ ಗಿಳಿ ವಾಪಸ್‌ ಬರಲಿಲ್ಲ. ನವೀನ್ ಮತ್ತು ಅವರ ಕುಟುಂಬದವರು ದಿನವಿಡೀ ಹುಡುಕಾಡಿದರೂ ಅದು ಪತ್ತೆಯಾಗಿರಲಿಲ್ಲ. ಅಂದಿನಿಂದ ಮನೆಯವರು ಗಿಣಿಗಾಗಿ ನಿರಂತರ ಹುಡುಕಾಟ ನಡೆಸುತ್ತಿದ್ದರೂ ಅದರ ಬಗ್ಗೆ ಯಾವುದೇ ಸುಳಿವು ಸಿಕ್ಕಲಿಲ್ಲ.

ಹೀಗಾಗಿ ಗಿಳಿ ಹುಡುಕುವುದಕ್ಕೆ ಸಹಾಯ ಮಾಡಲು ನವೀನ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಗಿಳಿಯನ್ನು ಹಿಡಿದು ಹಿಂದಿರುಗಿಸುವವರಿಗೆ 1 ಲಕ್ಷ ರೂ.ಬಹುಮಾನ ಘೋಷಿಸಿದ್ದಾರೆ.
ಗಿಳಿ ವಿಷ್ಣು ತಮಗೆ ಕೇವಲ ಸಾಕುಪ್ರಾಣಿಗಿಂತಲೂ ಹೆಚ್ಚಿನ ವ್ಯಕ್ತಿ ಎಂದು ಅವರು ಉಲ್ಲೇಖಿಸಿದ್ದಾರೆ. ಗಿಳಿ ಅವರನ್ನು ‘ಪಾಪಾ’ ಎಂದು ಕರೆಯುತ್ತಿತ್ತು ಮತ್ತು ಅವನ ಹೆಂಡತಿ ಜ್ಯೋತಿ ಪಾಠಕ್ ಅನ್ನು ‘ಮಮ್ಮಿ’ ಎಂದು ಕರೆಯುತ್ತಿತ್ತು. ವಿಷ್ಣು ಕುಟುಂಬದ ಮಕ್ಕಳ ಧ್ವನಿಯನ್ನು ಅನುಕರಿಸುತ್ತಿತ್ತು, ಹೀಗಾಗಿ ಗಿಣಿ ಇಲ್ಲದಿರುವುದು ಅವರಿಗೆ ತೀವ್ರ ನೋವು ತಂದಿದೆ. ಗಿಣಿಯಿಲ್ಲದೆ ಕುಟುಂಬ ಅಪೂರ್ಣವಾಗಿದೆ ಎಂದು ಕುಟುಂಬದವರು ಹೇಳುತ್ತಾರೆ.