ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದನದಲ್ಲಿ ನನಗೆ ಕೊಲೆಗಡುಕ ಎಂದು ನಿಂದನೆ ಮಾಡಿ ತಮ್ಮ ಬೆಂಬಲಿಗರನ್ನು ಸುವರ್ಣ ಸೌಧಕ್ಕೆ ನುಗ್ಗಿಸಿ ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ದೂರಿರುವ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಪ್ರತಿ ದೂರು ದಾಖಲು ಮಾಡಿದ್ದಾರೆ.

ಖಾನಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ರಾತ್ರಿ ಈ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಹಿರೇ ಬಾಗೇವಾಡಿ ಪೊಲೀಸ್ ಠಾಣೆಗೆ ಈ ಮೊದಲು ದೂರು ದಾಖಲು ಮಾಡಿದ್ದ ಹೆಬ್ಬಾಳಕರ್, ಸಿ.ಟಿ.ರವಿ ನನಗೆ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾರೆ ಎಂದು ದೂರು ದಾಖಲಿಸಿದ್ದರು. ಸುರಕ್ಷಿತ ದೃಷ್ಟಿಯಿಂದ ಸಿ.ಟಿ. ರವಿ ಅವರನ್ನು ಖಾನಾಪುರ ಪೊಲೀಸ್ ಠಾಣೆಗೆ ಕರೆತರಲಾಗಿದೆ. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಠಲ ಹಲಗೇಕರ, ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ್ ಪಾಟೀಲ, ಮಾಜಿ ಶಾಸಕ ಸಂಜಯ್ ಪಾಟೀಲ ಅವರು ತಡರಾತ್ರಿವರೆಗೆ ಠಾಣೆಯಲ್ಲಿ ಬೀಡು ಬಿಟ್ಟಿದ್ದಾರೆ. ರಾತ್ರಿ ಹತ್ತರ ನಂತರ ವಕೀಲರನ್ನು ಕರೆಸಿದ ಸಿ.ಟಿ. ರವಿ ಅವರು ದೂರನ್ನು ದಾಖಲು ಮಾಡಿದ್ದಾರೆ.