ಬೆಳಗಾವಿ :”ಸಿ.ಟಿ. ರವಿ ಅವರ ಹರಕಲು ಬಾಯಿ ಸಂಸ್ಕೃತಿ ಇದೇ ಮೊದಲಲ್ಲ. ಅವರು ಈ ಹಿಂದೆ ಸಿದ್ದರಾಮಯ್ಯ ಸೇರಿದಂತೆ ಯಾರ ಬಗ್ಗೆ ಏನೆಲ್ಲಾ ಪದ ಪ್ರಯೋಗ ಮಾಡಿದ್ದಾರೆ ಎಂಬುದು ಗೊತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆಕ್ರೋಶ.
ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಸಿ.ಟಿ. ರವಿ ಅವರ ಬಂಧನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಹಿಂದೆ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದರು. ಹೀಗೆ ನಮ್ಮ ನಾಯಕರ ವಿರುದ್ಧ ಬಹಳ ಕೀಳು ಮಟ್ಟದ ಪದ ಬಳಕೆ ಮಾಡಿದ್ದಾರೆ. ಇದು ಚಿಕ್ಕಮಗಳೂರು ಸಂಸ್ಕೃತಿಯೇ? ಭಾರತದ ಸಂಸ್ಕೃತಿಯೇ? ಬಿಜೆಪಿ ಸಂಸ್ಕೃತಿಯೇ? ಚಿಕ್ಕಮಗಳೂರಿನಲ್ಲಿ ಇಂತಹ ಸಂಸ್ಕೃತಿಯನ್ನು ನಾನು ಈವರೆಗೂ ನೋಡಿಲ್ಲ. ಇಡೀ ಚಿಕ್ಕಮಗಳೂರಿನಲ್ಲಿ ಇವನೊಬ್ಬನೇ ಇಷ್ಟು ಕೀಳು ಮಟ್ಟದ ಸಂಸ್ಕೃತಿ ಹೊಂದಿರುವ ವ್ಯಕ್ತಿ” ಎಂದು ಕಿಡಿಕಾರಿದರು.
“ಸದನದಲ್ಲಿ ಅಂಬೇಡ್ಕರ್ ಅವರಿಗೆ ಕೇಂದ್ರ ಗೃಹಸಚಿವರು ಅಪಮಾನ ಮಾಡಿದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಈತ ರಾಹುಲ್ ಗಾಂಧಿ ಅವರನ್ನು ಮಾದಕ ವ್ಯಸನಿ ಎಂದು ನಿಂದಿಸಿದ್ದರುರು. ಹೀಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಪಕ್ಷದ ನಾಯಕನ ಸಮರ್ಥನೆಗೆ ಮುಂದಾದಾಗ, ಆತ ನಮ್ಮ ಸಚಿವರನ್ನು ಹಲವು ಬಾರಿ ಪ್ರೋಸ್ಟಿ** ಎಂದು ಕರೆದಿದ್ದಾನೆ. ಬಿಜೆಪಿಯವರು ತಮ್ಮ ನಾಯಕನನ್ನು ಹೇಗೆ ಸಮರ್ಥನೆ ಮಾಡಿಕೊಂಡರೋ ಅದೇ ರೀತಿ ನಮ್ಮ ಸಚಿವರು ನಮ್ಮ ನಾಯಕರನ್ನು ಸಮರ್ಥನೆ ಮಾಡಿಕೊಳ್ಳುವುದು ತಪ್ಪೇ? ಅದಕ್ಕಾಗಿ ಇಂತಹ ಪದ ಬಳಸುವುದೇ? ಎಂದು ಪ್ರಶ್ನಿಸಿದರು.
“ಒಟ್ಟು 12 ಬಾರಿ ಈ ಅವಾಚ್ಯ ಪದ ಬಳಸಿ ನಿಂದಿಸಿದ್ದಾರೆ. ಮಾಧ್ಯಮಗಳು ಈ ಎಲ್ಲಾ ಅಂಶಗಳನ್ನು ಸೇರಿ ಸುದ್ದಿ ಪ್ರಕಟಿಸಬೇಕು. ನಿಮ್ಮ ಬಳಿ ದಾಖಲೆ ಇಲ್ಲವಾದರೆ ಹೇಳಿ ನಾನು ನೀಡುತ್ತೇನೆ” ಎಂದು ತಿಳಿಸಿದರು.
“ಪರಿಷತ್ತಿನಲ್ಲಿ ಗುರುವಾರದಂದು ನನ್ನ ಇಲಾಖೆಗಳಿಗೆ ಸಂಬಂಧಿಸಿದ 12 ಪ್ರಶ್ನೆಗಳಿದ್ದವು. ಅವುಗಳಿಗೆ ಉತ್ತರ ನೀಡಿ ನಾನು ವಿಧಾನಸಭೆಗೆ ಬಂದಾಗ ಈ ಘಟನೆ ನಡೆದಿದೆ” ಎಂದರು.
*ಸಭಾಪತಿಗಳ ನಡೆ ಬೇಸರ ತಂದಿದೆ*
ಸಾಕ್ಷಿಗಳು ಇದ್ದರೆ ಸಭಾಪತಿಗಳು ಕ್ರಮ ಕೈಗೊಳ್ಳಬಹುದಿತ್ತಲ್ಲವೇ ಎಂದು ಕೇಳಿದಾಗ, “ಅವರು ಹಿರಿಯ ನಾಯಕರು. ಅವರ ಬಗ್ಗೆ ನನಗೆ ಗೌರವವಿದೆ. ಆದರೆ ಈ ವಿಚಾರದಲ್ಲಿ ಅವರ ನಡೆ ಬೇಸರ ತಂದಿದೆ. ಅವರು ಯಾವುದೇ ಪಕ್ಷದವರಾದರೂ ಸಭಾಪತಿ ಸ್ಥಾನದಲ್ಲಿ ಕೂತಾಗ ಎಲ್ಲರ ರಕ್ಷಣೆ ಮಾಡಬೇಕು. ಈ ವಿಚಾರವಾಗಿ ಅವರು ನಿನ್ನೆ ಚರ್ಚೆಗೆ ಅವಕಾಶ ನೀಡಬೇಕಿತ್ತು. ಅಲ್ಲಿ ಏನಾಗಿದೆ ಎಂದು ಪರಿಶೀಲನೆ ಮಾಡಬೇಕಿತ್ತು. ಒಂದು ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತಪ್ಪಿದ್ದರೆ ಅವರದ್ದೆ ತಪ್ಪು ಎಂದು ಹೇಳಬೇಕಿತ್ತು. ಅದನ್ನು ಬಿಟ್ಟು ಇಬ್ಬರನ್ನು ಕರೆದುಕೊಂಡು ಹೋಗಿ ಹೇಳಿಕೆ ಬರೆಸಿಕೊಳ್ಳುವುದು ಸರಿಯಲ್ಲ.
ಪೊಲೀಸರು ರಾತ್ರಿ ಪೂರ್ತಿ ತಿರುಗಾಡಿಸಿದ್ದಾರೆ ಎಂಬ ಆರೋಪದ ಬಗ್ಗೆ ಕೇಳಿದಾಗ, “ಪೊಲೀಸರು ಏನು ಮಾಡಿದ್ದಾರೆ ಗೊತ್ತಿಲ್ಲ. ಸುಮ್ಮನೆ ಆರೋಪ ಮಾಡುತ್ತಾರೆ. ಪೊಲೀಸರು ಬೇರೆಯವರಿಗಿಂತ ಹೆಚ್ಚು ಸೌಜನ್ಯ ತೋರಿದ್ದಾರೆ. ಪೊಲೀಸ್ ಠಾಣೆಯಲ್ಲಿ ಅವರ ಮನೆಯವರಿಗೆ ಅವಕಾಶ ನೀಡಲಿ. ಅದನ್ನು ಬಿಟ್ಟು ಖಾನಾಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕರನ್ನು ಬಿಟ್ಟುಕೊಂಡು ಬಿಜೆಪಿ ಸಭೆ ಮಾಡುವುದು ಎಷ್ಟು ಸರಿ? ಈ ವಿಚಾರದಲ್ಲಿ ಪೊಲೀಸರ ನಡೆ ಸರಿಯಿಲ್ಲ. ನಾವು ಪೊಲೀಸರ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿದ್ದರೂ ಅವರಿಗೆ ಯಾವುದೇ ತೊಂದರೆ ಆಗಲು ಅವಕಾಶ ನೀಡಿಲ್ಲ. ತಮ್ಮ ಶಾಸಕಿಗೆ ಅಪಮಾನ ಮಾಡಿದರೆ ಕ್ಷೇತ್ರದ ಜನ ರೊಚ್ಚಿಗೇಳುವುದು ಸಹಜ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಬಂಧನ-ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡೋದಿಲ್ಲ: ಸಿ.ಎಂ ಸ್ಪಷ್ಟ ನುಡಿ-ಅವಾಚ್ಯ ಪದ ಬಳದಿದ್ದು ಸುಳ್ಳಾಗಿದ್ದರೆ ಅರೆಸ್ಟ್ ಆಗ್ತಿತ್ತಾ ? ಸಿಎಂ ಪ್ರಶ್ನೆ
ಮಂಡ್ಯ: ಸಾಮಾನ್ಯವಾಗಿ ಯಾವ ಹೆಣ್ಣುಮಕ್ಕಳೂ ಇಂತಹ ಆರೋಪಗಳ ಬಗ್ಗೆ ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಅವಾಚ್ಯ ಪದ ಬಳಕೆ ಆರೋಪ ಸುಳ್ಳಾಗಿದ್ದರೆ ಸಿ.ಟಿ.ರವಿಯವರ ಬಂಧನವೇಕಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.
ಅವರು ಇಂದು ಸಿ.ಟಿ.ರವಿಯವರನ್ನು ಬೆಂಬಲಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವುದರ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.
ಹೆಣ್ಣುಮಕ್ಕಳಿಗೆ ಇಷ್ಟು ಕೆಟ್ಟ ಭಾಷೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಬಿಜೆಪಿಯವರು ಬೆಂಬಲಿಸುತ್ತಿದ್ದಾರೆ. ಸಿ.ಟಿ.ರವಿಯವರು ಕೀಳುಭಾಷೆ ಬಳಸಿದ್ದನ್ನು ಸ್ಥಳದಲ್ಲಿದ್ದವರು ಕೇಳಿಸಿಕೊಂಡಿದ್ದಾರೆ. ಅಷ್ಟು ಕೆಟ್ಟ ಮಾತು ಆಡಿರುವುದಕ್ಕೆ ಸಾಕ್ಷಿಯಾದ ಆಡಿಯೊ, ವಿಡಿಯೊ ಇದೆ ಎಂದು ಹೇಳಿದ್ದಾರೆ. ಆದರೆ ನಾನು ಅದನ್ನು ನೋಡಿಲ್ಲ. ರವಿ ಹೇಳಿದ್ದು ಸುಳ್ಳಾದರೆ, ಅವರ ಬಂಧನವೇಕಾಯಿತು ? ಸಾಮಾನ್ಯವಾಗಿ ಇಂತಹ ಆರೋಪಗಳ ಬಗ್ಗೆ ಹೆಣ್ಣುಮಕ್ಕಳು ಸುಳ್ಳು ದೂರು ಕೊಡುವುದಿಲ್ಲ. ಸಿ.ಟಿ.ಯವರು ಅವಾಚ್ಯ ಪದ ಏಕೆ ಬಳಸಿದರೆಂದು ನನಗೆ ತಿಳಿದಿಲ್ಲ. ಇದೊಂದು ಕ್ರಿಮಿನಲ್ ಅಪರಾಧ ಎಂದರು.
ಸಭಾಪತಿ ಬಸವರಾಜ ಹೊರಟ್ಟಿಯವರು , ಸಿಟಿ ರವಿಯವರು ಪ್ರಸ್ಟ್ರೇಷನ್ ಎಂಬ ಪದ ಬಳಸಿದ್ದಾರೆಂದು ತಿಳಿಸಿರುವ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಸಿ.ಟಿ.ರವಿಯವರು ತಾನು ‘ಪ್ರಸ್ಟ್ರೇಷನ್’ ಪದ ಬಳಸಿರುವುದಾಗಿ ತಿಳಿಸಿದ್ದಾರೆ. ಇದು after thought ಮಾತು. ಈಗ ಆ ರೀತಿ ಹೇಳುತ್ತಿದ್ದಾರೆ. ಆದರೆ ಅವಾಚ್ಯ ಪದ ಬಳಸಿರುವುದು ನಿಜವಾಗಿರುವುದಕ್ಕೇ ಸಚಿವರು ದೂರು ನೀಡಿದ್ದಾರೆ ಎಂದರು.
ರವಿ ಆಡಿದ ಕೆಟ್ಟ ಮಾತನ್ನು ಕೇಳಿರುವುದಾಗಿ ಇತರ ಸದಸ್ಯರೂ ಹೇಳಿದ್ದಾರೆ. ಸಭಾಪತಿಯವರು ಪೀಠದಿಂದ ಹೊರನಡೆದ ನಂತರ ನಡೆದಿರುವ ಘಟನೆ ಬಗ್ಗೆ ಆಡಿಯೋ ಮತ್ತು ವಿಡಿಯೋ ಇದೆ ಎಂದೂ ಹಲವರು ಹೇಳುತ್ತಿದ್ದು , ಪದಬಳಕೆಯಾಗಿರುವುದು ಸತ್ಯ ಎಂದರು.
ಸಿಟಿ ರವಿಯವರು ತನಗೆ ಜೀವಬೆದರಿಕೆಯಿದ್ದು, ಅದಕ್ಕೆ ಸರ್ಕಾರವೇ ಹೊಣೆ ಎಂದು ಹೇಳಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಎಫ್ ಐ ಆರ್ ದಾಖಲಾದ ಮೇಲೆ ಪೊಲೀಸರು ತನಿಖೆ ನಡೆಸಲೇಬೇಕಾಗುತ್ತದೆ. ಕಾನೂನಿನ ಕ್ರಮ ಮಾಡಲೇಬೇಕಾಗುತ್ತದೆ. ಸಿ.ಟಿ.ರವಿ ವಿರುದ್ಧ ಆಕ್ರೋಶಗೊಂಡಿದ್ದ ಜನರು ಬೆಳಗಾವಿಯಲ್ಲಿದ್ದ ಕಾರಣದಿಂದ ಸಿ.ಟಿ.ರವಿಯವರನ್ನು ರಕ್ಷಿಸಲು ಖಾನಾಪುರಕ್ಕೆ ಅವರನ್ನು ಕರೆತರಲಾಗಿತ್ತು ಎಂದರು.
ಮಂಡ್ಯದಲ್ಲಿ ನಡೆಯುತ್ತಿರುವ 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೆಳನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದೇನೆ. ಅಪ್ಪಟ ಕನ್ನಡ ನೆಲ ಮಂಡ್ಯ. ಮಂಡ್ಯಕ್ಕೆ ಬರುವ ಪರಭಾಷಿಕರು ಸಹ ಕನ್ನಡವನ್ನು ಕಲಿಯುತ್ತಾರೆ. ಕನ್ನಡ ನಾಡಿನ ಭಾಷೆ ,ರಾಜ್ಯಭಾಷೆ ಆಗಿದೆ ಎಂದರು.