ಯಲ್ಲಾಪುರ : ಶನಿವಾರ ಬೆಳಿಗ್ಗೆ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಚಂದ್ಗುಳಿ ವ್ಯಾಪ್ತಿಯ ಉಪಳೇಶ್ವರ ಹುತ್ಕಂಡ ಭಾಗದಲ್ಲಿ ನಡೆದಿದೆ.
ಈ ಭಾಗದಲ್ಲಿ ಮೂರು ಕರಡಿಗಳು ಸಂಚರಿಸುತ್ತಿದ್ದು ಶನಿವಾರ ಬೆಳಗ್ಗೆ ಏಳು ಗಂಟೆ ಹೊತ್ತಿಗೆ ಕಾರ್ಯನಿರ್ಮಿತ್ತ ದ್ವಿಚಕ್ರವಾಹನದಲ್ಲಿ ಚಂದ್ಗುಳಿ ಪಂಚಾಯತ್ ಸದಸ್ಯ ಹಾಗೂ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ ಅವರು ಕಸ ವಿಲೇವಾರಿ ಘಟಕದ ಬಳಿ ಮಾಯನಜಡ್ಡಿ ಮಾರ್ಗದಲ್ಲಿ ಸಾಗುತ್ತಿರುವಾಗ ಎರಡು ಕರಡಿಗಳು ಅವರ ಮೇಲೆ ದಾಳಿ ನಡೆಸಿವೆ. ಮೊದಲು ಅವರ ಕಾಲಿಗೆ ಗಾಯ ಮಾಡಿದ ಕರಡಿಗಳು ಗಾಯಗೊಳಿಸಿದವು. .ನಂತರ ಇವರು ಚೀರಾಡುತ್ತ ಬೈಕ್ ನಲ್ಲಿ ತಪ್ಪಿಸಿಕೊಂಡು ಹೋದಾಗಲೂ ಬೆಂಬಿಡದ ಕರಡಿಗಳು ಮುಂದೆ ಹೋಗಿ ಅಡ್ಡಗಟ್ಟಿ ಮುಖದ ಎರಡು ಭಾಗದ ಕೆನ್ನೆಗಳಿಗೆ, ಭುಜಕ್ಕೆ ಹಾಗೂ ಕಾಲಿನ ತೊಡೆಯ ಭಾಗಕ್ಕೆ ಪರಚಿ ಗಂಭೀರವಾಗಿ ಘಾಸಿಗೊಳಿಸಿದೆ. ಎರಡು ಕರಡಿಗಳ ಜೊತೆ ಒಂದು ಮರಿಯೂ ಇದೆ.
ನಿರ್ಜನ ಪ್ರದೇಶವಾದ ಕಾರಣ ಹೇಗೋ ಸಾಗಿ ಬಂದು ಸಮೀಪದ ಒಬ್ಬರ ಮನೆಗೆ ಹೋಗಿದ್ದಾರೆ. ನಂತರ ಕೆಲವರು ಆರ್.ಎಸ್.ಭಟ್ಟ ಅವರನ್ನು ತಕ್ಷಣದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಹೆಚ್ವಿನ ಚಿಕಿತ್ಸೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಆರ್.ಎಸ್..ಭಟ್ಟ ರವರಿಗೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದ ಸಂಗತಿ ತಿಳಿದ ಶಾಸಕ ಶಿವರಾಮ ಹೆಬ್ಬಾರ ಯಲ್ಲಾಪುರ ತಾಲೂಕಾಸ್ಪತ್ರೆಗೆ ತೆರಳಿ ಅವರನ್ನು ವಿಚಾರಿಸಿದ್ದಾರೆ.ಈ ಭಾಗದಲ್ಲಿ ಕರಡಿ, ಚಿರತೆಗಳ ಉಪಟಳ ಇತ್ತೀಚಿನ ದಿನದಲ್ಲಿ ವ್ಯಾಪಕವಾಗಿದ್ದು ರಾತ್ರಿಯಲ್ಲದೇ ಹಗಲಿನಲ್ಲಿನಲ್ಲಿಯೂ ನಿರ್ಜನ ಒಳ ರಸ್ತೆಗಳಲ್ಲಿ ಸಂಚರಿಸುವುದು ಭೀತಿ ಸೃಷ್ಟಿಸಿದೆ. ಶಾಲಾ ಮಕ್ಕಳು ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ದೂರದ ಹಳ್ಳಿಗಳಿಗೆ ಸಾಗಬೇಕಿದೆ. ಹೀಗಾಗಿ ಈ ಘಟನೆ ಈ ಭಾಗದ ಜನರಲ್ಲಿ ಭಯಕ್ಕೆ ಕಾರಣವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಇಲಾಖೆ ಜನರೊಡಗೂಡಿ ಕೂಡಲೇ ಕ್ರಮಕೂಗೊಳ್ಳಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಭಾರತೀಯ ಕಿಸಾನ್ ಸಂಘದ ಪ್ರಮುಖ ಗೋಪಾಲಕೃಷ್ಣ ರಾ ಬಾಳೆಗದ್ದೆ ತಾಲೂಕಾ ಘಟಕ, ಗ್ರಾಮ ಸಮಿತಿಗಳು ಸೇರಿದಂತೆ ಅನೇಕ ಸಂಘಟನೆಗಳು ಒತ್ತಾಯಿಸಿವೆ.