ಚೆನ್ನೈ : ಜಗತ್ತಿನಲ್ಲಿ ಈಗ ಎಲ್ಲೆಲ್ಲೂ ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ದೊಮ್ಮರಾಜು ಅವರದೇ ಸುದ್ದಿ. ಈ ಬಾರಿಯ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 18 ವರ್ಷದ ಗುಕೇಶ್ ಅವರು ವಿಶ್ವದ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಚೆನ್ನೈನವರಾದ ಗುಕೇಶ್‌ ಡಿ, ಚೆಸ್‌ ತರಬೇತಿ ಹಾಗೂ ಪ್ರಾಕ್ಟೀಸ್‌ಗೆ ತೊಂದರೆ ಆಗುತ್ತದೆ ಎಂಬಕಾರಣಕ್ಕೆ 4 ನೇ ಕ್ಲಾಸಿನಲ್ಲೇ ಸ್ಕೂಲ್ ಶಿಕ್ಷಣವನ್ನು ಡ್ರಾಪ್‌ಔಟ್ ಮಾಡಿದ್ದಾರೆ. ಉತ್ತಮ ತರಬೇತಿ ಹಾಗು ಶ್ರದ್ಧೆಯಿಂದ ಕಲಿತು ಗುಕೇಶ್‌ 2019ರಲ್ಲಿಯೇ ಚೆಸ್ ಗ್ರಾಂಡ್‌ ಮಾಸ್ಟರ್ ಪಟ್ಟ ಪಡೆದವರು.

ಇದೀಗ 2024ರಲ್ಲಿ ವರ್ಲ್ಡ್‌ ಚೆಸ್ ಚಾಂಪಿಯನ್ ಪಟ್ಟ ಪಡೆದುಕೊಂಡು ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಪಸರಿಸಿದ್ದಾರೆ. ಗುಕೇಶ್‌ ಇಂದು ಈ ಹಂತಕ್ಕೆ ಬರಲು ಕೇವಲ ಚೆಸ್ ಪ್ರಾಕ್ಟೀಸ್ ಮಾತ್ರ ಕಾರಣವಲ್ಲ ಅಂತಿದಾರೆ ಅವರ ಟ್ರೈನಿಂಗ್ ಟೀಚರ್ಸ್ ಹಾಗೂ ಆಪ್ತರು. ಹಾಗಿದ್ದರೆ ಗುಕೇಶ್ ದೊಮ್ಮರಾಜು ಅವರು ಚೆಸ್ ಆಟದ ಜೊತೆ ಇನ್ನೇನು ಮಾಡುತ್ತಿದ್ದರು? ಇದಕ್ಕೆ ಉತ್ತರವನ್ನು ಸ್ವತಃ ಗುಕೇಶ್ ಅವರೇ ತಮ್ಮ ಹಲವಾರು ಸಂದರ್ಶನಗಳಲ್ಲಿ ನೀಡಿದ್ದಾರೆ.

ಗುಕೇಶ್ ಡಿ ಅವರು ತಮ್ಮ ಹಲವಾರು ಇಂಟರ್‌ವ್ಯೂಗಳಲ್ಲಿ ಮಾತನಾಡುತ್ತ ‘ನಾನು ಚಿಕ್ಕಂದಿನಿಂದಲೂ ಯೋಗ ಹಾಗೂ ಧ್ಯಾನವನ್ನು ರೆಗ್ಯುಲರ್ ಆಗಿ ಮಾಡುತ್ತಿದ್ದೇನೆ. ಈಗಲೂ ಅಷ್ಟೇ, ದಿನಾಲೂ ಯೋಗ ಹಾಗೂ ಮೆಡಿಟೇಶನ್‌ಗಳನ್ನು ನಾನು ತಪ್ಪಿಸುವುದಿಲ್ಲ ಎಂದಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಸಮಯದಲ್ಲಿ ಆಟಕ್ಕೆ ಕೆಲವೇ ಕ್ಷಣಗಳ ಮೊದಲು ಧ್ಯಾನ ಮಾಡಿದ್ದನ್ನು ಹಲವಾರು ಜನರು ಗಮನಿಸಿದ್ದಾರೆ.

ಗುಕೇಶ್ ಅವರು ತಮ್ಮ ಚೆಸ್ ಪಂದ್ಯಾಟದ ವೇಳೆಯಲ್ಲಿ, ನಾರ್ವೆಯಲ್ಲಾಗಲೀ ಅಥವಾ ಸಿಂಗಪುರದಲ್ಲಾಗಲೀ ಕ್ಯಾಮೆರಾ ಮುಂದೆಯೇ ಧ್ಯಾನವನ್ನು ಮಾಡಿದ್ದಾರೆ. ಅದು ಅವರ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದೆ ಎನ್ನಬಹುದು. ಅವರೇ ಹೇಳುವಂತೆ, ಧ್ಯಾನ ಹಾಗೂ ಯೋಗ ಅವರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದಲೇ ಕೇವಲ 18 ವರ್ಷ ವಯಸ್ಸಿಗೇ ವಿಶ್ವ ಚಾಂಪಿಯನ್ ಆಗಿ ದಾಖಲೆ ನಿರ್ಮಿಸಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಭಾರತದ ನೆಲದಲ್ಲಿ ಹುಟ್ಟಿದ ಧ್ಯಾನ, ಯೋಗ ಎಲ್ಲವೂ ಇಂದು ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಅಷ್ಟೇ ಅಲ್ಲ, ಹಲವಾರು ಮೇಧಾವಿಗಳು, ಸಮಾಜದ ಗಣ್ಯ ವ್ಯಕ್ತಿಗಳು ಹಾಗೂ ಸಾಧಕರು ಈ ಯೋಗ, ಯೋಗಾಸನ, ಪ್ರಾಣಾಯಮಗಳು ಹಾಗೂ ಧ್ಯಾನಗಳಿಂದ ಅಪಾರ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಅದನ್ನು ನೇರವಾಗಿ ಸಾಧಕರು ಹೇಳುತ್ತಿದ್ದಾರೆ. ಇಂದು ಯೋಗ-ಧ್ಯಾನವು ಜಾಗತಿಕ ಮಟ್ಟದಲ್ಲಿ ತನ್ನ ಪ್ರಯೋಜನವನ್ನು ಸಾಬೀತು ಪಡಿಸುತ್ತಿದೆ ಎನ್ನಬಹುದು.