ಮಂಗಳೂರು : ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ತನಿಖಾ ತಂಡದಿಂದಾಗಿ ಬಿಜೆಪಿ ಮುಖಂಡ ದಿ. ಪ್ರವೀಣ್‌ ನೆಟ್ಟಾರು ಪ್ರಕರಣ ಭೇದಿಸಿ 20 ಮಂದಿ ಸಮಾಜಘಾತುಕ ಶಕ್ತಿಗಳ ಹೆಡೆಮುರಿ ಕಟ್ಟುವುದಕ್ಕೆ ಸಾಧ್ಯವಾಗಿದೆ. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ಕಾರ್ಯಕರ್ತರಿಗೆ ರಕ್ಷಣೆ ದೊರೆಯಬೇಕಾದರೆ ಕರಾವಳಿಯಲ್ಲಿ ಸ್ಲೀಪರ್‌ ಸೆಲ್‌ನಂತೆ ಇರುವ ದೇಶದ್ರೋಹಿಗಳ ಕೃತ್ಯ ಮಟ್ಟ ಹಾಕುವುದಕ್ಕೆ ಕರಾವಳಿಗೆ ಸದಾ ಎನ್‌ಐಎ ಸಂಸ್ಥೆಯ ಬಲಬೇಕಿದೆ. ಈ ಬಗ್ಗೆ ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದು ಸಂಸದ ಕ್ಯಾ.ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡಿ ದಕ್ಷಿಣ ಕನ್ನಡ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ಕಟ್ಟುವ ಮೂಲಕ ಅಭಿವೃದ್ಧಿಯನ್ನು ಹಳಿತಪ್ಪಿಸಲು ನೋಡುತ್ತಿರುವ ದುಷ್ಟ ಶಕ್ತಿಗಳ ನಿಯಂತ್ರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಮಂಗಳೂರನ್ನು ಕೇಂದ್ರೀಕರಿಸಿ ಈ ಭಾಗದಲ್ಲಿ ಎನ್‌ಐಎ ಘಟಕ ಸ್ಥಾಪಿಸಬೇಕೆಂದು ಮತ್ತೊಮ್ಮೆ ಆಗ್ರಹಿಸುತ್ತಿದ್ದೇನೆ. ಸ್ಲೀಪರ್‌ ಸೆಲ್‌ಗಳಿಗೆ ಕುಮ್ಮಕ್ಕು ಮತ್ತು ಉತ್ತೇಜನ ನೀಡುತ್ತಿರುವ ಡ್ರಗ್ಸ್‌ ಮಾಫಿಯಾವನ್ನೂ ಬೇರು ಸಮೇತ ಕಿತ್ತೆಸೆಯುವುದಕ್ಕೆ ಮಂಗಳೂರಿನಲ್ಲಿ ಆದಷ್ಟು ಬೇಗ ಎನ್‌ಐಎ ಘಟಕ ಸ್ಥಾಪನೆಯಾಗಬೇಕು. ಈ ಸಂಬಂಧ ಸಂಸದನಾಗಿ ನಾನು ಕೂಡ ಶಕ್ತಿಮೀರಿ ಎಲ್ಲ ರೀತಿಯ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.

ದಿ. ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳ ಪೈಕಿ ಓರ್ವನಾದ ಬಂಟ್ವಾಳ ತಾಲೂಕಿನ ಕೊಡಾಜೆ ಮೊಹಮ್ಮದ್‌ ಶರೀಫ್‌ನನ್ನು ಎನ್‌ಐಎ ಬಂಧಿಸಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದಲ್ಲಿ ಇನ್ನು ಕೂಡ ತಲೆಮರೆಸಿಕೊಂಡಿರುವ ಕೆಲವು ಆರೋಪಿಗಳನ್ನು ಎನ್‌ಐಎ ತಂಡ ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ತಮಗಿದೆ ಎಂದು ಕ್ಯಾ. ಬ್ರಿಜೇಶ್‌ ಚೌಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.