ಹುಬ್ಬಳ್ಳಿ: ಅನಿಲ ಸಿಲಿಂಡರ್ ಸ್ಫೋಟಗೊಂಡು 9 ಮಂದಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗಾಯಗೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಸಾಯಿನಗರದ ಅಚ್ಚವ್ವನ ಕಾಲೊನಿಯ ಈಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಅಡುಗೆ ಅನಿಲದ ಸಿಲಿಂಡರ್ ಸ್ಫೋಟದಿಂದ 9 ಅಯ್ಯಪ್ಪ ಮಾಲಾಧಾರಿಗಳು ತೀವ್ರ ಗಾಯಗೊಂಡಿದ್ದಾರೆ.

ಬಹುತೇಕ ಎಲ್ಲರ ದೇಹ ಶೇ 50 ರಷ್ಟು ಸುಟ್ಟು ಹೋಗಿದ್ದು, 58 ವರ್ಷದ ಅಜ್ಜಾಸ್ವಾಮಿ ಎಂಬವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಗಾಯಗೊಂಡ ಮಾಲಾಧಾರಿಗಳನ್ನು ಕೆಎಂಸಿ-ಆರ್‌ಐಗೆ ದಾಖಲಿಸಲಾಗಿದೆ.

ವರದಿ ಪ್ರಕಾರ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.
ಗಾಯಾಳುಗಳನ್ನು ರಾಜು ಹರ್ಲಾಪುರ(21), ಸಂಜಯ ಸವದತ್ತಿ(20), ವಿನಾಯಕ ಬಾತಕೇರ(12), ಪ್ರಕಾಶ ಬಾತಕೇರ(42), ಮಂಜು ತೋರದ(22), ಅಜ್ಜಾಸ್ವಾಮಿ(58), ಪ್ರವೀಣ ಚಲವಾದಿ(24), ತೇಜಸ್ ರೆಡ್ಡಿ(26) ಮತ್ತು ಶಂಕರ ರಾಯನಗೌಡ್ರ(29) ಎಂದು ಗುರುತಿಸಲಾಗಿದೆ.

ಅಯ್ಯಪ್ಪ ಮಾಲೆ ಧರಿಸಿ ವೃತ ಅಚರಿಸುತ್ತಿದ್ದ ಇವರು, ಈಶ್ವರ ದೇವಸ್ಥಾನದಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ ಮಲಗಿದ್ದಾಗ ಮಾಲಾಧಾರಿಯೊಬ್ಬರ ಕಾಲು ಸಿಲಿಂಡರ್‌ಗೆ ತಾಗಿ ಅದು ಉರುಳಿ ಬಿದ್ದಿದೆ. ಈ ವೇಳೆ ರೆಗ್ಯೂಲೇಟರ್ ಸಡಿಲಗೊಂಡು ಗ್ಯಾಸ್ ಸೋರಿಕೆಯಾಗಿದ್ದು, ಗ್ಯಾಸ್‌ ಸೋರಿಕೆಯಿಂದಾಗಿ ದೇವಸ್ಥಾನದಲ್ಲಿ ಹಚ್ಚಿದ್ದ ದೀಪದಿಂದ ಬೆಂಕಿ ಹೊತ್ತುಕೊಂಡು ಉರಿದಿದ್ದು ಸಿಲಿಂಡರ್ ಸ್ಫೋಟವಾಗಿದೆ. ಸ್ಥಳೀಯರು ಅಯ್ಯಪ್ಪ ಮಾಲಾಧಾರಿಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಘಟನಾ ಸ್ಥಳಕ್ಕೆ ಡಿಸಿಪಿ ನಂದಗಾವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.