ನವದೆಹಲಿ: 5 ಮತ್ತು 8ನೇ ತರಗತಿ ಪರೀಕ್ಷೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ಇನ್ನು ಮುಂದೆ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಫೇಲ್ ಆದರೆ ಅದೇ ತರಗತಿಯಲ್ಲೇ ಓದಬೇಕಾಗುತ್ತದೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು (RTE) ಕಾಯ್ದೆ ನಿಯಮಗಳು – 2010 ಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ. ಹೊಸ ನಿಯಮಗಳ ಪ್ರಕಾರ 5 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸುವ ಅಧಿಕಾರವನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ನೀಡಿದೆ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಆದರೆ ಅವರು ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುತ್ತದೆ.
ವಿದ್ಯಾರ್ಥಿ 5 ಮತ್ತು 8 ನೇ ತರಗತಿಯಲ್ಲಿ ಫೇಲ್ (Fail) ಆದರೆ ಫಲಿತಾಂಶ ಪ್ರಕಟವಾದ 2 ತಿಂಗಳ ಒಳಗಡೆ ಮತ್ತೊಮ್ಮೆ ಪರೀಕ್ಷೆ (Exam) ಬರೆಯಬೇಕಾಗುತ್ತದೆ. ಈ ಪರೀಕ್ಷೆಯಲ್ಲೂ ಫೇಲ್ ಆದರೆ ಆ ವಿದ್ಯಾರ್ಥಿ ಅದೇ ತರಗತಿಯಲ್ಲೇ ಓದಬೇಕಾಗುತ್ತದೆ. ಆದರೆ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ವಿದ್ಯಾರ್ಥಿಯನ್ನು ಶಾಲೆಗಳು ಹಾಕುವಂತಿಲ್ಲ ಎಂದು ಶಿಕ್ಷಣ ಸಚಿವಾಲಯ ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಮತ್ತು ಸೈನಿಕ ಶಾಲೆಗಳು ಸೇರಿದಂತೆ ಕೇಂದ್ರ ಸರ್ಕಾರವು ನಡೆಸುತ್ತಿರುವ 3,000 ಕ್ಕೂ ಹೆಚ್ಚು ಶಾಲೆಗಳಿಗೆ ಅಧಿಸೂಚನೆಯು ಅನ್ವಯವಾಗುತ್ತದೆ.
ಶಾಲಾ ಶಿಕ್ಷಣ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿರುವ ಕಾರಣ ರಾಜ್ಯಗಳು ಈ ವಿಷಯದಲ್ಲಿ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಈಗಾಗಲೇ ದೆಹಲಿ ಸೇರಿದಂತೆ 16 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳು ಈ ನಿಯಮವನ್ನು ಜಾರಿ ಮಾಡಿದೆ. ಹರಿಯಾಣ ಮತ್ತು ಪುದುಚೇರಿ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಆದರೆ ಉಳಿದ ರಾಜ್ಯಗಳು ಮತ್ತು ಕೆಂದ್ರಾಡಳಿತ ಪ್ರದೇಶಗಳ ಈ ನೀತಿಯನ್ನು ಮುಂದುವರಿಸಲು ನಿರ್ಧರಿಸಿವೆ ಎಂದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.