ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ವಿಧಾನ ಪರಿಷತ್ತಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎನ್ನಲಾದ ಆರೋಪಿತ ಪ್ರಕರಣವು ಮುಗಿದ ಅಧ್ಯಾಯವಾಗಿದ್ದು, ಸದನದೊಳಗೆ ನಡೆದಿರುವ ವಿಚಾರದಲ್ಲಿ ಪೊಲೀಸರಿಗೆ ಕ್ರಮ ಕೈಗೊಳ್ಳಲು ಅಧಿಕಾರವಿಲ್ಲ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ನಡೆದ ಘಟನೆಯನ್ನು ಕೂಲಂಕಷವಾಗಿ ಚರ್ಚಿಸಲಾಗಿದೆ. ಈ ಪ್ರಕರಣ ಮುಗಿದ ಅಧ್ಯಾಯವಾಗಿದೆ. ಎಂದು ಹೇಳಿದರು.
‘ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ನಂತರ ಸಿಟಿ ರವಿ ಅವರನ್ನು ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಿ ಬಂಧಿಸಲಾಗಿದೆ. ನಾವು ಎರಡೂ ಕಡೆಯಿಂದ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ. ಈ ಬಗ್ಗೆ ದೂರು ನೀಡಿದರೆ, ಕ್ರಮ ಕೈಗೊಳ್ಳುತ್ತೇವೆ. ಪರಿಷತ್ತಿನ ಒಳಗೆ ನಡೆದ ಘಟನೆಯಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಬಾರದು, ಸದನದೊಳಗೆ ನಡೆದಿರುವ ವಿಚಾರದಲ್ಲಿ ಪೊಲೀಸರ ಹಸ್ತಕ್ಷೇಪಕ್ಕೆ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದ್ದಾರೆ.
‘ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಪರಿಷತ್ತಿನ ಒಳಗೆ ಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ವೀಡಿಯೊ ಮತ್ತು ಆಡಿಯೋ ರೆಕಾರ್ಡಿಂಗ್ ಲಭ್ಯವಿದ್ದರೆ ಈ ವಿಷಯವನ್ನು ಪರಿಗಣಿಸಲಾಗುತ್ತದೆ. ಯಾವುದೇ ಪಕ್ಷಗಳು ವೀಡಿಯೋ ಅಥವಾ ಆಡಿಯೋ ಒದಗಿಸಿದರೆ, ನಾವು ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್ಎಲ್) ಕಳುಹಿಸಲಾಗುತ್ತದೆ. ಆ ದಿನ ಅಧಿವೇಶನ ಮುಗಿದ ನಂತರ ಯಾವುದೇ ವೀಡಿಯೊ ರೆಕಾರ್ಡಿಂಗ್ ಮಾಡಿಲ್ಲ’ ಎಂದು ಹೇಳಿದರು.