ಬೆಂಗಳೂರು: ಚಿನ್ನ ಖರೀದಿಸಿ ಹಣ ಕೊಡದೇ ವಂಚಿಸಿದ ಮಾಜಿ ಸಚಿವ ವರ್ತೂರ್‌ ಪ್ರಕಾಶ್ ಆಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆ ನಿವಾಸಿ ಶ್ವೇತಾ ಗೌಡ ಬಂಧಿತ ಮಹಿಳೆ. ಚಿನ್ನಾಭರಣ ಮಳಿಗೆಯಲ್ಲಿ ಗಣ್ಯರ ಹೆಸರು ಬಳಸಿಕೊಂಡು ಕೋಟ್ಯಂತರ ಮೌಲ್ಯದ ಆಭರಣ ಖರೀದಿಸಿದ ಶ್ವೇತಾ ಹಣ ಪಾವತಿಸದೇ ವಂಚಿಸಿದ ಆರೋಪ ಕೇಳಿ ಬಂದಿದೆ. 2.945 ಕೇಜಿ ಚಿನ್ನ ಖರೀದಿಸಿದ ಶ್ವೇತಾ ಗೌಡ 2.42 ಕೋಟಿ ರೂಪಾಯಿ ಮೋಸ ಮಾಡಿದ ಆರೋಪ ಕೇಳಿ ಬಂದಿದೆ. ಹಣ ಪಾವತಿಸದ ಹಿನ್ನೆಲೆ ಪುಲಿಕೇಶಿನಗರ ಉಪ ವಿಭಾಗದ ಪೊಲೀಸರು ಶ್ವೇತಾಳನ್ನು ಬಂಧಿಸಿದ್ದಾರೆ. ಅಲ್ಲದೇ ಆಕೆಯ ಬಳಿ ಇದ್ದ ಚಿನ್ನ ಹಾಗೂ ಕಾರು ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಅವಿನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್‌ ಮಳಿಗೆಯಲ್ಲಿ ಸುಮಾರು 2.42 ಕೋಟಿ ರು. ಮೌಲ್ಯದ ಆಭರಣವನ್ನು ಖರೀದಿಸಿದ ಶ್ವೇತಾ ಹಣ ನೀಡದೇ ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನಿಖೆಗೆ ಇಳಿದ ಎಸಿಪಿ ಗೀತಾ ನೇತೃತ್ವದ ತಂಡ ಆಕೆಯನ್ನು ಮೈಸೂರಿನಲ್ಲಿ ಬಂಧಿಸಿ ಕರೆತಂದಿದ್ದಾರೆ. ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಶ್ವೇತಾ ಗೌಡ ಸುಲಭವಾಗಿ ಹಣ ಸಂಪಾದಿಸಲು ಅಡ್ಡದಾರಿ ಹಿಡಿದಿದ್ದಳು. ತಾನು ಚಿನ್ನಾಭರಣ ವ್ಯಾಪಾರ ಮಾಡುವುದಾಗಿ ಹೇಳಿ ಕೆಲ ಚಿನ್ನದ ವ್ಯಾಪಾರಿಗಳಿಂದ ಸಗಟು ದರದಲ್ಲಿ ಆಭರಣ ಖರೀದಿಸಿ ವಂಚಿಸಿದ್ದರು. ಈ ಹಿಂದೆಯೂ ಇದೇ ರೀತಿ ಆರೋಪಿ ಶ್ವೇತಾ ಚಿನ್ನದ ವ್ಯಾಪಾರಿಯೊಬ್ಬರಿಗೆ ವಂಚಿಸಿದ್ದು, ಯಲಹಂಕ ಪೊಲೀಸರು ಆಕೆಯನ್ನು ಆಗ ಬಂಧಿಸಿದ್ದರು. ಆದರೆ ಜಾಮೀನು ಪಡೆದು ಹೊರ ಬಂದ ಶ್ವೇತಾ ಮತ್ತದೇ ಚಾಳಿ ಮುಂದುವರೆಸಿದ್ದರು.

ಕೆಲ ದಿನಗಳ ಹಿಂದೆ ಕಮರ್ಷಿಯಲ್‌ ಮುಖ್ಯರಸ್ತೆಯ ನವರತ್ನ ಜ್ಯುವೆಲ್ಸ್‌ ಮಾಲೀಕ ಸಂಜಯ್ ಭಾಪ್ನ ಭೇಟಿಯಾಗಿದ್ದ ಶ್ವೇತಾಗೌಡ ತಾನು ಚಿನ್ನಾಭರಣ ವ್ಯಾಪಾರ ಆರಂಭಿಸುತ್ತಿದ್ದೇನೆ. ನಿಮ್ಮಿಂದಲೇ ಆಭರಣ ಖರೀದಿಸುತ್ತೇನೆ ಎಂದಿದ್ದರು. ಇದಕ್ಕೆ ಸಂಜಯ್ ಭಾಪ್ನ ಸಹ ಒಪ್ಪಿಕೊಂಡಿದ್ದರು. ಅಲ್ಲದೇ ಆಕೆಯ ಮಾತು ನಂಬಿ ಆರಂಭದಲ್ಲಿ ಎರಡ್ಮೂರು ಬಾರಿ ಶ್ವೇತಾ ನೀಡಿದ್ದ ಮನೆ ವಿಳಾಸಕ್ಕೆ ಚಿನ್ನಾಭರಣ ಕಳುಹಿಸಿದ್ದರು. ಹೀಗೆ ಜ್ಯುವೆಲ್ಲರಿ ಮಾಲೀಕರಿಂದ ವಿಶ್ವಾಸಗಳಿಸಿದ ಶ್ವೇತಾ ಕೊನೆಗೆ ನವರತ್ನ ಜ್ಯುವೆಲರ್ಸ್‌ನಲ್ಲಿ 2.42 ಕೋಟಿ ರು. ಮೌಲ್ಯದ 2.945 ಕೆಜಿ ಚಿನ್ನ ಹಾಗೂ ವಜ್ರಾಭರಣ ಖರೀದಿಸಿ ವಂಚಿಸಿದ್ದಳು.

ಒಂದೋ ಚಿನ್ನ ಮರಳಿಸಿ ಇಲ್ಲ ಹಣ ಪಾವತಿಸುವಂತೆ ಕೇಳಿದ್ದ ಚಿನ್ನದ ವ್ಯಾಪಾರಿಗೆ ಆಕೆ ಧಮ್ಕಿ ಸಹ ಹಾಕಿದ್ದಳು. ಈ ಬಗ್ಗೆ ಜ್ಯುವೆಲರ್ಸ್‌ನ ಮಾಲೀಕ ಸಂಜಯ್‌ ಭಾಪ್ನ ಕಮರ್ಷಿಯಲ್‌ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ರು. ಬಳಿಕ ಪುಲಿಕೇಶಿನಗರ ಉಪ ವಿಭಾಗದ ಎಸಿಪಿ ಗೀತಾ ತನಿಖೆ ಕೈಗೆತ್ತಿಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಾದ ಕೂಡಲೇ ಶ್ವೇತಾಗೌಡ ನಗರ ತೊರೆದು ಪರಾರಿಯಾಗಲು ಯತ್ನಿಸಿದ್ದಳು. ಕೋಲಾರ ಜಿಲ್ಲೆಯ ಬಿಜೆಪಿ ಮುಖಂಡರೊಬ್ಬರಿಗೆ ಸೇರಿದ ಕಾರಿನಲ್ಲಿ ಶ್ವೇತಾ ಮೈಸೂರಿಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ಆಕೆಯನ್ನು ಬಂಧಿಸಿದ್ದಾರೆ. ಅಲ್ಲದೇ ವರ್ತೂರು ಪ್ರಕಾಶ್‌ ವಿಚಾರಣೆಗೂ ನೋಟಿಸ್ ಜಾರಿ ಮಾಡಲಾಗಿದೆ. ಏಕೆಂದರೆ ಶ್ವೇತಾ ಮಾಜಿ ಸಚಿವರ ಮನೆ ವಿಳಾಸವನ್ನೇ ಸಿಬ್ಬಂದಿಗೆ ಕೊಟ್ಟಿದ್ದಳು. ಹಾಗಾಗಿ ಈ ಪ್ರಕರಣದಲ್ಲಿ ಮಾಜಿ ಸಚಿವರಿಗೆ ಸಹ ತನಿಖೆ ಸಂಕಷ್ಟ ಎದುರಾಗಿದೆ.

ಹಲವು ಸ್ಪೋಟಕ ಮಾಹಿತಿ ಬಹಿರಂಗ :

ವಂಚಕಿ ಶ್ವೇತಾ ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿಗಳು ಬಹಿರಂಗವಾಗಿದೆ. ಶ್ವೇತಾಗೌಡ ಹಾಗೂ ವರ್ತೂರು ಪ್ರಕಾಶ್‌ಗೆ ನಿಕಟ ನಂಟಿರುವುದು ಪತ್ತೆಯಾಗಿದೆ. ಇಬ್ಬರೂ ಹಲವು ಬಾರಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದಿದ್ದಾರೆ. ಅಚ್ಚರಿ ಅಂದ್ರೆ ವರ್ತೂರು ಪ್ರಕಾಶ್‌, ಶ್ವೇತಾ ಗೌಡ ಜೊತೆಗೆ ಎಂಗೇಜ್ ಮೆಂಟ್ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದು ಎಂದು ತಿಳಿದುಬಂದಿದೆ. ತಿರುಪತಿಯಲ್ಲಿ ಎಂಗೇಜ್‌ಮೆಂಟ್‌ ಮಾಡಿಕೊಳ್ಳಲು ಟಿಕೆಟ್ ಸಹ ಬುಕ್ ಮಾಡಿರುವುದು ಬಹಿರಂಗವಾಗಿದೆ. ಇದಕ್ಕೆ ಪೂರಕವಾಗಿ ಶ್ವೇತಾ ಮೊಬೈಲ್‌ನಲ್ಲಿ ಹಲವು ಫೋಟೋ ಸಾಕ್ಷ್ಯಗಳು ಸಿಕ್ಕಿವೆ. 3 ಚಿನ್ನದ ಅಂಗಡಿ ಮಾಲೀಕರ ಜ್ಯುವೆಲ್ಲರಿ ಶಾಪ್‌ಗೆ ಶ್ವೇತಾ ಜೊತೆ ವರ್ತೂರು ಪ್ರಕಾಶ್ ಹೋಗಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಅಲ್ಲದೇ ವರ್ತೂ‌ರ್ ಪ್ರಕಾಶ್‌, ಎಂಗೇಜ್‌ಮೆಂಟ್ ವೇಳೆ ಹಾಕಬೇಕಿದ್ದ ಉಂಗುರದ ಫೋಟೋವನ್ನು ಸಹ ಶ್ವೇತಾಗೆ ಕಳುಹಿಸಿರುವುದು ಪತ್ತೆಯಾಗಿದೆ.

ಗುಲಾಬ್ ಜಾಮೂನ್ ಎಂದು ನಂಬ‌ರ್ ಸೇವ್:
6 ತಿಂಗಳ ಹಿಂದೆಯಷ್ಟೇ ಶ್ವೇತಾ, ವರ್ತೂರು ಪ್ರಕಾಶ್‌ಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಳು, ತಾನೇ ರಿಕ್ವೆಸ್ಟ್ ಕಳಿಸಿ ಸ್ನೇಹದ ಬಲೆಗೆ ಬೀಳಿಸಿಕೊಂಡಿದ್ದಳು. ಬಳಿಕ ಮೆಸೆಂಜರ್‌ನಲ್ಲಿ ಚಾಟಿಂಗ್ ಶುರುವಾಗಿ ಇಬ್ಬರೂ ಮೊಬೈಲ್ ನಂಬರ್‌ ವಿನಿಮಯ ಮಾಡಿಕೊಂಡಿದ್ದಾರೆ. ಬಳಿಕ ವಾಟ್ಸಪ್‌ನಲ್ಲೂ ಚಾಟಿಂಗ್ ಮುಂದುವರಿದಿದೆ. ಶ್ವೇತಾ ವರ್ತೂರು ಪ್ರಕಾಶ್ ನಂಬ‌ರ್ ಅನ್ನು ಗುಲಾಬ್ ಜಾಮೂನ್ ಎಂಬ ಹೆಸರಿನಿಂದ ಸೇವ್ ಮಾಡಿಕೊಂಡಿದ್ದಳು ಎನ್ನುವ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.