ಸಂಭಲ್(ಉತ್ತರ ಪ್ರದೇಶ): ಶಾಹಿ ಜಮಾ ಮಸೀದಿಯ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. 2025 ರ ಜನವರಿಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಕೋರ್ಟ್ ನೇಮಿಸಿರುವ ಕಮಿಷನರ್ ರಮೇಶ್ ಸಿಂಗ್ ರಾಘವ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾಘವ್, ಸಮೀಕ್ಷೆಯ ವರದಿ ಅಂತಿಮ ಹಂತದಲ್ಲಿದೆ, ಬಹುತೇಕ ಪೂರ್ಣಗೊಂಡಿದೆ. ಕೆಲ ತಾಂತ್ರಿಕ ಸಮಸ್ಯೆಗಳಿದ್ದು, ಮಂಗಳವಾರ ಅವುಗಳನ್ನು ಸರಿಪಡಿಸಲಾಗುವುದು. ಮಂಗಳವಾರದಿಂದ ಕೋರ್ಟ್ ಕೆಲಸಗಳಿಗೆ ರಜೆ ಇರಲಿದೆ. ಈ ವಿಚಾರವಾಗಿ ಜನವರಿ 6 ರವರೆಗೆ ವಿಚಾರಣಾ ನ್ಯಾಯಾಲಯ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಜನವರಿ 2 ಅಥವಾ 3ರಂದು ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮೊಘಲ್ ರಾಜ ಬಾಬರ್ 1526ರಲ್ಲಿ ದೇಗುಲವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂಬ ಅರ್ಜಿಯ ವಿಚಾರಣೆ ನಡೆಸಿದ್ದ ಸ್ಥಳೀಯ ಕೋರ್ಟ್, ಕಮಿಷನರ್ ಅವರು ಮಸೀದಿಯ ಸಮೀಕ್ಷೆ ನಡೆಸಬೇಕು ಎಂದು ನವೆಂಬರ್ 19 ರಂದು ಆದೇಶ ನೀಡಿತ್ತು.
ನವೆಂಬರ್ 29 ರಂದು ಸುಪ್ರೀಂ ಕೋರ್ಟ್, ಪ್ರಕರಣದ ವಿಚಾರಣೆ ಮತ್ತು ಸಮೀಕ್ಷೆ ಕಾರ್ಯವನ್ನು ನಿಲ್ಲಿಸಲು ನ್ಯಾಯಾಲಯ ಸೂಚಿಸಿತ್ತು.